ಬುಧವಾರ, ಆಗಸ್ಟ್ 10, 2022
24 °C
ವಾಡಿಕೆಗಿಂತ ಜಾಸ್ತಿ ಮಳೆ; 37 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸೋಯಾ ಬಿತ್ತನೆ

ಔರಾದ್: ಕೃಷಿ ಚಟುವಟಿಕೆ ಚುರುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಔರಾದ್: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಈತನಕ ತಾಲ್ಲೂಕಿನಲ್ಲಿ ವಾಡಿಕೆಗಿಂದ 30 ಮೀ.ಮಿ ಮಳೆ ಜಾಸ್ತಿಯಾಗಿ ಕೃಷಿ ಚಟುವಟಿಕೆ ಚುರುಕುಗೊಂಡಿವೆ.

ಭಾನುವಾರ ಒಂದೇ ದಿನ ಕಮಲನಗರ ತಾಲ್ಲೂಕಿನಲ್ಲಿ 125.7 ಮಿಮಿ ಮಳೆಯಾಗಿದೆ. ಈ ವರ್ಷದ ಜನೆವರಿ 1 ರಿಂದ ಜೂನ್ 27ರ ವರೆಗೆ ಔರಾದ್ ತಾಲ್ಲೂಕಿನಲ್ಲಿ 213 ಮಿಮಿ, ಕಮಲನಗರ ತಾಲ್ಲೂಕಿನಲ್ಲಿ 200 ಮಿಮಿ ಮಳೆ ದಾಖಲಾಗಿದೆ. ಹೋಬಳಿವಾರು ಹೇಳಬೇಕಾದರೆ ಔರಾದ್-174 ಮಿಮಿ, ಚಿಂತಾಕಿ-211 ಮಿಮಿ, ಸಂತಪುರ-153, ಕಮಲನಗರ-161, ದಾಬಕಾ-147, ಠಾಣಾಕುಶನೂರ-201 ಮಿಮಿ ಮಳೆ ದಾಖಲಾಗಿದೆ. ಭಾನುವಾರ ರಾತ್ರಿ ದಾಬಕಾ ಹೋಬಳಿಯಲ್ಲಿ 72 ಮಿಮಿ ದಾಖಲೆ ಮಳೆಯಾಗಿದೆ. ಈ ಮಳೆಯಿಂದಾಗಿ ಸಣ್ಣ ಕೆರೆ-ಕಟ್ಟೆಗಳು ತುಂಬಿವೆ. ಕೆಲ ಕಡೆ ರಸ್ತೆ ಸಂಪರ್ಕ ಕಡಿದು ಹೋಗಿದೆ.

ಈ ಮಳೆಯಿಂದಾಗಿ ಬಿತ್ತನೆ ಚಟುವಟಿಕೆಗಳು ಚುರುಕುಗೊಂಡಿವೆ. ತಾಲ್ಲೂಕಿನ 55 ಸಾವಿರ ಹೆಕ್ಟೇರ್ ಪೈಕಿ 37 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸೋಯಾ ಬಿತ್ತನೆ ಪೂರ್ಣ ಅಗಿದೆ. 9500 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಆಗಿದೆ. ಈಗಾಗಲೇ ಶೇ. 60 ರಿಂದ 65ರಷ್ಟು ಬಿತ್ತನೆ ಪೂರ್ಣ ಗೊಂಡಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಂಎಕೆ ಅನ್ಸಾರಿ ತಿಳಿಸಿದ್ದಾರೆ.

ಮಳೆ ಹಾನಿ ತಪ್ಪಿಸಲು ಸೂಚನೆ

ಔರಾದ್: ಔರಾದ್ ಹಾಗೂ ಕಮಲನಗರ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಹೆಚ್ಚಿನ ಮಳೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆಯಾಗುವ ಸಾಧ್ಯತೆಗಳಿರುವುದರಿಂದ ಹಾನಿ ತಪ್ಪಿಸಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ತೀವ್ರ ಮಳೆಯಿಂದಾಗಿ ಕೆರೆ-ಕಟ್ಟೆಗಳು ಒಡೆದು ರಸ್ತೆಗಳು ಹಾನಿಯಾಗುತ್ತವೆ. ಹಾಳಾದ ರಸ್ತೆಗಳನ್ನು ಬೇಗ ಸರಿಪಡಿಸಿ ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.

ಕೆಲವೆಡೆ ವಿದ್ಯುತ್ ತಂತಿಗಳು ಕಡಿದು ವಿದ್ಯುತ್ ಸಮಸ್ಯೆಯಾಗಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಅಂಥವುಗಳನ್ನು ತಕ್ಷಣ ಸರಿಪಡಿಸಬೇಕು. ಮರದ ಕೊಂಬೆಗಳು ವಿದ್ಯುತ್ ಕಂಬಗಳ ಮೇಲೆ ಬೀಳದಂತೆ ಅವುಗಳನ್ನು ತೆರವುಗೊಳಿಸುವ ಕೆಲಸವಾಗಬೇಕು ಎಂದು ನಿರ್ದೇಶನ ನೀಡಿದ್ದಾರೆ.

ತಹಶೀಲ್ದಾರರು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಕಂದಾಯ ನಿರೀಕ್ಷಕರು, ಲೆಕ್ಕಾಧಿಕಾರಿಗಳು ಸೇರಿದಂತೆ ಎಲ್ಲ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನದಲ್ಲಿದ್ದುಕೊಂಡು ಕೆಲಸ ಮಾಡುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು