ಬೀದರ್: ಜಿಲ್ಲೆಯ ಔರಾದ್, ಭಾಲ್ಕಿ, ಹುಮನಾಬಾದ್ ಹಾಗೂ ಬೀದರ್ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಭಾರಿ ಮಳೆಯಾಗಿದೆ.
ಭಾಲ್ಕಿ ತಾಲ್ಲೂಕಿನ ನಿಟ್ಟೂರ ಹೋಬಳಿಯಲ್ಲಿ 66 ಮಿ.ಮೀ, ಲಂಜವಾಡದಲ್ಲಿ 64.4 ಮಿ.ಮೀ, ಬೀರಿ(ಕೆ)ದಲ್ಲಿ 72.5 ಮಿ.ಮೀ, ಔರಾದ್ ತಾಲ್ಲೂಕಿನ ಚಿಂತಾಕಿ ಹೋಬಳಿಯಲ್ಲಿ 74.5 ಮಿ.ಮೀ ಮಳೆ ಸುರಿದಿದೆ. ಮಾಂಜ್ರಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ಬೀದರ್ ತಾಲ್ಲೂಕಿನ ಕಮಠಾಣ, ಬಗದಲ್ ಪರಿಸರದಲ್ಲಿನ ಕಬ್ಬು ನೆಲಕ್ಕುರುಳಿದೆ. ಈಚೆಗಷ್ಟೇ ಮೊಳಕೆಯೊಡೆದ ಬೆಳೆಗಳು ನೀರಿನಲ್ಲಿ ಮುಳುಗಿವೆ.
ಔರಾದ್ ತಾಲ್ಲೂಕಿನ ಸಂತಪುರ, ವಡಗಾಂವ್, ಚಿಂತಾಕಿ ಹೋಬಳಿಯಲ್ಲಿ ಮಳೆಯ ಅಬ್ಬರಕ್ಕೆ ಹಳ್ಳ ಕೊಳ್ಳ ಹಾಗೂ ಗಟಾರುಗಳು ಉಕ್ಕಿ ಹರಿದು ನೀರು ಮನೆಗಳಿಗೆ ನುಗ್ಗಿದೆ.
ಬೋರ್ಗಿ ಗ್ರಾಮದ ಜಗದೇವಿ ಮಾದಪ್ಪ ಮನೆಯೊಳಗೆ ನೀರು ನುಗ್ಗಿದೆ. ಚರಂಡಿ ನೀರು ಹರಿದು ಹೋಗುವ ವ್ಯವಸ್ಥೆ ಮಾಡಿಲ್ಲ. ಗ್ರಾಮ ಪಂಚಾಯಿತಿ ಅಸಹಾಯತೆ ವ್ಯಕ್ತಪಡಿಸಿದೆ. ರಾತ್ರಿಯಿಡೀ ಮನೆಯಲ್ಲಿ ನೀರು ನಿಂತ ಕಾರಣ ಸಮೀಪದ ಸರ್ಕಾರಿ ಶಾಲೆಯ ಕಟ್ಟಡದಲ್ಲಿ ಕುಟುಂಬದ ವಾಸ್ತವ್ಯಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ.
ವಡಗಾಂವ್– ಕಂದಗೂಳ ನಡುವಿನ ಸೇತುವೆ ಮೇಲಿಂದ ನೀರು ಹರಿದು ಈ ಭಾಗದ ಪ್ರಯಾಣಿಕರು ಪರದಾಡಿದರು. ಸಂತಪುರ– ವಡಗಾಂವ್ ನಡುವಿನ ನಾಗೂರ ಬಳಿಯ ಸೇತುವೆ ಮುಳಗಡೆಯಾಗಿ ಶನಿವಾರ ಬೆಳಿಗ್ಗೆ ತನಕ ಸಂಪರ್ಕ ಕಡಿತಗೊಂಡಿತ್ತು.
ಸಂತಪುರ– ಠಾಣಾಕುಶನೂರ ನಡುವಿನ ನಾಗೂರ (ಎಂ) ಬಳಿಯ ಬದಲಿ ರಸ್ತೆ ಮಳೆಯ ಅಬ್ಬರಕ್ಕೆ ಕೊಚ್ಚಿಕೊಂಡು ಹೋಗಿದೆ. ಈ ಭಾಗದ ಸಂಚಾರ ಸ್ಥಗಿತವಾಗಿದೆ. ಅನೇಕ ಹೊಲಗಳಿಗೆ ನೀರು ನುಗ್ಗಿ ವಾರದ ಹಿಂದೆ ಬಿತ್ತನೆ ಮಾಡಿದ ಸೋಯಾ, ಉದ್ದು, ಹೆಸರು, ಜೋಳ ನೀರು ಪಾಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.