ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಬಾಗಿಲಿಗೆ ಪಶು ಸೇವಾ ಸೌಲಭ್ಯ: ಸಚಿವ ಪ್ರಭು ಚವಾಣ್

ಪ್ರತಿ ತಾಲ್ಲೂಕಿನಲ್ಲಿ 20 ಗ್ರಾಮಗಳ ಆಯ್ಕೆ: 500 ಜಾನುವಾರುಗಳಿಗೆ ಕೃತಕ ಗರ್ಭಧಾರಣೆ
Last Updated 2 ಆಗಸ್ಟ್ 2020, 16:25 IST
ಅಕ್ಷರ ಗಾತ್ರ

ಔರಾದ್: ‘ಪಶು ಸಂತತಿ ಪೋಷಣೆ ಮತ್ತು ಸಂರಕ್ಷಣೆಗಾಗಿ ಸರ್ಕಾರ ರೈತರ ಮನೆ ಬಾಗಿಲಿಗೆ ಪಶು ಸೇವಾ ಸೌಲಭ್ಯ ಕಲ್ಪಿಸಿದೆ’ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ತಿಳಿಸಿದರು.

ತಾಲ್ಲೂಕಿನ ಬೋಂತಿ ತಾಂಡಾದಲ್ಲಿ ರಾಷ್ಟ್ರೀಯ ಪಶುರೋಗ ನಿಯಂತ್ರಣ ಮತ್ತು ಕೃತಕ ಗರ್ಭಧಾರಣೆ ಯೋಜನೆಯ ಎರಡನೇ ಹಂತದ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಭಾರತೀಯ ಗೋ ತಳಿಯಲ್ಲಿ ಅದ್ಭುತ ಶಕ್ತಿ ಇದೆ. ಇಂಥ ತಳಿ ಅಭಿವೃದ್ಧಿಪಡಿಲು ಸರ್ಕಾರ ಯೋಜನೆ ರೂಪಿಸಿದೆ. ಈ ಹಂತದಲ್ಲಿ ಪ್ರತಿ ತಾಲ್ಲೂಕಿನ 20 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಒಂದೊಂದು ಗ್ರಾಮದಲ್ಲಿ 500 ಜಾನುವಾರುಗಳನ್ನು ಕೃತಕ ಗರ್ಭಧಾರಣೆಗೆ ಒಳಪಡಿಸಲಾಗುವುದು’ ಎಂದು ತಿಳಿಸಿದರು.

‘ರೈತರ ಮನೆ ಬಾಗಿಲಿಗೆ ಸೇವೆ ಕೊಡುವ ನಿಟ್ಟಿನಲ್ಲಿ ಸರ್ಕಾರ ಪ್ರಥಮ ಹಂತದಲ್ಲಿ 17 ಜಿಲ್ಲೆಯಲ್ಲಿ ಅಂಬುಲೆನ್ಸ್ ಸೇವೆ ಸಿಗಲಿದೆ. ಅದರಲ್ಲಿ ಬೀದರ್ ಜಿಲ್ಲೆಯೂ ಸೇರಿದ್ದು, ಇನ್ನು ಮುಂದೆ ರೈತರು ಕರೆ ಮಾಡಿದರೆ ತಮ್ಮ ಮನೆ ತನಕ ಜಾನುವಾರುಗಳಿಗೆ ಚಿಕಿತ್ಸಾ ಸೌಲಭ್ಯ ಸಿಗಲಿದೆ’ ಎಂದು ಹೇಳಿದರು.

‘ಭಾರತೀಯ ಸಂಸ್ಕೃತಿಯಲ್ಲಿ ಗೋವುಗಳಿಗೆ ಪೂಜ್ಯನೀಯ ಸ್ಥಾನ ಇದೆ. ಅವುಗಳ ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಲಾಗುವುದು. ಈಗಾಗಲೇ ಗುಜರಾತ್, ಉತ್ತರ ಪ್ರದೇಶದಲ್ಲಿ ಗೋ ಹತ್ಯೆ ನಿಷೇಧ ಇದೆ. ಪಶು ಇಲಾಖೆ ತಜ್ಞರ ತಂಡದ ಜತೆ ತಾವು ಖುದ್ದಾಗಿ ಅಲ್ಲಿಗೆ ಭೇಟಿ ನೀಡಿದ ನಂತರ ರಾಜ್ಯದಲ್ಲೂ ಜಾರಿಗೆ ಬರಲಿದೆ. ಆದಷ್ಟು ಬೇಗ ಗೋ ಸೇವಾ ಆಯೋಗ ರಚನೆಯಾಗಲಿದೆ’ ಎಂದು ಭರವಸೆ ನೀಡಿದರು.

ಪಶು ಸಂಗೋಪನಾ ಇಲಾಖೆ ಅಪರ ನಿರ್ದೇಶಕ ಡಾ. ಮಂಜುನಾಥ ಪಾಳೆಗಾರ ಮಾತನಾಡಿ,‘ಕೃತಕ ಗರ್ಭಧಾರಣೆಯಿಂದ ಒಳ್ಳೆ ತಳಿಗಳ ಜಾನುವಾರು ಅಭಿವೃದ್ಧಿಪಡಿಸುವುದು. ಗುಣಮಟ್ಟದ ಹಾಲಿನ ಉತ್ಪಾದನೆ ಮಾಡಿ ರೈತರ ಆದಾಯ ದ್ವಿಗುಣ ಮಾಡುವುದು ಸರ್ಕಾರದ ಉದ್ದೇಶ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಮಾರುತಿ ಚವಾಣ್, ತಾಲ್ಲೂಕು ಪಂಚಾಯಿತಿ ಸದಸ್ಯ ಸಚಿನ್ ರಾಠೋಡ, ತಹಶೀಲ್ದಾರ್ ಎಂ. ಚಂದ್ರಶೇಖರ್, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ. ಗೋವಿಂದ್ ಬಿ.ಎಚ್. ಸಹಾಯಕ ನಿರ್ದೇಶಕ ರಾಜಕುಮಾರ ಬಿರಾದಾರ, ತಾಂತ್ರಿಕ ಅಧಿಕಾರಿ ಡಾ. ಗೌತಮ ಅರಳಿ, ಡಾ. ನರಸಪ್ಪ, ಡಾ. ಗೋವಿಂದರೆಡ್ಡಿ ಹಾಗೂ ಡಾ. ಯೋಗೇಂದ್ರ ಕುಲಕರ್ಣಿ ಇದ್ದರು.

ಔರಾದ್ ಪಶು ಆಸ್ಪತ್ರೆಯಲ್ಲಿ ಅಪರ ನಿರ್ದೇಶಕ ಡಾ. ಮಂಜುನಾಥ ಪಾಳೆಗಾರ ಅವರು ಪ್ರಗತಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT