ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿದ್ಯಾರ್ಥಿಗಳಿಗೆ ಸಾಲ ನಿರಾಕರಿಸುವಂತಿಲ್ಲ–ಸಾಗರ ಖಂಡ್ರೆ

Published 3 ಆಗಸ್ಟ್ 2024, 16:16 IST
Last Updated 3 ಆಗಸ್ಟ್ 2024, 16:16 IST
ಅಕ್ಷರ ಗಾತ್ರ

ಬೀದರ್‌: ‘ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಸಾಲ ನಿರಾಕರಿಸುತ್ತಿರುವುದರ ಬಗ್ಗೆ ಮಾಹಿತಿ ಬಂದಿದ್ದು, ಯಾವುದೇ ಕಾರಣಕ್ಕೂ ಸಾಲ ಕೊಡಲು ನಿರಾಕರಿಸಬಾರದು’ ಎಂದು ಸಂಸದ ಸಾಗರ ಖಂಡ್ರೆ ತಾಕೀತು ಮಾಡಿದರು.

ನಗರದಲ್ಲಿ ಶನಿವಾರ ನಡೆದ ಜಿಲ್ಲಾ ಲೀಡ್ ಬ್ಯಾಂಕ್, ಜಿಲ್ಲಾ ಸಲಹಾ ಸಮಿತಿ ಹಾಗೂ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿಯ ಅಡಿಯಲ್ಲಿ ಜಿಲ್ಲೆಯ ವಿವಿಧ ಬ್ಯಾಂಕ್ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ನಿರ್ದೇಶನ ನೀಡಿದರು.

ಉನ್ನತ ಶಿಕ್ಷಣದ ಬಗ್ಗೆ ವಿಸ್ತೃತವಾಗಿ ಮಾಹಿತಿ ಪಡೆದ ಅವರು, ಕೆಲವು ಬ್ಯಾಂಕ್ ಗಳು ರಿಕವರಿ ನೆಪದಲ್ಲಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಸಾಲ ನೀಡಲು ನಿರಾಕರಿಸುತ್ತಿರುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಹೀಗೆ ಆಗಬಾರದು ಎಂದು ಸೂಚಿಸಿದರು.

ಸರ್ಕಾರದ ವಿವಿಧ ಯೋಜನೆಗಳು ಯಶಸ್ವಿಯಾಗಬೇಕಾದರೆ ಬ್ಯಾಂಕುಗಳು ಫಲಾನುಭವಿಗಳಿಗೆ ಸಾಲ ನೀಡಬೇಕು. ಆದ್ಯತಾ ವಲಯಕ್ಕೆ ಎಷ್ಟು ಗುರಿ ಹೊಂದಲಾಗಿದೆಯೋ ಅಷ್ಟೂ ನೀಡಬೇಕು. ಈ ನಿಟ್ಟಿನಲ್ಲಿ ಬ್ಯಾಂಕ್ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದರು.

ಸಭೆಯಲ್ಲಿ ಭಾಗವಹಿಸಿದ ಬ್ಯಾಂಕ್ ಅಧಿಕಾರಿಗಳಿಂದ ಆರ್.ಬಿ.ಐ, ನಬಾರ್ಡ್ ನೂತನ ಮಾರ್ಗಸೂಚಿಗಳ ಬಗ್ಗೆ ಮಾಹಿತಿ ಪಡೆದರು. ಪಿಎಂ ಸ್ವನಿಧಿ, ಪಿಎಂ ವಿಶ್ವಕರ್ಮ, ಪಿಎಂಇಜಿಪಿ, ಮುದ್ರಾ ಸಾಲ, ಪಿಎಂ ಸಾಮಾಜಿಕ ಭದ್ರತಾ ಯೋಜನೆಯ ವಿವರ ಕೇಳಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್‌ ಬದೋಲೆ ಹಾಗೂ ಬ್ಯಾಂಕ್‌ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT