ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸೆಂಬರ್‌ನಲ್ಲೇ ವಿಧಾನಸಭೆ ಚುನಾವಣೆ: ಎಚ್‌.ಡಿ.ಕುಮಾರಸ್ವಾಮಿ  

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭವಿಷ್ಯ
Last Updated 30 ಜುಲೈ 2022, 15:13 IST
ಅಕ್ಷರ ಗಾತ್ರ

ಬೀದರ್: ಇಂದಿನ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿದರೆ ರಾಜ್ಯದಲ್ಲಿ ಡಿಸೆಂಬರ್‌ನಲ್ಲೇ ವಿಧಾನಸಭೆ ಚುನಾವಣೆ ನಡೆಯುವ ಲಕ್ಷಣಗಳು ಕಂಡು ಬರುತ್ತಿವೆ. ಹೀಗಾಗಿ ಮೊದಲ ಹಂತದಲ್ಲಿ ಜೆಡಿಎಸ್‌ ಗೆಲ್ಲಲು ಸಾಧ್ಯವಿರುವ 134 ಕ್ಷೇತ್ರಗಳಲ್ಲಿ ಸಿದ್ಧತೆ ಆರಂಭಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಬೀದರ್‌ ಜಿಲ್ಲಾ ಮಟ್ಟದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಹೊಣೆಯನ್ನು ಜೆಡಿಎಸ್‌ ಶಾಸಕಾಂಗ ಪಕ್ಷದ ಉಪ ನಾಯಕ ಬಂಡೆಪ್ಪ ಕಾಶೆಂಪೂರ ಅವರಿಗೆ ವಹಿಸಲಾಗಿದೆ. 10, 12 ದಿನಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ನಗರದಲ್ಲಿ ಶನಿವಾರ ಮಾಧ್ಯಮ ಗೋಷ್ಠಿಯಲ್ಲಿ ಅವರು ತಿಳಿಸಿದರು.

ಕಲಬುರಗಿ ಹಾಗೂ ರಾಯಚೂರು ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಆಗಲೇ ಪಕ್ಷ ಸಂಘಟನೆ ಕಾರ್ಯ ಶುರುವಾಗಿದೆ. ಕೊಪ್ಪಳ ಹಾಗೂ ಬಳ್ಳಾರಿಯಲ್ಲಿ ದೊಡ್ಡ ಮಟ್ಟದ ಸಂಘಟನೆಯಗಬೇಕಿದೆ. ಈ ದಿಸೆಯಲ್ಲಿ ಪ್ರಯತ್ನ ನಡೆದಿದೆ ಎಂದು ಹೇಳಿದರು.

ಆಗಸ್ಟ್‌ನಿಂದ ರಾಜ್ಯದ 134 ಕ್ಷೇತ್ರಗಳಲ್ಲಿ ಪಂಚಶೀಲರತ್ನ ಯಾತ್ರೆ ಆರಂಭವಾಗಲಿದೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಸಣ್ಣ ಹಾಗೂ ದೊಡ್ಡ ಮಟ್ಟದ 14ರಿಂದ 18 ಸಭೆಗಳು ನಡೆಯಲಿವೆ. ಪಂಚಾಯಿತಿ ಮಟ್ಟದಲ್ಲೂ ಸಭೆ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳು ನಡೆಯಲಿದೆ ಎಂದರು.

ಶಿಕ್ಷಣ, ಆರೋಗ್ಯ, ರೈತರು ಆರ್ಥಿಕವಾಗಿ ಸದೃಢರಾಗುವ ಅವಕಾಶ, ಮಹಿಳೆ, ಯುವಕರಿಗೆ ಉದ್ಯೋಗ ಅವಕಾಶ ಹಾಗೂ ಬಡವರ ವಸತಿ ನಿರ್ಮಾಣದ ಬಗ್ಗೆ ಕಾರ್ಯಕ್ರಮ ರೂಪಿಸಲಾಗಿದ್ದು, ಇವುಗಳನ್ನು ಅನುಷ್ಠಾನಗೊಳಿಸಲು ರಾಜ್ಯದ ಜನತೆ ಜೆಡಿಎಸ್‌ಗೆ ಅಧಿಕಾರ ನೀಡಬೇಕು ಎಂದು ಮನವಿ ಮಾಡಿದರು.

ರಾಷ್ಟ್ರೀಯ ಪಕ್ಷಗಳು 100ರಿಂ 150 ವರ್ಷ ಕಳೆದರೂ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದಿಲ್ಲ. ಆದರೆ, ಜೆಡಿಎಸ್‌ ಐದು ವರ್ಷಗಳಲ್ಲೇ ಯೋಜನೆ ಪೂರ್ಣಗೊಳಿಸುವ ಯೋಜನೆ ರೂಪಿಸಿದೆ. ಆರ್ಥಿಕ ತಜ್ಞರ ಕೃತಿ ಹಾಗೂ ಲೇಖನಗಳನ್ನು ಓದಿ ವಸ್ತುಸ್ಥಿತಿಯನ್ನು ಆಳವಾಗಿ ಅರಿತುಕೊಂಡಿದ್ದೇನೆ ಎಂದರು.

ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್‌ಗೆ ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಆರ್ಥಿಕ ಸಂಪನ್ಮೂಲ ಕ್ರೋಡೀಕರಿಸಲು ಹಲವು ಮಾರ್ಗಗಳಿವೆ. ವಾಣಿಜ್ಯ ತೆರಿಗೆ ಅಧಿಕಾರಿಗಳು ರಾಜ್ಯದಿಂದ ₹ 1 ಲಕ್ಷ ಕೋಟಿ ತೆರಿಗೆ ಸಂಗ್ರಹಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಕೇಂದ್ರದ ಮುಂದೆ ಭಿಕ್ಷಾ ಪಾತ್ರೆ ಹಿಡಿದು ಕೊಳ್ಳುವ ಪರಿಸ್ಥಿತಿ ಬರುವುದಿಲ್ಲ. ಜೆಡಿಎಸ್‌ಗೆ ಸ್ವತಂತ್ರವಾಗಿ ಅಧಿಕಾರ ಕೊಟ್ಟರೆ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಬಿಜೆಪಿಯಿಂದ ಕೇವಲ ಸುಳ್ಳು ಭರವಸೆ: ಬಿಜೆಪಿ ಸರ್ಕಾರ ಪುಟಗಟ್ಟಲೇ ಜಾಹೀರಾತು ಕೊಟ್ಟು ರೈತರಿಗೆ ಆ ಸೌಲಭ್ಯ ಕೊಟ್ಟಿದ್ದೇವೆ, ಈ ಸೌಲಭ್ಯ ಕೊಟ್ಟಿದ್ದೇವೆ ಎಂದು ಹೇಳಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ. ವಾಸ್ತವದಲ್ಲಿ ಯಾವ ಕಾರ್ಯಗಳೂ ಆಗಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.

ಸಾಲದ ಕಂತು ಪಾವತಿಸುವಂತೆ ಬ್ಯಾಂಕ್‌ ನೋಟೀಸ್‌ ನೀಡಿದ್ದರಿಂದ ರಾಣೆಬೆನ್ನೂರಿನಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಚಿಕ್ಕನಾಯನಕಹಳ್ಳಿಯಲ್ಲಿ ರಸ್ತೆ ನಿರ್ಮಾಣಕ್ಕೆ ಭೂಸ್ವಾಧೀನ ಪಡಿಸಿಕೊಂಡು ಸರ್ಕಾರ ಪರಿಹಾರ ಕೊಟ್ಟಿಲ್ಲ. ಹೀಗಾಗಿ ರೈತ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 2019ರಲ್ಲಿ ಅತಿವೃಷ್ಟಿಯಿಂದಾಗಿ ಮನೆಗಳು ಕುಸಿದಾಗ ಯಡಿಯೂರಪ್ಪ ಸರ್ಕಾರ ₹5 ಲಕ್ಷ ವೆಚ್ಚದಲ್ಲಿ ಮನೆ ಕಟ್ಟಿಕೊಡುವ ಭರವಸೆ ನೀಡಿತು. ಇಂದಿಗೂ ಒಂದು ಮನೆ ಕಟ್ಟಿಕೊಟ್ಟಿಲ್ಲ. ಸುಳ್ಳನ್ನೇ ಸತ್ಯದ ರೀತಿಯಲ್ಲಿ ಪ್ರತಿಪಾದಿಸಿ ಜನರ ದಿಕ್ಕು ತಪ್ಪಿಸುವ ಕೆಲಸ ವ್ಯವಸ್ಥಿತವಾಗಿ ನಡೆದಿದೆ. ಎಂದು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT