ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಕ್ರಿದ್: ನಿಯಮ ಪಾಲನೆಗೆ ಸೂಚನೆ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಶಾಂತಿ ಪಾಲನಾ ಸಭೆ
Last Updated 30 ಜುಲೈ 2020, 16:57 IST
ಅಕ್ಷರ ಗಾತ್ರ

ಬೀದರ್‌: 'ಮುಸ್ಲಿಮರು ಬಕ್ರಿದ್ ಹಬ್ಬದ ಆಚರಣೆ ವೇಳೆ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು' ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ತಿಳಿಸಿದರು.

ಇಲ್ಲಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಆವರಣದಲ್ಲಿ ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

"ಕೋವಿಡ್-19 ಸೋಂಕು ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಇದರ ನಿಯಂತ್ರಣಕ್ಕಾಗಿ ಜಿಲ್ಲಾಡಳಿತವು ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ. ಸಾರ್ವಜನಿಕರ ಸಹಕಾರ ಕೂಡ ಅಗತ್ಯವಾಗಿದೆ' ಎಂದು ಮನವರಿಕೆ ಮಾಡಿದರು.

"ಸರ್ಕಾರವು ಬಕ್ರಿದ್ ಪ್ರಯುಕ್ತ ಹೊರಡಿಸಿರುವ ಸುತ್ತೋಲೆಗಳಲ್ಲಿನ ಮಾಹಿತಿಯು ಈಗಾಗಲೇ ಮಾಧ್ಯಮಗಳಲ್ಲಿ ವರದಿಯಾಗಿದೆ. ಅದನ್ನು ತಪ್ಪದೆ ಪಾಲಿಸಬೇಕು' ಎಂದು ತಿಳಿಸಿದರು.

"ಕೋವಿಡ್-19 ದೊಡ್ಡ ಕಾಯಿಲೆ ಎನ್ನುವ ಭಯವನ್ನು ನಾವೆಲ್ಲರೂ ಬಿಡೋಣ. ಬಹಳಷ್ಟು ಜನರು ಈಗಾಗಲೇ ಕೋವಿಡ್‍ನಿಂದ ಗುಣಮುಖರಾಗಿದ್ದಾರೆ. ಮತ್ತೆ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ' ಎಂದು ಹೇಳಿದರು.

'ಕೋವಿಡ್‌ ಸೋಂಕು ಹರಡುವಿಕೆಯನ್ನು ತಡೆಯಲು ಇರುವ ಮಾರ್ಗಗಳೆಂದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಮಾಸ್ಕ್‌ ಧರಿಸುವುದು' ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್. ಮಾತನಾಡಿ, 'ಬೀದರ್‌ನಲ್ಲಿ ಕೋವಿಡ್-19 ಸೋಂಕಿನಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಆದ್ದರಿಂದ ನಾವು ಸಾಕಷ್ಟು ಮುಂಜಾಗ್ರತೆ ವಹಿಸಬೇಕು. ಬಹಳಷ್ಟು ಜನರಿಗೆ ಬಕ್ರಿದ್ ಹಬ್ಬ ಆಚರಣೆ ವೇಳೆಯಲ್ಲಿ ಯಾವ ಯಾವ ನಿಯಮಗಳನ್ನು ಪಾಲನೆ ಮಾಡಬೇಕು ಎನ್ನುವುದು ಗೊತ್ತಿರುವುದಿಲ್ಲ. ಆದ್ದರಿಂದ ಸರ್ಕಾರವು ಹೊರಡಿಸಿರುವ ನಿಯಮಗಳ ಪಾಲನೆ ಮಾಡುವಂತೆ ಸಮಾಜದ ಮುಖಂಡರು ಅರಿವು ಮೂಡಿಸಬೇಕು. ಸರ್ಕಾರದ ಮಾರ್ಗಸೂಚಿಯ ಮಾಹಿತಿಯನ್ನು ವಾಟ್ಸ್‌ಆ್ಯಪ್‌ ಮತ್ತು ಫೇಸ್‌ಬುಕ್‌ ಮೂಲಕವೂ ಶೇರ್ ಮಾಡಿ ಜನರಿಗೆ ತಲುಪಿಸಬೇಕು' ಎಂದು ಹೇಳಿದರು.


"ಕನಿಷ್ಠ 6 ಅಡಿ ಅಂತರ ಕಾಯ್ದುಕೊಂಡು ನಮಾಜ್ ಮಾಡಬೇಕು. ಮಸೀದಿ ಪ್ರವೇಶದ ಮುನ್ನ ದೇಹದ ತಾಪಮಾನ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೈಗಳನ್ನು ಸಾಬೂನು ಅಥವಾ ಸ್ಯಾನಿಟೈಸರ್‌ನಿಂದ ಶುಚಿಗೊಳಿಸಬೇಕು. ಮಸೀದಿಗಳಲ್ಲಿರುವ ಧಾರ್ಮಿಕ ಗ್ರಂಥಗಳನ್ನು ಮುಟ್ಟಬಾರದು. ಹಸ್ತಲಾಘವ ಮತ್ತು ಆಲಿಂಗನ ಮಾಡದಂತೆ ಎಚ್ಚರಿಕೆ ವಹಿಸಬೇಕು' ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಎಂ.ಬ್ಯಾಕೋಡ್ ಮಾತನಾಡಿದರು. ಮುಖಂಡರಾದ ನಬಿ ಖುರೇಶಿ, ಎಂ.ಎಫ್.ಶಾಹೀನ್ ಪಟೇಲ್, ಸಯ್ಯದ್ ಮನ್ಸೂರ್‌ ಅಹಮ್ಮದ್ ಖಾದ್ರಿ, ಮಹಮ್ಮದ್ ಅಸಿಪುದ್ದೀನ್, ಮಹಮ್ಮದ್ ಇರಾಸತ್ ಅಲಿ, ಮಹಮ್ಮದ್ ನಿಜಾಮುದ್ದೀನ್, ಎನ್.ಆರ್.ವರ್ಮಾ, ಟೌನ್ ಸಿಪಿಐ ಡಿ.ಬಿ.ರಾಜಣ್ಣ, ಗ್ರಾಮೀಣ ಸಿಪಿಐ ರಾಮಣ್ಣ, ಮಾರ್ಕೇಟ್ ಸಿಪಿಐ ಶ್ರೀಕಾಂತ, ಸಂಚಾರ ಇನ್‌ಸ್ಪೆಕ್ಟರ್‌ ಉಮೇಶ ಇದ್ದರು. ಡಿವೈಎಸ್‍ಪಿ ಬಸವರಾಜ ಹೀರಾ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT