ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಸ್ವಾಧೀನ ಇಲ್ಲದೆ ಅನುಭವ ಮಂಟಪಕ್ಕೆ ಶಂಕುಸ್ಥಾಪನೆ

ಸರ್ಕಾರದ ಕ್ರಮದ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಪಾದನೆ
Last Updated 7 ಮಾರ್ಚ್ 2021, 3:50 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳದೆಯೇ ಇಲ್ಲಿ ಅನುಭವ ಮಂಟಪಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಪಾದಿಸಿದ್ದಾರೆ.

ಅವರು ಇಲ್ಲಿ ಶನಿವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ಮೊದಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಮಂಟಪದ ಭೂಮಿಪೂಜೆ ನಡೆಸಿ ಎರಡು ತಿಂಗಳಾದರೂ ಟೆಂಡರ್ ಹಾಗೂ ಇತರೆ ಪ್ರಕ್ರಿಯೆ ನಡೆದಿಲ್ಲ. ಬೆಂಗಳೂರಿನ ಬಿಡಿಎದಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪ ಹೊತ್ತಿರುವ ಹಿಂದಿನ ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹಾದೇವ ಅವರನ್ನು ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ವಿಶೇಷಾಧಿಕಾರಿಯನ್ನಾಗಿ ನೇಮಿಸಿದ್ದರಿಂದ ಕೆಲಸ ಪ್ರಗತಿಯಲ್ಲಿಲ್ಲ. ಆದ್ದರಿಂದ ಉತ್ತಮ ಅಧಿಕಾರಿಗಳನ್ನು ನೇಮಿಸಬೇಕು. ಬರೀ ಉಪ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟು ಶಂಕುಸ್ಥಾಪನೆ ನೆರವೇರಿಸಿದರೆ ಸಾಲದು, ಶೀಘ್ರ ಕೆಲಸ ಆರಂಭಿಸಬೇಕು’ ಎಂದರು.

‘ತಾಲ್ಲೂಕಿನ ಗೋರಟಾ(ಬಿ)ದಲ್ಲಿ ಹೈದರಾಬಾದ್ ಕರ್ನಾಟಕ ವಿಮೋಚನಾ ಚಳವಳಿಯಲ್ಲಿ ಹುತಾತ್ಮರಾದವರ ಸ್ಮರಣಾರ್ಥ ನಿರ್ಮಿಸುತ್ತಿರುವ ಸ್ಮಾರಕಕ್ಕೆ 7 ವರ್ಷಗಳ ಹಿಂದೆ ಆಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮೀತ್ ಶಾ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಅದನ್ನು ವರ್ಷದ ನಂತರ ಪ್ರಧಾನಿ ಮೋದಿ ಅವರಿಂದ ಉದ್ಘಾಟಿಸಲಾಗುವುದು ಎಂದು ಭರವಸೆ ನೀಡಿಯೂ ಕೆಲಸ ಆಗಿಲ್ಲ. ಆ ಗ್ರಾಮವನ್ನು ಸಂಸದ ಭಗವಂತ ಖೂಬಾ ಸಂಸದರ ಆದರ್ಶ ಗ್ರಾಮ ಆಯ್ಕೆ ಮಾಡಿಕೊಂಡು ಯಾವುದೇ ಕೆಲಸ ನಿರ್ವಹಿಸಿಲ್ಲ’ ಎಂದು ದೂರಿದರು.

‘ಅರ್ಹರಿಗೆ ಟಿಕೆಟ್’

‘ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆಗೆ 23 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಅರ್ಹರಿಗೆ ಟಿಕೆಟ್ ನೀಡಲಾಗುತ್ತದೆ. ಇಲ್ಲಿನ ಅಭಿವೃದ್ಧಿಯಲ್ಲಿ ಕಾಂಗ್ರೆಸ್‌ನವರಾಗಿದ್ದ ಶಾಸಕ ಬಿ.ನಾರಾಯಣರಾವ್ ಅವರ ಶ್ರಮ ಅಧಿಕವಾಗಿದೆ. ಆದ್ದರಿಂದ ಉಪ ಚುನಾವಣೆಯಲ್ಲೂ ನಮ್ಮದೇ ಪಕ್ಷದವರು ಗೆಲ್ಲಲಿದ್ದಾರೆ’ ಎಂದು ಖಂಡ್ರೆ ಹೇಳಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಪ್ರಧಾನ ಕಾರ್ಯದರ್ಶಿ ದತ್ತು ಮೂಲಗೆ, ತಾಲ್ಲೂಕು ಘಟಕದ ಅಧ್ಯಕ್ಷ ನೀಲಕಂಠ ರಾಠೋಡ, ಅಜರ ಅಲಿ, ವೈಜನಾಥ ಕಾಮಶೆಟ್ಟಿ, ಬಾಬು ಹೊನ್ನಾನಾಯಕ್, ಆನಂದ ದೇವಪ್ಪ, ಶಿವರಾಜ ನರಶೆಟ್ಟಿ, ಅರ್ಜುನ ಕನಕ, ಶಂಕರರಾವ್ ಜಮಾದಾರ, ಸುಧಾಕರ ಗುರ್ಜರ್, ಶಶಿಕಾಂತ ದುರ್ಗೆ, ಚಂದ್ರಕಾಂತ ಮೇತ್ರೆ, ಮಾಲಾ ಬಿ.ನಾರಾಯಣರಾವ್ ಉಪಸ್ಥಿತರಿದ್ದರು. ನಂತರ ಉಪ ಚುನಾವಣೆ ನಿಮಿತ್ತ ತಾಲ್ಲೂಕು ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT