ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲ ಅನುಭವ ಮಂಟಪ ಪತ್ತೆಗೆ ಆಗ್ರಹ

ಗಾಂಧೀಜಿ ಭಾವಚಿತ್ರ ಕಸದಲ್ಲಿ ಬಿದ್ದಿದ್ದಕ್ಕೆ ಮಾಜಿ ಶಾಸಕರಿಂದ ದೂರು
Last Updated 3 ಅಕ್ಟೋಬರ್ 2021, 6:11 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಅಭ್ಯಂತರವಿಲ್ಲ. ಆದರೆ, 12 ನೇ ಶತಮಾನದ ಮೂಲ ಅನುಭವ ಮಂಟಪ ಪತ್ತೆ ಹಚ್ಚಬೇಕು’ ಎಂದು ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಆಗ್ರಹಿಸಿದ್ದಾರೆ.

ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,‘ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ ಬರೀ ಹೆಸರಿಗೆ ಮಾತ್ರ ಇದೆ. ಅದರಿಂದ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಶರಣ ಉರಿಲಿಂಗ ಪೆದ್ದಿ ಸ್ಮಾರಕ ಒಳಗೊಂಡು ಕೆಲ ಸ್ಥಳಗಳಲ್ಲಿ ಅಸ್ವಚ್ಛತೆ ಇದ್ದು ದುರ್ನಾತ ಬೀರುತ್ತಿದ್ದರೂ ಕ್ರಮ ತೆಗೆದುಕೊಳ್ಳಲಾಗಿಲ್ಲ. ಈ ಮಂಡಳಿಯಲ್ಲಿ ಎಲ್ಲ ಜಾತಿಯವರನ್ನು ಸದಸ್ಯರನ್ನಾಗಿ ಮಾಡಿದರೆ ಮಾತ್ರ ವಿಕಾಸ ಆಗುತ್ತದೆ. ಬಸವಣ್ಣನವರ ಸಮಾನತೆಯ ತತ್ವ ಜಗತ್ತಿಗೆ ಗೊತ್ತಾಗುತ್ತದೆ’ ಎಂದು ಅವರು ಹೇಳಿದರು.

‘ನಾನು ಶಾಸಕನಿದ್ದಾಗ ನಗರೋತ್ಥಾನ ಯೋಜನೆಯಲ್ಲಿ ನಗರದಲ್ಲಿ ಕೈಗೊಂಡ ಇನ್ನೂ ₹10 ಕೋಟಿಯ ಕಾಮಗಾರಿ ಪೂರ್ಣಗೊಂಡಿಲ್ಲ. ಮುಖ್ಯ ರಸ್ತೆಯಲ್ಲಿ ಪಾರಂಪರಿಕ ರೀತಿಯಲ್ಲಿ ಕಬ್ಬಿಣದ ಕಂಬಗಳನ್ನು ಹಾಗೂ ಗ್ರೀಲ್ ಅಳವಡಿಸಲು ಮಂಜೂರಾತಿ ದೊರೆತಿದ್ದರೂ ಕಾಮಗಾರಿ ಕಳಪೆ ಮಟ್ಟದಲ್ಲಿ ನಡೆದಿದೆ. ಭೀಮ ನಗರದಲ್ಲಿನ ಐತಿಹಾಸಿಕ ಬಾವಿ ಸುತ್ತ ಕಸ ಸಂಗ್ರಹಿಸಲಾಗಿದೆ. ನಾರಾಯಣಪುರ ರಸ್ತೆಯಲ್ಲಿನ ನಗರಸಭೆಯ ಹೊಸ ಕಟ್ಟಡದ ಕಾಮಗಾರಿ ಕಳಪೆ ಹಾಗೂ ಅಪೂರ್ಣವಾಗಿದೆ. ಎದುರಲ್ಲಿ ಕಸ ಸಂಗ್ರಹಗೊಂಡಿದೆ. ಮುಳ್ಳುಕಂಟಿಗಳು ಬೆಳೆದಿದ್ದರೂ ಯಾರೂ ಲಕ್ಷ ವಹಿಸುತ್ತಿಲ್ಲ. ಇದು ಐತಿಹಾಸಿಕ ನಗರವಾದ ಕಾರಣ ಉತ್ತಮ ಪೌರಾಯುಕ್ತರನ್ನು ತರಬೇಕು ಎಂದು ಆಗ್ರಹಿಸಿದರೂ ಸಂಬಂಧಿತರು ಕಿವಿಗೊಡುತ್ತಿಲ್ಲ’ ಎಂದು ಅವರು ದೂರಿದ್ದಾರೆ.

‘ಮಹಾತ್ಮ ಗಾಂಧೀಜಿ ಜಯಂತಿಯ ದಿನವೇ ತಹಶೀಲ್ದಾರ್ ಕಚೇರಿ ಎದುರಿನ ಆವರಣದಲ್ಲಿ ಕಣ್ಣಿಗೆ ಕಾಣುವಂತೆ ಮಹಾತ್ಮ ಗಾಂಧೀಜಿ, ಲಾಲ್‌ ಬಹದ್ದೂರ್ ಶಾಸ್ತ್ರಿ, ಡಾ.ಬಿ.ಆರ್.ಅಂಬೇಡ್ಕರ್, ಶಿವಯೋಗಿ ಸಿದ್ದರಾಮೇಶ್ವರ ಅವರ ಭಾವಚಿತ್ರಗಳನ್ನು ಎಸೆಯಲಾಗಿದೆ. ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಅವರನ್ನು ಸ್ಥಳಕ್ಕೆ ಕರೆಸಿ ತೋರಿಸಲಾಗಿದೆ. ಈ ಕುರಿತು ದೂರು ದಾಖಲಿಸಲು ಹೇಳಲಾಗಿದ್ದು, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಲಾಗಿದೆ’ ಎಂದು ಸಹ ಮಲ್ಲಿಕಾರ್ಜುನ ಖೂಬಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT