ಬುಧವಾರ, ನವೆಂಬರ್ 20, 2019
23 °C
ಕಲ್ಯಾಣಪರ್ವದ ಭವ್ಯ ಮೆರವಣಿಗೆಗೆ ಶಾಸಕ ಚಾಲನೆ

‘ಅನುಭವ ಮಂಟಪಕ್ಕೆ ₹ 1,000 ಕೋಟಿ ನೀಡಿ’

Published:
Updated:
Prajavani

ಬಸವಕಲ್ಯಾಣ: ಇಲ್ಲಿನ ಬಸವಧರ್ಮ ಪೀಠದಿಂದ ನಡೆದ 18ನೇ ಕಲ್ಯಾಣ ಪರ್ವದ ಸಮಾರೋಪ ಸಮಾರಂಭದಲ್ಲಿ ಬಸವಕಲ್ಯಾಣದ ನೂತನ ಅನುಭವ ಮಂಟಪಕ್ಕೆ ರಾಜ್ಯ ಸರ್ಕಾರ ₹ 20 ಕೋಟಿ ಬಿಡುಗಡೆ  ಮಾಡಿದಂತೆ ಕೇಂದ್ರ ಸರ್ಕಾರ ₹ 1000 ಕೋಟಿ ಒದಗಿಸಬೇಕು ಎಂದು ಒತ್ತಾಯಿಸಲಾಯಿತು.

ಅನುದಾನಕ್ಕೆ ಒತ್ತಾಯಿಸುವುದು ಸೇರಿ 6 ಪ್ರಮುಖ ನಿರ್ಣಯಗಳನ್ನು ಚನ್ನಬಸವಾನಂದ ಸ್ವಾಮೀಜಿ ಮಂಡಿಸಿ ದರು.  ಲಿಂಗಾಯತ ಧರ್ಮ ಮಾನ್ಯತೆಗೆ ರಾಜ್ಯ ಸರ್ಕಾರ ಈಗಾಗಲೇ ಶಿಫಾರಸು ಮಾಡಿದ್ದು ಕೇಂದ್ರ ಸರ್ಕಾರ ಮಾನ್ಯ ಮಾಡಬೇಕು. ಬಸವಕಲ್ಯಾಣದಿಂದ ರೈಲು ಆರಂಭಿಸಬೇಕು ಎಂದು ಆಗ್ರಹಿಸ ಲಾಯಿತು.

ಇದಕ್ಕೂ ಮುನ್ನ ಬಸವಧರ್ಮದ ವಿಜಯೋತ್ಸವದ ಭಾಗವಾಗಿ ಭವ್ಯ ಮೆರವಣಿಗೆ ಜರುಗಿತು. ಬಸವಣ್ಣನವರ ಪರುಷಕಟ್ಟೆಯಿಂದ ಜ್ಯೋತಿಯನ್ನು ಹೊತ್ತಿಸಿಕೊಂಡು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಕೋಟೆ ಹತ್ತಿರದಲ್ಲಿ ಪುಷ್ಪಾರ್ಚನೆ ನೆರವೇರಿಸಿ ಮೆರವಣಿಗೆಗೆ ಚಾಲನೆ ನೀಡಿದರು.

ಶಾಸಕ ಬಿ.ನಾರಾಯಣರಾವ್ ಮಾತನಾಡಿ, ‘ಬಸವಧರ್ಮ ವಿಶ್ವಧರ್ಮ ವಾಗಿದೆ. ಬಸವಣ್ಣನವರು ಸಮಾನತೆ, ಕಾಯಕ ಹಾಗೂ ದಾಸೋಹದ ಮಹತ್ವ ಸಾರಿದ್ದಾರೆ. ಅವರ ತತ್ವದ ಆಚರಣೆ ಅಗತ್ಯ. ಸರ್ಕಾರ ಇಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಎಲ್ಲ ರೀತಿಯ ಸಹಕಾರ ನೀಡಬೇಕು’ ಎಂದರು.

ಬೇಲೂರ ಉರಿಲಿಂಗಪೆದ್ದಿ ಮಠದ ಪಂಚಾಕ್ಷರಿ ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ, ಚನ್ನಬಸವಾನಂದ ಸ್ವಾಮೀಜಿ, ಸಿದ್ಧರಾಮೇಶ್ವರ ಸ್ವಾಮೀಜಿ, ಬಸವಕುಮಾರ ಸ್ವಾಮೀಜಿ, ಮಾತೆ ಸತ್ಯಾದೇವಿ, ನುಲಿ ಚಂದಯ್ಯ ಗವಿಯ ಕಾಂತ ಸ್ವಾಮೀಜಿ, ದತ್ತಾತ್ರಿ ಮೂಲಗೆ ಇದ್ದರು.

ಶರಣರ ಭಾವಚಿತ್ರಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯ ಲಾಯಿತು. ಬಸವಣ್ಣ ಹಾಗೂ ಇತರೆ ಶರಣರ ವೇಷಧಾರಿಗಳನ್ನು ಕುದುರೆಗಳ ಮೇಲೆ ಕೂಡಿಸಲಾಗಿತ್ತು. ಒಂಟೆಗಳೂ ಇದ್ದವು. ವಚನಸಾಹಿತ್ಯವನ್ನು ತಲೆಯ ಮೇಲೆ ಹೊತ್ತುಕೊಳ್ಳಲಾಗಿತ್ತು. ಭಜನಾ ತಂಡ ಹಾಗೂ ಇತರೆ ಕಲಾತಂಡಗಳು ಪಾಲ್ಗೊಂಡಿದ್ದವು. ಮೆರವಣಿಗೆಕಾರರು ತಲೆಮೇಲೆ ಟೊಪ್ಪಿಗೆ, ಸ್ಕಾರ್ಫ್ ಧರಿಸಿದ್ದರು.ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ, ಬಸವಪ್ರಭು ಸ್ವಾಮೀಜಿ, ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿದರು. ಮಾತೆ ಸತ್ಯಾದೇವಿ, ಬಸವಕುಮಾರ ಸ್ವಾಮೀಜಿ, ರಮೇಶ ಪಾಟೀಲ ಸೋಲಪುರ, ಬಸವರಾಜ ಪಾಟೀಲ ಶಿವಪುರ, ಅಶೋಕ ಪಾಟೀಲ ಇದ್ದರು. 

ಕಲ್ಯಾಣಪರ್ವದ ಮೆರವಣಿಗೆಗೆ ಚಪ್ಪಲಿ ಪ್ರದರ್ಶನ

ಬಸವಕಲ್ಯಾಣ:  ಕಲ್ಯಾಣ ಪರ್ವದ ಸಮಾರೋಪ ಸಮಾರಂಭದ ವೇಳೆ ಆಯೋಜಿಸಲಾಗಿದ್ದ ಮೆರವಣಿಗೆಗೆ ಕೆಲವರು ಚಪ್ಪಲಿ ಪ್ರದರ್ಶಿಸಿರುವುದಕ್ಕೆ ಸಮಾರಂಭದ ಆಯೋಜಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. 

‘ಕಲ್ಯಾಣ ಪರ್ವದ ಮೆರವಣಿಗೆಯಲ್ಲಿ ಬಸವಣ್ಣ ಹಾಗೂ ಇತರೆ ಶರಣರ ಭಾವಚಿತ್ರ ಹೊತ್ತ ಸಮಾಜದವರು, ವೇಷಧಾರಿಗಳು, ಸ್ವಾಮೀಜಿ ಪಾಲ್ಗೊಂಡಿದ್ದರು. ಈ ವೇಳೆ ಬಸವೇಶ್ವರ ದೇವಸ್ಥಾನ ಸಮಿತಿಯವರು ಚಪ್ಪಲಿ ಪ್ರದರ್ಶಿಸಿ ಅವಮಾನ ಮಾಡಿದ್ದಾರೆ’ ಎಂದು ರಾಷ್ಟ್ರೀಯ ಬಸವದಳದ ರಾಷ್ಟ್ರೀಯ ಘಟಕದ ಅಧ್ಯಕ್ಷ ಬಸವರಾಜ ಧನ್ನೂರ ದೂರಿದರು.

‘ಮಾತೆ ಮಹಾದೇವಿಯವರು ಬಸವಣ್ಣನವರ ವಚನ ತಿರುಚಿದ ವಿವಾದ ಮುಗಿದ ಅಧ್ಯಾಯ. ಈ ವಿವಾದ ಮುಂದಿರಿಸಿಕೊಂಡು ಪ್ರತಿಭಟನೆ ನಡೆಸಿ, ಚಪ್ಪಲಿ ಪ್ರದರ್ಶಿಸಿದ್ದು ಸರಿಯಲ್ಲ. ಅವರು ಈ ಕೂಡಲೇ ಬಹಿರಂಗ ಕ್ಷಮೆ ಕೇಳಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ತೀವ್ರವಾಗಿ ಪ್ರತಿಭಟಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು. 

‘ಕಲ್ಯಾಣ ಪರ್ವದ ಮೆರವಣಿಗೆಯಲ್ಲಿ ಬಸವಣ್ಣ ಹಾಗೂ ಇತರೆ ಶರಣರ ಭಾವಚಿತ್ರ ಹೊತ್ತ ಸಮಾಜದವರು, ವೇಷಧಾರಿಗಳು, ಸ್ವಾಮೀಜಿ ಪಾಲ್ಗೊಂಡಿದ್ದರು. ಈ ವೇಳೆ ಚಪ್ಪಲಿ ಪ್ರದರ್ಶಿಸಿ ಅವಮಾನ ಮಾಡಲಾಗಿದೆ. ಇದರ ವಿರುದ್ಧ ನಾಡಿನ ಬಸವಪರ ಸಂಘಟನೆಯವರು ಧ್ವನಿ ಎತ್ತಿ ವಿರೋಧ ವ್ಯಕ್ತಪಡಿಸಬೇಕು’ ಎಂದರು.

‘ಮಾತೆ ಮಹಾದೇವಿ ಲಿಂಗಾಯತ ಸಮಾಜದ ಧ್ರುವತಾರೆ ಆಗಿದ್ದರು. ಅವರು ಹಾಗೂ ಲಿಂಗಾನಂದ ಸ್ವಾಮೀಜಿಯವರು ಸಮಾಜಕ್ಕೆ ನೀಡಿದಷ್ಟು ಕೊಡುಗೆ ಯಾರೂ ನೀಡಿಲ್ಲ. ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ರೂಪಿಸಿದರು. ಬಸವತತ್ವವನ್ನು ಎಲ್ಲೆಡೆ ಪ್ರಚಾರ ಮಾಡಿದರು. ಹೀಗಿದ್ದಾಗಲೂ ಅವರ ವಿರುದ್ಧ ಅಪಶಬ್ಧ ಆಡುವುದು ಸರಿಯಲ್ಲ’ ಎಂದರು

ಪ್ರತಿಕ್ರಿಯಿಸಿ (+)