ಭಾನುವಾರ, ನವೆಂಬರ್ 17, 2019
23 °C
ಮಾದಕ ದ್ರವ್ಯ ಜಾಗೃತಿ ಕಾರ್ಯಕ್ರಮ: ಡಿ. ದಯಾನಂದ ಹೇಳಿಕೆ

ಮಾದಕ ವ್ಯಸನ ಅಂತರರಾಷ್ಟ್ರೀಯ ಪಿಡುಗು

Published:
Updated:
Prajavani

ಬೀದರ್: ‘ಮಾದಕ ವ್ಯಸನ ಅಂತರರಾಷ್ಟ್ರೀಯ ಪಿಡುಗು ಆಗಿದೆ’ ಎಂದು ನೆಹರೂ ಯುವ ಕೇಂದ್ರದ ಉಪ ನಿರ್ದೇಶಕ ಡಿ.ದಯಾನಂದ ಹೇಳಿದರು.

ನಗರದ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಮಾದಕ ದ್ರವ್ಯ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮಾದಕ ವಸ್ತುಗಳ ಸೇವನೆ ಚಟಕ್ಕೆ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಬೀಡಿ, ಸಿಗರೇಟ್, ತಂಬಾಕು, ಸಾರಾಯಿ ಸೇವನೆ ಚಟಕ್ಕೆ ದಾಸರಾಗಿ ಅನೇಕರು ತಮ್ಮ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಯುವಕರನ್ನು ವ್ಯಸನಮುಕ್ತಗೊಳಿಸುವುದಕ್ಕಾಗಿಯೇ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ’ ಎಂದು ಹೇಳಿದರು.

ಕೇಂದ್ರ ಸರ್ಕಾರದ ಜಾಗೃತ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯ ಶಿವಯ್ಯ ಸ್ವಾಮಿ ಮಾತನಾಡಿ, ‘ಮಾದಕ ವಸ್ತುವಿನ ಸೇವನೆ ಚಟಕ್ಕೆ ಅಂಟಿಕೊಂಡವರಿಗೆ ಆ ವಸ್ತುವನ್ನು ಪಡೆಯುವವರೆಗೂ ಸಮಾಧಾನ ಇರುವುದಿಲ್ಲ. ಕಳ್ಳತನ ಇಲ್ಲವೇ ಮನೆಯಲ್ಲಿನ ವಸ್ತುಗಳನ್ನು ಮಾರಾಟ ಮಾಡಿಯಾದರೂ ಅದನ್ನು ಪಡೆದುಕೊಳ್ಳುತ್ತಾರೆ. ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುವ ಜತೆಗೆ ಕುಟುಂಬವನ್ನೂ ಬೀದಿಗೆ ತರುತ್ತಾರೆ’ ಎಂದು ಬೇಸರದಿಂದ ನುಡಿದರು.

‘ವಿದೇಶದಿಂದ ಭಾರತಕ್ಕೆ ಮಾದಕ ವಸ್ತುಗಳನ್ನು ಕಳುಹಿಸಲಾಗುತ್ತಿದೆ. ಈ ಮೂಲಕ ದೇಶದ ಯುವಕರನ್ನು ಶಕ್ತಿಹೀನರನ್ನಾಗಿ ಮಾಡುವ ಷಡ್ಯಂತ್ರ ನಡೆದಿದೆ’ ಎಂದು ಹೇಳಿದರು.

ಬ್ರಿಮ್ಸ್‌ ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥೆ ಡಾ.ಪಲ್ಲವಿ ಕೇಸರಿ ಮಾತನಾಡಿ, ‘ಒಮ್ಮೆ ಮಾದಕ ವಸ್ತುಗಳ ಸೇವನೆಯ ಚಟ ಅಂಟಿಕೊಂಡರೆ ಅದನ್ನು ಬಿಡುವುದು ತುಂಬಾ ಕಷ್ಟ. ಹೀಗಾಗಿ ಮಾದಕ ವಸ್ತುಗಳಿಂದ ದೂರ ಇರಬೇಕು. ಸಮುದಾಯ ಆರೋಗ್ಯ ನೌಕರರು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ತಿಳಿಸಿದರು.

ನೆಹರೂ ಯುವ ಕೇಂದ್ರದ ಯುವ ಸಮನ್ವಯಾಧಿಕಾರಿ ಪಿ.ಶ್ರೀನಿವಾಸ ಮಾತನಾಡಿ, ‘ನೆಹರೂ ಯುವ ಕೇಂದ್ರವು ವ್ಯಕ್ತಿತ್ವ ವಿಕಸನ ಸೇರಿದಂತೆ ಯುವಕರ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸುತ್ತಿದೆ. ಪ್ರತಿಭೆಗಳನ್ನು ಪ್ರೋತ್ಸಾಹಿಸಿ ರಾಷ್ಟ್ರಮಟ್ಟದಲ್ಲಿ ಪರಿಚಯಿಸುವ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.

ನೆಹರೂ ಯುವ ಕೇಂದ್ರದ ನಿವೃತ್ತ ಯುವ ಸಮನ್ವಯಾಧಿಕಾರಿ ಅಂತಪ್ಪ ಡೋಣಿ ಮಾತನಾಡಿದರು. ಡಾ.ಅಭಿಜೀತ ಪಾಟೀಲ ‘ಮಾದಕ ವ್ಯಸನ ಮತ್ತು ಮಾನಸಿಕ ಆರೋಗ್ಯ’, ಡಾ.ದಿಲೀಪ ರಾಠೋಡ ‘ಮಾದಕ ವ್ಯಸನದಿಂದಾಗುವ ಶಾರಿರೀಕ ಬದಲಾವಣೆ’, ಯೋಗ ತರಬೇತುದಾರ ಯೋಗೇಂದ್ರ ಯದಲಾಪುರೆ ‘ಯೋಗ ಮತ್ತು ಪ್ರಾಣಾಯಾಮ’, ಡಾ. ಎಂ.ಡಿ. ಇರ್ಫಾನ್ ‘ಮಾದಕ ವ್ಯಸನಕ್ಕೆ ಅಂಟುಕೊಳ್ಳುವಿಕೆ ಮತ್ತು ಪರಿಹಾರ’ ಹಾಗೂ ಡಾ. ಕೀರ್ತಿ ‘ಮಾದಕ ವ್ಯಸನ ಮುಕ್ತಗೊಳಿಸುವಲ್ಲಿ ಶಿಕ್ಷಕರು ಹಾಗೂ ಪಾಲಕರ ಪಾತ್ರ’ ಕುರಿತು ಉಪನ್ಯಾಸ ನೀಡಿದರು.

ಬ್ರಿಮ್ಸ್ ನಿರ್ದೇಶಕ ಡಾ. ಎಸ್.ವಿ.ಕ್ಷೀರಸಾಗರ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಈರಣ್ಣ ಲೋಣಿ, ರುಕ್ಮಿಣಿ, ನವನಾಥ ಖೇಡ, ಡಾ. ರಾಹುಲ್ ಬೆದ್ರೆ, ಡಾ.ಅಶೋಕ ಶೇಳಕೆ, ಪ್ರೊ. ಶಶಿಕಾಂತ, ಗುರುನಾಥ ಉದಗಿರೆ, ಪ್ರೊ. ಅಮುಲ್ ಕಾಂಬಳೆ, ಜೈಶ್ರೀ ಮೇತ್ರೆ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಯೋಜಕ ಡಾ. ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿದರು. ಮಹಾರುದ್ರ ಡಾಕುಳಗಿ ನಿರೂಪಿಸಿದರು.

ನವದೆಹಲಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸೋಸಿಯಲ್ ಡಿಫೆನ್ಸ್, ಸಾಮಾಜಿಕ ನ್ಯಾಯ ಸಚಿವಾಲಯ, ಯುವ ಮತ್ತು ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ, ಬ್ರಿಮ್ಸ್ ಸಮುದಾಯ ಆರೋಗ್ಯ ವಿಭಾಗ, ಇಗ್ನೋ ಸ್ಟಡಿ ಸೆಂಟರ್ ಹಾಗೂ ನಾವದಗೇರಿಯ ಕರುಣಾಮಯ ಯುವ ಸಂಘದ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. 

ಪ್ರತಿಕ್ರಿಯಿಸಿ (+)