ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಜಿಲ್ಲೆಯಲ್ಲಿ ಸಾಧಾರಣ ಮಳೆ

ಮಳೆ ನೀರಿನ ರಭಸಕ್ಕೆ ಕೊಚ್ಚಿ ಹೋದ ಸೇತುವೆ ತಡೆಗೋಡೆ
Last Updated 28 ಜೂನ್ 2020, 16:56 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯ ವಿವಿಧಡೆ ಭಾನುವಾರ ಬೆಳಗಿನ ಜಾವ ಉತ್ತಮ ಮಳೆ ಸುರಿದಿದೆ. ಮಳೆಯ ರಭಸಕ್ಕೆ ಭಾಲ್ಕಿ ತಾಲ್ಲೂಕಿನ ಹಾಲಹಿಪ್ಪರಗಾ ಹೊರ ವಲಯದಲ್ಲಿ ಸೇತುವೆ ತಡೆಗೋಡೆ ಕೊಚ್ಚಿಕೊಂಡು ಹೋಗಿದೆ.

ಬಸವಕಲ್ಯಾಣ ತಾಲ್ಲೂಕಿನ ಏಕಲೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು 74 ಮಿ.ಮೀ. ಮಳೆ ದಾಖಲಾಗಿದೆ.

ಭಾಲ್ಕಿಯಲ್ಲಿ ಉತ್ತಮ ಮಳೆ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಭಾನುವಾರ ಬೆಳಗಿನ ಜಾವ ಸುರಿದ ಮಳೆ ಬೆಳೆಗಳಿಗೆ ಆಸರೆಯಾಗಿದ್ದು, ಅವುಗಳಲ್ಲಿ ಜೀವ ಕಳೆ ತುಂಬಿದೆ.

ಖಟಕ ಚಿಂಚೋಳಿ, ಏಣಕೂರ, ಚಳಕಾಪೂರ, ಖಾನಾಪೂರ, ಹಲಬರ್ಗಾ, ಕೋನ ಮೇಳಕುಂದಾ, ಕರಡ್ಯಾಳ, ತಳವಾಡ, ಕದಲಾಬಾದ, ಸಿದ್ದೇಶ್ವರ, ನೇಳಗಿ ಸೇರಿದಂತೆ ವಿವಿಧೆಡೆ ನಸುಕಿನ ಜಾವ ಸುಮಾರು ಒಂದು ಗಂಟೆ ಮಳೆ ಸುರಿದಿದೆ. ಜೂನ್ ಮೊದಲ ವಾರದ ಕೊನೆಯಲ್ಲಿ ಬಿತ್ತನೆ ಕೈಗೊಂಡಿದ್ದ ರೈತರು ಮಳೆ ಇಲ್ಲದೆ ಬೆಳೆಗಳು ಒಣಗುತ್ತಲಿವೆ ಎಂದು ಕೊರಗುತ್ತಿದ್ದರು. ಭಾನುವಾರ ಸುರಿದ ಮಳೆ ಬೆಳೆಗಳಿಗೆ ಆಸರೆಯಾಗಿದೆ. ಇನ್ನೂ ಬಿತ್ತನೆ ಕೈಗೊಳ್ಳದ ರೈತರಿಗೆ ಬಿತ್ತನೆ ಕಾರ್ಯ ಕೈಗೊಳ್ಳಲು ಅನುಕೂಲ ಮಾಡಿಕೊಟ್ಟಿದೆ.

ಮಳೆಯಿಂದ ಹಳ್ಳ ಉಕ್ಕಿ ಹರಿದು ಹಳ್ಳ ಸುತ್ತ ಮುತ್ತಲಿನ ಹೊಲದ ಮಣ್ಣು ಕೊಚ್ಚಿಕೊಂಡು ಹೋಗಿದೆ. ಬಿತ್ತನೆ ಮಾಡಿದ ಬೀಜ ನೀರು ಪಾಲಾಗಿದೆ ಎಂದು ರೈತರಾದ ಚಂದ್ರಶೇಖರ ಪಾಟೀಲ ತಿಳಿಸಿದರು.

30 ನಿಮಿಷಕ್ಕೂ ಹೆಚ್ಚು ಕಾಲ ವರ್ಷಧಾರೆ: ಕಮಲನಗರ ತಾಲ್ಲೂಕಿನ ದಾಬಕಾ, ಗಂಗನಬೀಡ್, ಠಾಣಾಕುಶನೂರು, ಕಮಲನಗರ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಶನಿವಾರ ಸಂಜೆ ಮತ್ತು ತಡರಾತ್ರಿ 65 ಮೀ.ಮೀ ದಾಖಲೆ ಮಳೆ ಸುರಿದಿದೆ.

ಗಾಳಿ ಸಹಿತ ಮಳೆಯಿಂದ ಕೆಲವೆಡೆ ಮನೆ ಮೇಲಿನ ಶೀಟ್‍ಗಳು ಹಾರಿ ಹೋಗಿವೆ. ಕೆಲವೆಡೆ ರಸ್ತೆ ಪಕ್ಕದ ಹಳೆ ಮರಗಳು ಮತ್ತು ವಿದ್ಯುತ್ ಕಂಬಗಳು ವಾಲಿವೆ. ಆದರೆ, ಅವಘಡ ಸಂಭವಿಸಿಲ್ಲ.

ತಾಲ್ಲೂಕಿನ ಸೋನಾಳ, ಚಿಕ್ಲಿ(ಯು), ಗಂಗನಬಿಡ್, ಮುರ್ಕಿ, ಠಾಣಾಕುಶನೂರು, ಮುಧೋಳ(ಬಿ), ತೋರ್ಣಾ ಡೋಣಗಾಂವ್ ಸೇರಿ ವಿವಿಧ ಗ್ರಾಮಗಳಲ್ಲಿ ಬಿರುಗಾಳಿಯೊಂದಿಗೆ ಪ್ರಾರಂಭವಾದ ಮಳೆ 30 ನಿಮಿಷಕ್ಕೂ ಹೆಚ್ಚು ಕಾಲ ಸುರಿಯಿತು.

ದಾಬಕಾ(ಸಿ) ವಲಯದಲ್ಲಿ ಇಲ್ಲಿವರೆಗಿನ ಒಂದು ವಾರದಲ್ಲಿ 39.5 ಮೀ.ಮೀ ಮಳೆ ದಾಖಲಾದ ವರದಿಯಾಗಿತ್ತು. ಕೆಲವೆಡೆ ಬಿತ್ತನೆ ಕಾರ್ಯ ಚುರುಕುಗೊಂಡಿತ್ತು. ಇಂದು ಭಾನುವಾರ ಗಂಗನಬಿಡ್, ಅಕನಾಪುರ, ಚಿಕಲಿ(ಯು), ವಾಗನಗೇರಾ, ತೋರ್ಣಾ, ಡಿಗ್ಗಿ, ಚ್ಯಾಂಡೇಶ್ವರ ಮುಂತಾದ ಕಡೆ ಟ್ರ್ಯಾಕ್ಟರ್, ಕೂರಿಗೆ ಮೂಲಕ ಬಿತ್ತನೆ ಕಾರ್ಯ ಕೈಗೊಂಡಿರುವುದು ಕಂಡುಬಂದಿದೆ.

ಈ ಮಳೆಯಿಂದ ಬಿತ್ತನೆಗೆ ಸಹಕಾರಿಯಾಗುವ ಜೊತೆಗೆ ನದಿ ಪಾತ್ರೆಗಳು ತುಂಬಿ ಹರಿಯುತ್ತಿದ್ದು. ಕೆಲ ಗ್ರಾಮಗಳಲ್ಲಿ ಮಳೆಗಾಲದಲ್ಲೂ ಕುಡಿಯುವ ನೀರಿಗೂ ನಡೆಯುತ್ತಿದ್ದ ಪರದಾಟ ತಪ್ಪಿಸಿ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ರೈತರ ಅಭಿಪ್ರಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT