ಬುಧವಾರ, ಏಪ್ರಿಲ್ 14, 2021
31 °C
ಔರಾದ್: ಉದ್ಭವಲಿಂಗ ದರ್ಶನಕ್ಕೆ ಭಕ್ತರ ದಂಡು

ಅಮರೇಶ್ವರ ಜಾತ್ರೆಗೆ ಭರ್ಜರಿ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಔರಾದ್: ಮಹಾ ಶಿವರಾತ್ರಿ ವೇಳೆ ಒಂದು ವಾರ ಕಾಲ ನಡೆಯುವ ಅಮರೇಶ್ವರ ಜಾತ್ರೆಗೆ ಭಕ್ತರ ದಂಡು ಹರಿದು ಬರುತ್ತಿದೆ.

ಅಂತರರಾಜ್ಯ ಖ್ಯಾತಿ ಪಡೆದ ಅಮರೇಶ್ವರ ದೇವರಿಗೆ ಪಕ್ಕದ ಮಹಾರಾಷ್ಟ್ರ, ತೆಲಂಗಾಣದಲ್ಲೂ ಭಕ್ತರು ಇದ್ದಾರೆ.

ಮಹಾ ಶಿವರಾತ್ರಿ ದಿನವಾದ ಶುಕ್ರವಾರ ಉದ್ಘವಲಿಂಗ ದರ್ಶನ ಪಡೆದ ಭಕ್ತರು ತಮ್ಮ ಇಷ್ಟಾರ್ಥ ಪೂರೈಸಿದರು. ಬುಧವಾರ ರಾತ್ರಿ ನಡೆದ ಅಮರೇಶ್ವರ ಪಲ್ಲಕಿ ಮೆರವಣಿಗೆಗೆ ತಹಶೀಲ್ದಾರ್ ಎಂ. ಚಂದ್ರಶೇಖರ್ ಚಾಲನೆ ನೀಡಿದರು.

ಗುರುವಾರ ಬೆಳಿಗ್ಗೆ ನಡೆದ ಗಂಗಾಜಲ ವಿತರಣೆ ಕಾರ್ಯಕ್ರಮದಲ್ಲಿ ಧುರೀಣ ಬಸವರಾಜ ದೇಶಮುಖ, ಡಿವೈಎಸ್ಪಿ ದೇವರಾಜ, ಪಿಎಸ್‍ಐ ಜಗದೀಶ್ ನಾಯಕ ಸೇರಿದಂತೆ ಗಣ್ಯರು, ಭಕ್ತರು ಇದ್ದರು.

ಶುಕ್ರವಾರ ಸಂಜೆ ರಥೋತ್ಸವ ನಡೆಯಲಿರುವುದರಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಲ್ಲೆಡೆ ದೀಪಗಳ ಅಲಂಕಾರ, ಸ್ವಾಗತ ಕಮಾನು ಹಾಕಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ತಹಶೀಲ್ದಾರ್ ಎಂ. ಚಂದ್ರಶೇಖರ್ ತಿಳಿಸಿದ್ದಾರೆ.

ಸಚಿವರಿಂದ ಪೂಜೆ: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಶುಕ್ರವಾರ ಬೆಳಿಗ್ಗೆ ಅಮರೇಶ್ವರ ಉದ್ಭವಲಿಂಗಕ್ಕೆ ಪೂಜೆ ಸಲ್ಲಿಸಲಿದ್ದಾರೆ.

ಇಡೀ ದಿನ ಪಟ್ಟಣದಲ್ಲಿ ಉಳಿದು ಸಾರ್ವಜನಿಕರ ಕುಂದುಕೊರತೆ ಆಲಿಸಲಿದ್ದಾರೆ.

ಅಮರೇಶ್ವರ ದೇವಸ್ಥಾನದ ಮಹಿಮೆ

ಈಗ ಅಮರೇಶ್ವರ ದೇವಸ್ಥಾನ ಇರುವ ಸ್ಥಳದಲ್ಲಿ ಹಿಂದೆ ಘೋರ ಅರಣ್ಯ ಇತ್ತು. ಇಲ್ಲಿ ಲೋಕಕಲ್ಯಾಣಕ್ಕಾಗಿ ತಪಸ್ಸು ನಡೆಯುತ್ತಿತ್ತು. ಇದೇ ವೇಳೆ ಆಕಳು ಬಂದು ಹುತ್ತಿನಲ್ಲಿ ಹಾಲು ಬಿಡುವಾಗ ಉದ್ಭವಲಿಂಗ ಪತ್ತೆಯಾಗಿದೆ ಎಂದು ಹಿರಿಯರು ಹೇಳುತ್ತಾರೆ. ಅಮರೇಶ್ವರ ದೇವಸ್ಥಾನ 10ನೇ ಶತಮಾನದ್ದು. ಇಲ್ಲಿ ದೊರೆತ ಶಾಸನಗಳ ಪ್ರಕಾರ ಮೊದಲು ಅವರವಾಡಿ, ಅವರಾದಿ, ಅಮರವಾಡಿ ನಂತರ ಔರಾದ್ ಎಂದು ಕರೆಯಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.