ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಕೇಂದ್ರ ಘೋಷಣೆಗೆ ಆಗ್ರಹಿಸಿ ಹೋರಾಟ ತೀವ್ರ

ಬಸವಕಲ್ಯಾಣ: 15ರಂದು ನಗರದಲ್ಲಿ ಬೃಹತ್ ಪಾದಯಾತ್ರೆ ಆಯೋಜನೆ
Last Updated 12 ಡಿಸೆಂಬರ್ 2022, 5:37 IST
ಅಕ್ಷರ ಗಾತ್ರ

ಬಸವಕಲ್ಯಾಣ: ಬಸವಕಲ್ಯಾಣವನ್ನು ಜಿಲ್ಲಾ ಕೇಂದ್ರವಾಗಿಸುವುದಕ್ಕಾಗಿ ಹೋರಾಟ ತೀವ್ರಗೊಳ್ಳುವ ಲಕ್ಷಣಗಳು ಗೋಚರಿಸುತ್ತಿದ್ದು, ಡಿಸೆಂಬರ್ 15ರಂದು ಇದಕ್ಕಾಗಿ ನಗರದಲ್ಲಿ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

ಮೊದಲು ಕಲ್ಯಾಣ ಎಂದು ಕರೆಯಲಾಗುತ್ತಿದ್ದ ಈ ನಗರ ಚಾಲುಕ್ಯರ ರಾಜಧಾನಿಯಾಗಿ ಮೆರೆದಿತ್ತು. ಅವರು ಕಟ್ಟಿಸಿದ ಕೋಟೆ ಹಾಗೂ ಇತರ ಐತಿಹಾಸಿಕ ಸ್ಮಾರಕಗಳು ಇಲ್ಲಿವೆ.

12ನೇ ಶತಮಾನದಲ್ಲಿ ಬಸವಣ್ಣನವರು ಕೈಗೊಂಡ ಸಮಾಜ ಪರಿವರ್ತನೆಯ ಪ್ರಯತ್ನದಿಂದ ಈ ಸ್ಥಳದ ಮಹತ್ವ ಇನ್ನಷ್ಟು ಹೆಚ್ಚಿತು. ಈಗ ಮತ್ತೆ ಈ ಸ್ಥಳಕ್ಕೆ ಅಂದಿನ ಗತವೈಭವ ಮರಳಿಸುವ ಪ್ರಯತ್ನವಾಗಿ ₹ 620 ಕೋಟಿ ವೆಚ್ಚದ ಬೃಹತ್ ಅನುಭವ ಮಂಟಪವನ್ನು ಸರ್ಕಾರ ಇಲ್ಲಿ ನಿರ್ಮಿಸುತ್ತಿದೆ. ಬಸವಣ್ಣನವರ ಪರುಷಕಟ್ಟೆಯ ಅಭಿವೃದ್ಧಿಯೂ ಆರಂಭಗೊಂಡಿದೆ. ಈ ಕಾರಣಕ್ಕಾಗಿ ಈ ಸ್ಥಳ ಶೀಘ್ರದಲ್ಲಿಯೇ ಅಂತರರಾಷ್ಟ್ರೀಯ ಪ್ರವಾಸಿಗರ ಗಮನ ಸೆಳೆಯುವುದು ನಿಶ್ಚಿತ.

ಇದಕ್ಕೆ ಪೂರಕವಾಗಿ ಇಲ್ಲಿ ಇನ್ನಷ್ಟು ಸೌಲಭ್ಯಗಳು ದೊರಕಬೇಕು ಎಂಬ ಕಾರಣಕ್ಕಾಗಿ ಇದನ್ನು ಜಿಲ್ಲಾ ಕೇಂದ್ರವಾಗಿಸುವುದು ಅತ್ಯಂತ ಅವಶ್ಯಕವಾಗಿದೆ ಎಂಬ ಕೂಗು ಎದ್ದಿದೆ. ಹಾಗೆ ನೋಡಿದರೆ, ಜಿಲ್ಲಾ ಕೇಂದ್ರವಾಗಿಸುವ ಬೇಡಿಕೆ ದಶಕದ ಹಿಂದಿನದ್ದಾಗಿದೆ. ಇದೇ ತಾಲ್ಲೂಕಿನಲ್ಲಿದ್ದ ಹುಲಸೂರನ್ನು ತಾಲ್ಲೂಕು ಕೇಂದ್ರವೆಂದು ಘೋಷಿಸುವುದಕ್ಕಾಗಿ ಹಲವಾರು ಸಲ ಕೈಗೊಂಡ ಪ್ರತಿಭಟನೆ ಮತ್ತು ಧರಣಿಗಳಲ್ಲಿ ಈ ಬಗ್ಗೆಯೂ ಬೇಡಿಕೆ ಸಲ್ಲಿಸಲಾಗಿತ್ತು. ಹುಲಸೂರಗೆ ತಾಲ್ಲೂಕು ಸ್ಥಾನ ದೊರೆತ ನಂತರದಲ್ಲಿ ಈಗ ಇದಕ್ಕಾಗಿ ಪ್ರತ್ಯೇಕ ಚಳವಳಿ ನಡೆಯುತ್ತಿದೆ.

ಕೆಲ ತಿಂಗಳ ಹಿಂದೆ ಹೋರಾಟ ಸಮಿತಿ ನೇತೃತ್ವದಲ್ಲಿ ಒಂದು ಸಲ ಧರಣಿ ನಡೆಸಿ ಮನವಿಪತ್ರ ಸಲ್ಲಿಸಲಾಗಿತ್ತು. ಈಗ ಮತ್ತೆ ಬೃಹತ್ ಪಾದಯಾತ್ರೆ ನಡೆಸುವುದಕ್ಕೆ ಕೆಲ ದಿನಗಳಿಂದ ಸಿದ್ಧತೆ ನಡೆದಿದೆ. ಡಿಸೆಂಬರ್ 15ರಂದು ನಡೆಯುವ ಪ್ರತಿಭಟನೆಯಲ್ಲಿ ಜಿಲ್ಲೆಯ ಎಲ್ಲ ಮಠಾಧೀಶರು, ರಾಜಕೀಯ ಮುಖಂಡರು, ಗಣ್ಯರು ಭಾಗವಹಿಸಲಿದ್ದಾರೆ.

‘ಸುಮಾರು 10 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ನಗರದ ಬಸವೇಶ್ವರ ದೇವಸ್ಥಾನದಿಂದ ಮುಖ್ಯ ರಸ್ತೆಯ ಮೂಲಕ ತಹಶೀಲ್ದಾರ್ ಕಚೇರಿವರೆಗೆ ಪಾದಯಾತ್ರೆ ನಡೆಯಲಿದೆ’ ಎಂದು ಹೋರಾಟ ಸಮಿತಿ ಸಂಚಾಲಕ ಎಂ.ಜಿ.ರಾಜೋಳೆ ತಿಳಿಸಿದ್ದಾರೆ. ‘ಈಗಾಗಲೇ ತಾಲ್ಲೂಕು ಕೇಂದ್ರವೆಂದು ಘೋಷಿಸಿರುವ ಹುಲಸೂರಗೆ ಇನ್ನೂ ಕೆಲ ಗ್ರಾಮ ಗಳ ಸೇರ್ಪಡೆ ಆಗಬೇಕಾಗಿದೆ. ಆದ್ದ ರಿಂದ ಈ ಬಗ್ಗೆಯೂ ಸರ್ಕಾರಕ್ಕೆ ಆಗ್ರಹಿಸುವುದಕ್ಕಾಗಿ ಅಂದು ಹುಲಸೂ ರನಿಂದಲೂ ವಿವಿಧ ಗ್ರಾಮಗಳ ಮೂಲಕ ಬೈಕ್ ರ‍್ಯಾಲಿ ಬಸವಕಲ್ಯಾಣಕ್ಕೆ ಬರಲಿದೆ. ಅದಾದ ಮೇಲೆ ಇಲ್ಲಿ ಪಾದಯಾತ್ರೆ ನಡೆಯುವುದು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT