ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧ್ವಜಾರೋಹಣಕ್ಕಿಲ್ಲ ಸಚಿವರು: ದಿಕ್ಕಿಲ್ಲದಂತಾದ ಬೀದರ್

ಡಬಲ್‌ ಎಂಜಿನ್‌ ಸರ್ಕಾರವಿದ್ದರೂ ಅಮೃತ ಮಹೋತ್ಸವದಲ್ಲಿ ನೌಕರ ಶಾಹಿಗೆ ಮಣೆ
Last Updated 13 ಆಗಸ್ಟ್ 2022, 19:45 IST
ಅಕ್ಷರ ಗಾತ್ರ

ಬೀದರ್: ಕರ್ನಾಟಕದ ಮುಕುಟ ಮಣಿಯಂತಿರುವ ಬೀದರ್‌ ಜಿಲ್ಲೆಯನ್ನು ಆಳುವ ಸರ್ಕಾರಗಳು ಅನೇಕ ವರ್ಷಗಳಿಂದ ನಿರ್ಲಕ್ಷಿಸುತ್ತ ಬಂದಿವೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಾದರೂ ಪ್ರಾತಿನಿಧ್ಯ ದೊರೆಯಬಹುದು ಎನ್ನುವ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ಜನರಿಗೆ ಮತ್ತೆ ನಿರಾಶೆ ಮೂಡಿದೆ. ಅಮೃತ ಗಳಿಗೆಯಲ್ಲಿ ಜಿಲ್ಲಾ ಕೇಂದ್ರದಲ್ಲಿ ಧ್ವಜಾರೋಹಣಕ್ಕೂ ಜನಪ್ರತಿನಿಧಿಗೆ ಅವಕಾಶ ಕಲ್ಪಿಸಿಲ್ಲ. ಹೀಗಾಗಿ ಒಟ್ಟಾರೆ ಬೀದರ್‌ ದಿಕ್ಕಿಲ್ಲದಂತಾಗಿದೆ.

ಬೀದರ್‌ ಜಿಲ್ಲೆಯವರೇ ಆದ ಪಶು ಸಂಗೋಪನೆ ಸಚಿವ ಪ್ರಭು ಚವಾಣ್‌ ಅವರಿಗೆ ಜಿಲ್ಲಾ ಉಸ್ತುವಾರಿ ಕೊಟ್ಟಾಗ ಕನಿಷ್ಠ ಪಕ್ಷ ಅಧಿಕಾರಿಗಳ ಮೇಲೆ ನಿಗಾ ಇಟ್ಟು ಅಭಿವೃದ್ಧಿ ಕಾರ್ಯಗಳ ವೇಗ ಹೆಚ್ಚಿಸಲು ಸಾಧ್ಯವಾಗಿತ್ತು. ಅವರನ್ನು ಕಡೆಗಣಿಸಿ ಕೇವಲ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿದ ನಂತರ ಅಡಳಿತ ವ್ಯವಸ್ಥೆ ಮೇಲೆ ನಿಗಾ ಕಡಿಮೆಯಾಗಿದೆ. ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರಿಗೆ ಜಿಲ್ಲಾ ಉಸ್ತುವಾರಿ ವಹಿಸಿದ ಮೇಲೆ ಬಹಳಷ್ಟು ಮಂದಿ ಜಿಲ್ಲೆಯ ಜನರಿಗೆ ಸಿಹಿ ಸುದ್ದಿ ಕೊಡಲಿದ್ದಾರೆ ಎಂದೇ ಭಾವಿಸಿದ್ದರು. ಆದರೆ ಅವರು ಮಧ್ಯಾಹ್ನ ಬಂದು ತರಾತುರಿಯಲ್ಲಿ ಸಭೆ ನಡೆಸಿ ಅರ್ಧ ದಿನದಲ್ಲೇ ಬೆಂಗಳೂರಿಗೆ ತೆರಳುವ ಕಾರಣ ಅಭಿವೃದ್ಧಿ ನಿಂತ ನೀರಾಗಿದೆ.

ಅಧಿಕಾರಿಗಳು ಸಾಮಾಜಿಕ ಸಂಘಟನೆಗಳು ಹಾಗೂ ಸಾರ್ವಜನಿಕರ ಮಾತಿಗೆ ಕವಡೆ ಕಾಸಿನ ಬೆಲೆ ಕೊಡುತ್ತಿಲ್ಲ. ಡಬಲ್‌ ಎಂಜಿನ್‌ ಸರ್ಕಾರವಿದ್ದರೂ ಅಭಿವೃದ್ಧಿ ನಿರೀಕ್ಷೆ ಮಟ್ಟದಲ್ಲಿ ಟೇಕ್‌ಅಪ್‌ ಆಗಿಲ್ಲ. ಇದರಿಂದ ಆಡತಳಿತ ಪಕ್ಷದ ಕಾರ್ಯಕರ್ತರಲ್ಲೂ ಅಸಮಾಧಾನ ಹೊಗೆ ಆಡುತ್ತಿದೆ. ಆದರೆ, ತಮ್ಮದೇ ಸರ್ಕಾರವಿರುವ ಕಾರಣ ಬಹಿರಂಗವಾಗಿ ಹೇಳುವ ಸ್ಥಿತಿಯಲ್ಲಿ ಇಲ್ಲ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಗಸ್ಟ್‌ 15ರಂದು ರಾಷ್ಟ್ರ ಧ್ವಜಾರೋಹಣ ನಡೆಯುತ್ತಿದೆ. ಆದರೆ, ಬೀದರ್‌ನಲ್ಲಿ ಜಿಲ್ಲಾ ನೆಹರೂ ಕ್ರೀಡಾಂಗಣ ಇದ್ದರೂ ನಾಲ್ಕು ವರ್ಷಗಳಿಂದ ಪೊಲೀಸ್‌ ಮೈದಾನದಲ್ಲೇ ಧ್ವಜಾರೋಹಣ ಮಾಡಲಾಗುತ್ತಿದೆ. ಹೊಸ ಕ್ರೀಡಾಂಗಣ ನಿರ್ಮಾಣಕ್ಕೆ ಹಳೆಯ ಕ್ರೀಡಾಂಗಣ ಕಟ್ಟಡ ಕೆಡವಲಾಯಿತು. ಎರಡು ವರ್ಷಗಳಲ್ಲಿ ಕಾಮಗಾರಿ ಮುಗಿಯಬೇಕಿತ್ತು. ಕಾಮಗಾರಿ ತೆವಳುತ್ತ ಸಾಗಿದ್ದು, ಇನ್ನೂ ಮುಗಿದಿಲ್ಲ. ಕಾಂಗ್ರೆಸ್‌ ಆಡಳಿತ ಅವಧಿಯಲ್ಲಿ ರಹೀಂ ಖಾನ್‌ ಕ್ರೀಡಾ ಸಚಿವರಾದರೂ ಯಾವುದೇ ಪ್ರಯೋಜನ ವಾಗಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೂ ಕ್ರೀಡಾಂಗಣದ ಕಾಮಗಾರಿ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ.

ನಗರದಲ್ಲೇ ಮೂರು ಬೃಹತ್‌ ಧ್ವಜ ಕಂಬ
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್‌ 13ರಂದು ಬೆಳಗಿನ ಜಾವ ಬೀದರ್‌ ಕೋಟೆಯೊಳಗೆ ವಸ್ತು ಸಂಗ್ರಹಾಲಯದ ಹಿಂಭಾಗದಲ್ಲಿ 15 ಮೀಟರ್‌ ಎತ್ತರದ ರಾಷ್ಟ್ರ ಧ್ವಜಾರೋಹಣ ಮಾಡಲಾಗಿದೆ. ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ 2020ರ ಜನವರಿಯಲ್ಲಿ ನಿರ್ಮಿಸಿದ 100 ಅಡಿ ಎತ್ತರದ ಧ್ವಜ ಕಂಬದ ಮೇಲೆ ಈಗಾಗಲೇ ರಾಷ್ಟ್ರ ಧ್ವಜ ಹಾರಾಡುತ್ತಿದೆ. ನೆಹರೂ ಕ್ರೀಡಾಂಗಣದಲ್ಲಿ ನಿರ್ಮಿಸಲಾಗುತ್ತಿರುವ 100 ಅಡಿ ಎತ್ತರದ ಧ್ವಜ ಕಂಬದ ಮೇಲೆ ಆಗಸ್ಟ್‌ 15ರಂದು ಧ್ವಜ ಹಾರಾಡಲಿದೆ.

ನೆಹರೂ ಕ್ರೀಡಾಂಗಣದಲ್ಲೇ ಪ್ರತಿ ವರ್ಷದಂತೆ ಧ್ವಜಾರೋಹಣ ಕಾರ್ಯಕ್ರಮ ನಡೆಸಬೇಕು ಎಂದು 15 ದಿನಗಳ ಹಿಂದೆ ನಡೆದ ಸ್ವಾತಂತ್ರ್ಯೋತ್ಸವದ ಪೂರ್ವಭಾವಿ ಸಿದ್ಧತೆ ಸಭೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಮನವಿ ಮಾಡಿದ್ದರು. ಗ್ಲೋಬಲ್‌ ಸೋಷಿಯಲ್‌ ಆ್ಯಂಡ್‌ ವೆಲ್‌ಫೇರ್‌ ಫೆಡರೇಷನ್, ಫಸ್ಟ್‌ಹೆಲ್ಪಿಂಗ್‌ ಎಜುಕೇಶನ್ ಆ್ಯಂಡ್‌ ಚಾರಿಟಬಲ್‌ ಟ್ರಸ್ಟ್, ಭೀಮ್‌ ಆರ್ಮಿ, ದಲಿತ ಸಂಘರ್ಷ ಸಮಿತಿ, ಬುದ್ಧ ಬೆಳಕು ಟ್ರಸ್ಟ್, ಗೊಂಡ ವಿದ್ಯಾರ್ಥಿಗಳ ಸಂಘ, ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾದ ಜಿಲ್ಲಾ ಘಟಕ. ಸಿದ್ಧಗಂಗಾ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಶಿಗಳ ಸಂಘದ ಪದಾಧಿಕಾರಿಗಳೂ ಬಹಿರಂಗವಾಗಿಯೇ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಆದರೆ, ಜಿಲ್ಲಾಡಳಿತ ತನ್ನ ನಿರ್ಧಾರ ಬದಲಿಸಿಲ್ಲ.

‘ಅಮೃತ್ ಮಹೋತ್ಸವ ಸಂದರ್ಭದಲ್ಲೇ ಚುನಾಯಿತ ಪ್ರತಿನಿಧಿಗಳನ್ನು ದೂರವಿಟ್ಟು ಅಧಿಕಾರಿಗಳಿಂದ ಧ್ವಜಾರೋಹಣ ಮಾಡಿಸುವುದು ಸರಿಯಲ್ಲ. ಪಕ್ಷ ಯಾವುದೇ ಇರಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳೇ ಧ್ವಜ ಹಾರಿಸಬೇಕು’ ಎಂದು ಬಿಜೆಪಿ ಮುಖಂಡ ಸಂಗಮೇಶ ನಾಸಿಗಾರ ಹೇಳುತ್ತಾರೆ.

‘ಬಿಜೆಪಿ ಜನರು ಕೊಟ್ಟ ಅಧಿಕಾರ ಬಳಸಿಕೊಳ್ಳದ ಸ್ಥಿತಿಯಲ್ಲಿ ಇದೆ. ಬೀದರ್‌ನಲ್ಲಿ ಧ್ವಜಾರೋಹಣಕ್ಕೂ ಒಬ್ಬ ಜನಪ್ರತಿನಿಧಿ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಸರ್ಕಾರ ಮತ್ತೆ ನೌಕರ ಶಾಹಿಗಳಿಗೆ ಅಧಿಕಾರ ಕೊಟ್ಟು ಕುಳಿತಿರುವುದು ಖಂಡನೀಯ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಜಿಲ್ಲಾಧಿಕಾರಿಯಿಂದಲೇ ಒಂದೇ ದಿನ ಮೂರು ಕಡೆ ಧ್ವಜಾರೋಹಣ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಮೃತ ಮಹೋತ್ಸವದ ಸಂದರ್ಭದಲ್ಲಿ ಪರಾಮಾಧಿಕಾರವನ್ನು ಬಳಸಿಕೊಳ್ಳದಿರುವುದು ಹಾಗೂ ಧ್ವಜಾರೋಹಣಕ್ಕೆ ಉಸ್ತುವಾರಿ ಸಚಿವರೇ ಇಲ್ಲದಿರುವುದು ದುರ್ಬಲ ಆಡಳಿತ ವ್ಯವಸ್ಥೆಯ ಕುರುಹು ಆಗಿ ಉಳಿಯಲಿದೆ’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ ಹೇಳುತ್ತಾರೆ.

ಮೂರು ಬಾರಿ ಧ್ವಜಾರೋಹಣ
ಜಿಲ್ಲಾಧಿಕಾರಿ ಒಂದೇ ದಿನ ಮೂರು ಬಾರಿ ಧ್ವಜಾರೋಹಣ ಮಾಡಲಿದ್ದಾರೆ. ಬೆಳಿಗ್ಗೆ 8 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಆವರಣ, 9 ಗಂಟೆಗೆ ಪೊಲೀಸ್‌ ಕವಾಯತು ಮೈದಾನ ಹಾಗೂ ಮಧ್ಯಾಹ್ನ 12 ಗಂಟೆಗೆ ನೆಹರೂ ಮೈದಾನದಲ್ಲಿ 100 ಅಡಿ ಎತ್ತರದ ಕಂಬದ ಮೇಲೆ ಧ್ವಜಾರೋಹಣ ಮಾಡಲಿದ್ದಾರೆ.

‘ಶಾಲಾ ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಮಹಿಳೆಯರು, ಅಂಗವಿಕಲರು ಅಂದು ಒಂದು ಮೈದಾನದಿಂದ ಇನ್ನೊಂದು ಮೈದಾನಕ್ಕೆ ಅಲೆದಾಡಬೇಕಾಗಲಿದೆ. 14 ದಿನ ನೆಹರೂ ಕ್ರೀಡಾಂಗಣದಲ್ಲೇ ಅನೇಕ ಕಾರ್ಯಕ್ರಮ ನಡೆಸಿದ ಜಿಲ್ಲಾಡಳಿತ ಕೊನೆಯ ಕ್ಷಣದಲ್ಲಿ ಕ್ಷುಲ್ಲಕ ನೆಪ ಹೇಳುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮಹತ್ವದ ದಿನ ಜಿಲ್ಲಾ ಉಸ್ತುವಾರಿ ಸಚಿವರಿಲ್ಲದ್ದು ಕಪ್ಪು ಚುಕ್ಕೆಯಾಗಿ ಇತಿಹಾಸಲ್ಲಿ ಉಳಿದುಕೊಳ್ಳಲಿದೆ’ ಎಂದು ಭಾರತೀಯ ರಿಪಬ್ಲಿಕನ್ ಪಾರ್ಟಿ ಆಫ್‌ ಇಂಡಿಯಾ(ಅಂಬೇಡ್ಕರ್)ದ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ ಗೋರನಾಳಕರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT