ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊಳ್ಳೆ ನಿಯಂತ್ರಣಕ್ಕೆ ಜಾಗೃತಿ ಕಾರ್ಯಕ್ರಮ ನಡೆಸಿ

ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಉಷಾ ನಿಟ್ಟೂರಕರ್ ಸೂಚನೆ
Last Updated 7 ನವೆಂಬರ್ 2019, 10:31 IST
ಅಕ್ಷರ ಗಾತ್ರ

ಬೀದರ್‌: ’ಡೆಂಗಿ, ಮಲೇರಿಯಾ ಸೇರಿದಂತೆ ಹಲವು ರೋಗಗಳಿಗೆ ಕಾರಣವಾಗುವ ಸೊಳ್ಳೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಆಯೋಜಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಉಷಾ ನಿಟ್ಟೂರಕರ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಡೆಂಗಿ ನಿಯಂತ್ರಣ ಕುರಿತು ಆರೋಗ್ಯ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.

‘ ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಡೆಂಗಿ, ಮಲೇರಿಯಾ, ಚಿಕೂನ್‌ಗುನ್ಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.
ಇಂತಹ ರೋಗಗಳು ಬಂದಲ್ಲಿ ಜನರು ಭಯಭೀತರಾಗಿ ಚಿಕಿತ್ಸೆಗಾಗಿ ನೆರೆಯ ರಾಜ್ಯಗಳಿಗೆ ಹೋಗುತ್ತಿದ್ದಾರೆ.
ರೋಗ ಪತ್ತೆಗೆ ಏನು ಮಾಡಬೇಕು?. ರೋಗ ಲಕ್ಷಣಗಳು ಏನು? ಎನ್ನುವ ಬಗ್ಗೆ ಜನರಿಗೆ ತಿಳಿವಳಿಕೆ ನೀಡಬೇಕು’ ಎಂದು ಸಲಹೆ ನೀಡಿದರು.

‘ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಲಭ್ಯವಿರುವುದಿಲ್ಲ ಎನ್ನುವ ದೂರುಗಳು ಬರಬಾರದು. ವೈದ್ಯರು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಬೇಕು. ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ರಾತ್ರಿ ವೇಳೆ ಕಡ್ಡಾಯವಾಗಿ ವೈದ್ಯರು ಇರುವಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.

‘ಜಿಲ್ಲಾ ಮಟ್ಟದಲ್ಲಿ ಕೆಲಸ ನಿರ್ವಹಿಸುವ ವೈದ್ಯಾಧಿಕಾರಿಗಳು ತಮ್ಮ ಕಚೇರಿಗೆ ಮಾತ್ರ ಸೀಮಿತವಾಗಬಾರದು. ಆಗಾಗ ಹೋಬಳಿ ಮತ್ತು ಗ್ರಾಮ ಮಟ್ಟದಲ್ಲಿರುವ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಅಲ್ಲಿನ ವೈದ್ಯರಿಗೆ ಅಗತ್ಯ ಸಲಹೆಗಳನ್ನು ನೀಡಬೇಕು. ಎಲ್ಲ ಆಸ್ಪತ್ರೆಗಳಲ್ಲಿ ಮೇಲಧಿಕಾರಿಗಳ ಭೇಟಿಯ ಕುರಿತು ಮಾಹಿತಿ ಲಭ್ಯವಾಗುವಂತೆ ನೋಟ್‌ ಬುಕ್‌ ಇಡಬೇಕು’ ಎಂದು ತಿಳಿಸಿದರು.

‘ಸೊಳ್ಳೆಗಳಿಂದ ಬರುವ ರೋಗಗಳ ನಿಯಂತ್ರಣಕ್ಕಾಗಿ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಪ್ರತ್ಯೇಕ ಯೋಜನಾ ವರದಿಯೊಂದನ್ನು ಸಿದ್ಧಪಡಿಸಿ, ಅದರಂತೆ ಕೆಲಸ ನಿರ್ವಹಿಸಬೇಕು. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸಹಾಯ ಪಡೆದು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು’ ಎಂದು ಹೇಳಿದರು.

‘ಸರ್ಕಾರಿ ಆಸ್ಪತ್ರೆಗಳಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವ ಡೆಂಗಿ ರೋಗಿಗಳ ಮಾಹಿತಿ ಪಡೆಯಬೇಕು. ರೋಗ ತಪಾಸಣೆ ಮತ್ತು ಚಿಕಿತ್ಸೆ ನೀಡುವಿಕೆಯಲ್ಲಿ ಯಾವುದೇ ರೀತಿಯ ಲೋಪಗಳಾಗದಂತೆ ಕೆಲಸ ನಿರ್ವಹಿಸಬೇಕು. ಜಿಲ್ಲೆಯ ಯಾವುದೇ ಭಾಗದಲ್ಲಿ ಒಂದಕ್ಕಿಂತ ಹೆಚ್ಚಿನ ಡೆಂಗಿ ಪ್ರಕರಣಗಳು ಕಾಣಿಸಿದಲ್ಲಿ ತಕ್ಷಣ ಅಲ್ಲಿಗೆ ವೈದ್ಯರನ್ನು ಕಳುಹಿಸಿ ಕೂಡಲೇ ಚಿಕಿತ್ಸೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು’ ಎಂದರು.

ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಅನಿಲ ಚಿಂತಾಮಣಿ ಮಾತನಾಡಿ, ‘ಜಿಲ್ಲೆಯಲ್ಲಿ ಅಕ್ಟೋಬರ್ ಅಂತ್ಯದವರೆಗೆ 202 ಡೆಂಗಿ ಪ್ರಕರಣಗಳು ಪತ್ತೆಯಾಗಿದೆ. ಈ ಪೈಕಿ ಬೀದರ್‌ನಲ್ಲಿ 154, ಭಾಲ್ಕಿಯಲ್ಲಿ 12, ಹುಮನಾಬಾದ್‌ನಲ್ಲಿ 6, ಬಸವಕಲ್ಯಾಣದಲ್ಲಿ 15 ಹಾಗೂ ಔರಾದ್‌ನಲ್ಲಿ 15 ರೋಗಿಗಳು ಪತ್ತೆಯಾಗಿದ್ದಾರೆ. ರೋಗ ನಿಯಂತ್ರಣಕ್ಕಾಗಿ ಅರೋಗ್ಯ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ರವೀಂದ್ರ ರೆಡ್ಡಿ ಮಾತನಾಡಿ, ’ಸೊಳ್ಳೆ ಕಡಿತದಿಂದ ಹರಡುವ ರೋಗಗಳು ಮತ್ತು ಅವುಗಳನ್ನು ನಿಯಂತ್ರಿಸುವ ಕ್ರಮಗಳ ಬಗ್ಗೆ ಆಡಿಯೊ ಸಿ.ಡಿಯನ್ನು ಸಿದ್ಧ ಪಡಿಸಿ ಆಟೋಗಳ ಮುಖಾಂತರ ಎಲ್ಲ ಕಡೆ ಪ್ರಚಾರ ಮಾಡಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಅಂಬಾದಾಸ ಕೋರೆ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿ.ಜಿ.ರೆಡ್ಡಿ, ಆರೋಗ್ಯ ಇಲಾಖೆಯ ಕಾರ್ಯಕ್ರಮ ಅಧಿಕಾರಿಗಳಾದ ಡಾ.ರಾಜಶೇಖರ ಪಾಟೀಲ, ಡಾ.ಕೃಷ್ಣಾ ರೆಡ್ಡಿ, ಡಾ.ದೀಪಾ ಖಂಡ್ರೆ, ಡಾ.ಶರಣಯ್ಯ ಸ್ವಾಮಿ, ಡಾ.ಪ್ರವೀಣಕುಮಾರ, ಡಾ.ಅವಿನಾಶ ಎಖ್ಖೆಳ್ಳಿಕರ್, ಡಾ.ಶರಣಪ್ಪ ಮುಡ್ಡಾ, ಡಾ.ಗ್ಯಾನೇಶ್ವರ, ಡಾ.ಅಶೋಕ ಮೈಲಾರೆ, ಡಾ.ಅಪರ್ಣಾ, ಡಾ.ಭಗವಂತರಾವ್, ಫೈಲೇರಿಯಾ ನಿರೀಕ್ಷಕ ಮೆಹಬೂಬ್‌ಮಿಯಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT