ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಾದ್ ಜನರಿಗೆ ನಿತ್ಯ ದೂಳಿನ ಮಜ್ಜನ

ತಿಂಗಳ ಹಿಂದೆ ಸಚಿವರು ಚಾಲನೆ ನೀಡಿದರೂ ಆರಂಭವಾಗದ ರಸ್ತೆ ಕಾಮಗಾರಿ
Last Updated 3 ಜನವರಿ 2021, 3:15 IST
ಅಕ್ಷರ ಗಾತ್ರ

ಔರಾದ್: ಪಟ್ಟಣದ ಏಕೈಕ ಪ್ರಮುಖ ರಸ್ತೆ ಹಾಳಾಗಿ ಜನ ನಿತ್ಯ ಹೈರಾಣಾಗುತ್ತಿದ್ದಾರೆ. ತಾಲ್ಲೂಕು ಕೇಂದ್ರದಲ್ಲಿರುವ ಈ ಮುಖ್ಯ ರಸ್ತೆ ಎರಡು ವರ್ಷಗಳಿಂದ ಹದಗೆಟ್ಟು ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ.

ಪಟ್ಟಣದ ಕನ್ನಡಾಂಬೆ ವೃತ್ತದಿಂದ ಮಿನಿ ವಿಧಾನಸೌಧದವರೆಗಿನ ಒಂದೂವರೆ ಕಿಲೋ ಮೀಟರ್‌ನಷ್ಟು ರಸ್ತೆ ಹಾಳಾಗಿ ಪಟ್ಟಣದ ಅಂದ ಹದಗೆಡಿಸಿದೆ. ಬಸ್ ನಿಲ್ದಾಣ, ಸರ್ಕಾರಿ ಆಸ್ಪತ್ರೆ, ನ್ಯಾಯಾಲಯಕ್ಕೆ ಹೋಗುವ ಈ ಹದಗೆಟ್ಟ ರಸ್ತೆಯಿಂದ ವಾಹನ ಸವಾರರು ನಿತ್ಯ ಸಂಕಟ ಎದುರಿಸ ಬೇಕಾಗಿದೆ. ಅದರಲ್ಲೂ ಈ ರಸ್ತೆ ಅಕ್ಕ-ಪಕ್ಕದ ಅಂಗಡಿಯವರು ದೂಳಿನಿಂದಾಗಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ.

‘ಪಟ್ಟಣ ಪಂಚಾಯಿತಿಗೆ ಹೋಗಿ ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ ಕನಿಷ್ಠ ದೂಳು ಇರುವ ಕಡೆಯಾದರೂ ರಿಪೇರಿಯೂ ಆಗಿಲ್ಲ’ ಎಂದು ವ್ಯಾಪಾರಿ ನಾಗರಾಜ ಯಂಡೆ ಇಲ್ಲಿಯ ಆಡಳಿತ ವ್ಯವಸ್ಥೆ ವಿರುದ್ಧ ಕಿಡಿ ಕಾರಿದ್ದಾರೆ.

‘ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅವರು ಒಂದು ತಿಂಗಳ ಹಿಂದೆ ಈ ರಸ್ತೆಯನ್ನು ₹2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವುದಾಗಿ ಹೇಳಿ ಚಾಲನೆ ನೀಡಿದರು. ಆದರೆ ಇದುವರೆಗೂ ಕಾಮಗಾರಿ ಶುರುವಾಗಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ಅನೀಲ ಜಿರೋಬೆ ಅಸಮಾಧಾನ ವ್ಯಕ್ತಪಡಿಸಿದರು.

ರಸ್ತೆಗೆ ಮಂಜೂರಾದ ನಿಗದಿತ ಅನುದಾನ ಸಮರ್ಪಕವಾಗಿ ಬಳಕೆ ಮಾಡಬೇಕು. ರಸ್ತೆಯ ಎರಡೂ ಬದಿ ಫುಟ್‌ಪಾತ್ ವರೆಗೆ ಗುಣಮಟ್ಟದಿಂದ ಕಾಮಗಾರಿ ಮಾಡಿ ಪಟ್ಟಣದ ಅಂದ ಹೆಚ್ಚಿಸಬೇಕು ಎಂಬುದು ಜನರ ಆಗ್ರಹ.

‘ಜಿಲ್ಲಾ ಉಸ್ತುವಾರಿ ಸಚಿವರು ಕಳೆದ ತಿಂಗಳು ಪಟ್ಟಣದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಅವುಗಳಲ್ಲಿ ಕೆಲವು ಆರಂಭವಾಗಿವೆ. ಇನ್ನು ಕೆಲವು ಆರಂಭವಾಗಬೇಕಿದೆ. ಸಂಬಂಧಿತ ಗುತ್ತಿಗೆದಾರರಿಗೆ ಮಾತನಾಡಿ ಆದಷ್ಟು ಬೇಗ ಪಟ್ಟಣದ ಮುಖ್ಯ ರಸ್ತೆ ಕಾಮಗಾರಿ ಶುರು ಮಾಡಿಸಲಾಗುವುದು’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಚಾಂದ್‌ ಪಟೇಲ್ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT