ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್‌ ಮುಕ್ತ ನಗರಕ್ಕೆ ಕೈಜೋಡಿಸಿ: ಶಾಲಿನಿ ರಾಜು ಚಿಂತಾಮಣಿ ಮನವಿ

Last Updated 31 ಜನವರಿ 2019, 13:32 IST
ಅಕ್ಷರ ಗಾತ್ರ

ಬೀದರ್‌: ‘ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿ ಪ್ಲಾಸ್ಟಿಕ್‌ ಮುಕ್ತ ನಗರಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು’ ಎಂದು ನಗರಸಭೆ ಅಧ್ಯಕ್ಷೆ ಶಾಲಿನಿ ರಾಜು ಚಿಂತಾಮಣಿ ಮನವಿ ಮಾಡಿದರು.

ನಗರದ ಸಿದ್ಧಾರ್ಥ ಪದವಿ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಸ್ವಚ್ಛ ಭಾರತ ಅಭಿಯಾನ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನೈರ್ಮಲ್ಯ ಕಾಪಾಡುವಲ್ಲಿ ಯುವಕ, ಯುವತಿಯರು ಹೊಣೆಗಾರಿಕೆಯನ್ನು ಪ್ರದರ್ಶಿಸಬೇಕು. ಸ್ವ-ಇಚ್ಛೆಯಿಂದ ಪ್ಲಾಸ್ಟಿಕ್ ಬಳಸುವುದನ್ನು ನಿಲ್ಲಿಸಬೇಕು. ಸುಶಿಕ್ಷಿತರು ತಮ್ಮ ಪರಿಸರದಲ್ಲಿನ ಜನರಲ್ಲಿ ಶೌಚಾಲಯ ಹಾಗೂ ನೈರ್ಮಲ್ಯದ ಅರಿವು ಮೂಡಿಸಬೇಕು’ ಎಂದು ಹೇಳಿದರು.

‘ಸ್ವಚ್ಛತೆಯ ನಿರ್ವಹಣೆ ಕೇವಲ ಸರ್ಕಾರದ ಜವಾಬ್ದಾರಿ ಎಂದು ಯಾರೂ ಭಾವಿಸಬಾರದು. ತಮ್ಮ ಮನೆ ಹಾಗೂ ಓಣಿಗಳಿಂದ ಸ್ವಚ್ಛತಾ ಅಭಿಯಾನ ಆರಂಭಿಸಬೇಕು. ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಎದುರಾಗಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗುವ ಸಾಧ್ಯತೆ ಇದೆ. ಪ್ರತಿಯೊಬ್ಬರು ನೀರನ್ನು ಮಿತವಾಗಿ ಬಳಕೆ ಮಾಡಬೇಕು’ ಎಂದು ಕೋರಿದರು.

ಸ್ವಚ್ಛ ಭಾರತ ಅಭಿಯಾನದ ಜಿಲ್ಲಾ ನೋಡಲ್ ಅಧಿಕಾರಿ ಡಾ.ಗೌತಮ ಅರಳಿ ಮಾತನಾಡಿ, ‘ಗ್ರಾಮೀಣ ಪ್ರದೇಶಗಳಲ್ಲಿ ಬಯಲು ಶೌಚಕ್ಕೆ ಹೋದ ಅನೇಕ ಮಹಿಳೆಯರು ಹಾವು ಕಚ್ಚಿ ಸಾವಿಗೀಡಾಗಿದ್ದಾರೆ. ಕೆಲವರು ಲೈಂಗಿಕ ದೌರ್ಜನ್ಯಕ್ಕೂ ಒಳಗಾಗಿದ್ದಾರೆ. ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಮನೆಯಲ್ಲಿ ಶೌಚಾಲಯ ನಿರ್ಮಿಸಬೇಕು’ ಎಂದು ತಿಳಿಸಿದರು.

‘ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ ಹಾಗೂ ನೈರ್ಮಲ್ಯದ ಮಹತ್ವವನ್ನು ತಿಳಿಸುವ ಅಗತ್ಯವಿದೆ’ ಎಂದು ಹೇಳಿದರು.

ಪ್ರಾಚಾರ್ಯ ಡಾ.ಎಂ.ಎಸ್.ಖರ್ಗೆ ಅವರು ಸ್ವಚ್ಛ ಭಾರತ ಅಭಿಯಾನ ಕುರಿತು ಮಾತನಾಡಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಚ್ಚೇಂದ್ರ ವಾಘಮಾರೆ, ಎನ್.ಎಸ್.ಎಸ್ ಅಧಿಕಾರಿ ಜಗನ್ನಾಥ ಬಡಿಗೇರ, ಉಪ ಪ್ರಾಚಾರ್ಯ ಡಾ.ರಾಜನಾಳೆ ಅನಿಲಕುಮಾರ, ಕನ್ನಡ ವಿಭಾಗದ ಪ್ರೊ.ರಾಜಕುಮಾರ ಸಿಂಧೆ ಇದ್ದರು. ಬಳ್ಳಾರಿ ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯದ ರಾಮಕೃಷ್ಣಪ್ಪ ಸ್ವಾಗತಿಸಿದರು. ಕಲಬುರ್ಗಿ ಕಾರ್ಯಾಲಯದ ನಾಗಪ್ಪ ಅಂಬಾಗೋಳ ವಂದಿಸಿದರು.

ಜಾನಪದ ಕಲಾವಿದರು ಗೀತೆಗಳನ್ನು ಹಾಡಿ ಸ್ವಚ್ಛತೆಯ ಅರಿವು ಮೂಡಿಸಿದರು.

ಸ್ವಚ್ಛತಾ ಅಭಿಯಾನದ ಅಂಗವಾಗಿ ಏರ್ಪಡಿಸಿದ್ದ ಚರ್ಚೆ, ಭಾಷಣ, ಚಿತ್ರಕಲಾ ಹಾಗೂ ರಂಗೋಲಿ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಬಳಿಕ ವಿದ್ಯಾರ್ಥಿಗಳು ಜಾಗೃತಿ ಜಾಥಾ ನಡೆಸಿದರು.

ಭಾರತ ಸರ್ಕಾರದ ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯ, ನಗರಸಭೆ, ಶಿಶು ಅಭಿವೃದ್ಧಿ ಯೋಜನೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT