ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಾದಿ ಶರಣರಿಂದ ವೈಚಾರಿಕ ಕ್ರಾಂತಿ

ತಿಂಗಳ ಅನುಭವ ಮಂಟಪ ಕಾರ್ಯಕ್ರಮ: ಬಸವೇಶ್ವರ ಹೀರಾ
Last Updated 13 ಡಿಸೆಂಬರ್ 2019, 12:47 IST
ಅಕ್ಷರ ಗಾತ್ರ

ಬೀದರ್: ‘ಬಸವಾದಿ ಶರಣರು ಹನ್ನೆರಡನೆಯ ಶತಮಾನದಲ್ಲಿ ವೈಚಾರಿಕ ಕ್ರಾಂತಿಯನ್ನೇ ಮಾಡಿದ್ದರು’ ಎಂದು ಡಿವೈಎಸ್‌ಪಿ ಶರಣಬಸವೇಶ್ವರ ಹೀರಾ ಅಭಿಪ್ರಾಯಪಟ್ಟರು.

ಇಲ್ಲಿಯ ವಿದ್ಯಾನಗರ ಕಾಲೊನಿಯ ಡಾ.ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ಬುಧವಾರ ಆಯೋಜಿಸಿದ್ದ 111ನೇ ತಿಂಗಳ ಅನುಭವ ಮಂಟಪ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಅಂದು ಬಸವಣ್ಣನವರು ಅನುಭವ ಮಂಟಪವೆಂಬ ವಿಶ್ವದ ಮೊಟ್ಟ ಮೊದಲ ಸಂಸತ್ತನ್ನು ಸ್ಥಾಪಿಸಿ, ಜಾತಿ, ಮತ ಭೇದವಿಲ್ಲದೆ, ಸಕಲ ಜೀವಿಗಳ ಕಲ್ಯಾಣ ಬಯಸುವ ಕಲ್ಯಾಣ ರಾಜ್ಯವನ್ನು ನಿರ್ಮಿಸಿದ್ದರು’ ಎಂದು ನುಡಿದರು.

‘ಪ್ರಸ್ತುತ ದೇಶ ವೈಜ್ಞಾನಿಕವಾಗಿ ಮುಂದುವರಿಯುತ್ತಿದೆ. ಆದರೆ, ಮಕ್ಕಳಿಗೆ ಉತ್ತಮ ಸಂಸ್ಕಾರ ದೊರಕುತ್ತಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

‘ಪಾಲಕರು ಮಕ್ಕಳಿಗೆ ಶರಣರು, ಸಂತರು, ದಾಸರ ಜೀವನ ಚರಿತ್ರೆ ಓದುವಂತೆ ಪ್ರೇರೇಪಿಸಬೇಕು’ ಎಂದರು.

ಭಾಲ್ಕಿಯ ಎಂ.ಆರ್.ಎ. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಅಶೋಕ ರಾಜೋಳೆ ಮಾತನಾಡಿ,‘ಶರಣರ ವಚನಗಳಲ್ಲಿ ವ್ಯಕ್ತಿಯ ಅಂತರಂಗ, ಬಹಿರಂಗ ಶುದ್ಧಗೊಳಿಸುವ ಶಕ್ತಿ ಇದೆ’ ಎಂದರು.

‘ಇಂದು ಪಠ್ಯಕ್ರಮದಲ್ಲಿ ನೈತಿಕ ಶಿಕ್ಷಣದ ಕೊರತೆ ಇದೆ. ನೀತಿ ಇಲ್ಲದ ಶಿಕ್ಷಣ, ಪ್ರೀತಿ ಇಲ್ಲದ ಶಾಸ್ತ್ರ ಬೇಕಾಗಿಲ್ಲ. ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವುದು ಅಗತ್ಯವಾಗಿದೆ’ ಎಂದು ತಿಳಿಸಿದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಮಹಾಲಿಂಗ ದೇವರು ಮಾತನಾಡಿ, ಶರಣರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ನೆಮ್ಮದಿಯ ಜೀವನ ಸಾಗಿಸಬಹುದು’ ಎಂದು ತಿಳಿಸಿದರು.

ಉಪನ್ಯಾಸಕ ಸೋಮನಾಥ ಪಾಟೀಲ ಮಾತನಾಡಿದರು. ಪ್ರೊ.ಎಸ್.ಬಿ.ಬಿರಾದಾರ ಅಧ್ಯಕ್ಷತೆ ವಹಿಸಿದ್ದರು.

ಪ್ರಸಾದ ನಿಲಯದ ವ್ಯವಸ್ಥಾಪಕ ಶ್ರೀಕಾಂತ ಸ್ವಾಮಿ, ಮಲ್ಲಿಕಾರ್ಜುನ ಹುಡಗೆ, ಎಂ.ಜಿ.ಗಂಗನಪಳ್ಳಿ, ಆರ್.ಎಸ್. ಬಿರಾದಾರ, ಸಂಗ್ರಾಮಪ್ಪ ಬಿರಾದಾರ, ಗುರುನಾಥ ಬಿರಾದಾರ, ನೀಲಕಂಠ ಬಿರಾದಾರ, ಸಿದ್ರಾಮಯ್ಯ ಹಿರೇಮಠ ಇದ್ದರು.

ಚನ್ನಬಸಪ್ಪ ನೌಬಾದೆ, ವಚನಶ್ರೀ ನೌಬಾದೆ, ಕಿರಣಕುಮಾರ ಹಿರೇಮಠ ವಚನ ಗಾಯನ ಮಾಡಿದರು. ರಾವ್‌ಬಹಾದ್ದೂರ್‌ ಮಹಾಬಳೇಶ್ವರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪ್ರೊ.ಮಂಗಳಾ ಪಾಟೀಲ ಸ್ವಾಗತಿಸಿದರು. ಪ್ರೊ.ಉಮಾಕಾಂತ ಮೀಸೆ ನಿರೂಪಿಸಿದರು. ನಾಗೇಶ ಬಿರಾದಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT