ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ ಚುನಾವಣೆ: ಆಕಾಂಕ್ಷಿಗಳು ಬೆಂಗಳೂರಿಗೆ ದೌಡು

ಟಿಕೆಟ್ ಬಗ್ಗೆ ಮತದಾರರಲ್ಲಿ ಹೆಚ್ಚಿದ ಕುತೂಹಲ
Last Updated 18 ಮಾರ್ಚ್ 2021, 4:04 IST
ಅಕ್ಷರ ಗಾತ್ರ

ಬಸವಕಲ್ಯಾಣ: ಚುನಾವಣೆಯ ಮತದಾನದ ದಿನಾಂಕ ನಿಗದಿ ಆಗುತ್ತಿದ್ದಂತೆಯೇ ಇಲ್ಲಿನ ವಿವಿಧ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು ವರಿಷ್ಠರ ಮನ ಒಲಿಸುವುದಕ್ಕಾಗಿ ಬೆಂಗಳೂರಿಗೆ ದೌಡಾಯಿಸಿದ್ದು ರಾಜಕೀಯ ಚಟುವಟಿಕೆಗಳು ಅಲ್ಲಿಗೆ ವರ್ಗಾವಣೆಗೊಂಡಿವೆ.

ಶಾಸಕ ಬಿ.ನಾರಾಯಣರಾವ್ ಅವರ ನಿಧನದ ಬಳಿಕ ಐದು ತಿಂಗಳಿಂದ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ವಿವಿಧ ಚಟುವಟಿಕೆಗಳಲ್ಲಿ ನಿರತರಾಗಿದ್ದರು. ಎರಡೂ ಪಕ್ಷಗಳ ರಾಜ್ಯ ಘಟಕದ ಅಧ್ಯಕ್ಷರು ಹಾಗೂ ವರಿಷ್ಠರು ಇಲ್ಲಿಗೆ ಭೇಟಿ ನೀಡಿದ್ದಾರೆ. ಅವರ ಸಮ್ಮುಖದಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಿ ಆಕಾಂಕ್ಷಿಗಳು ಶಕ್ತಿ ಪ್ರದರ್ಶನ ಕೂಡ ನಡೆಸಿದರು. ಈಚೆಗೆ ತಮ್ಮ ಮುಖಂಡರಿಗೆ ಟಿಕೆಟ್ ಸಿಗಲೆಂದು ಪ್ರಾರ್ಥಿಸಿ ಅನೇಕ ಬೆಂಬಲಿಗರು ಮಠ, ಮಂದಿರಗಳಲ್ಲಿ ತೆಂಗು ಒಡೆದು, ಪಾದಯಾತ್ರೆ, ಪೂಜೆ ಆಯೋಜಿಸಿ ಪ್ರಾರ್ಥನೆ ಕೂಡ ಸಲ್ಲಿಸಿದ್ದಾರೆ.

ಬಿಜೆಪಿಯಲ್ಲಿ 16 ಹಾಗೂ ಕಾಂಗ್ರೆಸ್‌ನಲ್ಲಿ 22 ಆಕಾಂಕ್ಷಿಗಳಿದ್ದಾರೆ. ಜೆಡಿಎಸ್‌ನಿಂದಲೂ ಕೆಲವರು ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದಾರೆ. ಏನೇ ಮಾಡಿದರೂ ಯಾವುದೇ ಪಕ್ಷದ ಟಿಕೆಟ್ ಇನ್ನುವರೆಗೆ ಯಾರಿಗೂ ಕಾಯಂ ಆಗಿಲ್ಲ. ಇದಕ್ಕಾಗಿ ಮೊದಲಿನಿಂದಲೂ ಬೆಂಗಳೂರು, ದೆಹಲಿ ಮಟ್ಟದಲ್ಲಿ ತೆರೆ ಮರೆಯಲ್ಲಿ ಪ್ರಯತ್ನಗಳು ಸಾಗಿದ್ದವು. ಆದರೆ, ಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ಅಲ್ಪ ಸಮಯ ಇರುವ ಕಾರಣ ಎಲ್ಲರೂ ಅವರವರ ನಾಯಕರನ್ನು ಹುಡುಕಿಕೊಂಡು ಹೋಗುವಂತಾಗಿದೆ. ತಮ್ಮ ತಮ್ಮ ಊರಲ್ಲಿ ಚಾತಕ ಪಕ್ಷಿಗಳಂತೆ ಕಾಯುತ್ತ ಕುಳಿತಿರುವ ಅವರ ಬೆಂಬಲಿಗರು ಮುಖಂಡರ ಮೊಬೈಲ್‌ಗಳಿಗೆ ಸಂಪರ್ಕಿಸಿ ಟಿಕೆಟ್ ಏನಾಯ್ತು ಎಂದು ವಿಚಾರಿಸುತ್ತಿರುವುದು ಕಂಡು ಬರುತ್ತಿದೆ.

ನೀತಿ ಸಂಹಿತೆ ಜಾರಿ: ಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ನೀತಿ ಸಂಹಿತೆ ಜಾರಿಯಾಗಿದ್ದು ತಾಲ್ಲೂಕು ಆಡಳಿತ, ನಗರಸಭೆ, ಗ್ರಾಮ ಪಂಚಾಯಿತಿಯವರು ಸಕ್ರಿಯರಾಗಿ ರಾಜಕೀಯ ಮುಖಂಡರ ಭಾವಚಿತ್ರ ಗಳಿರುವ ಕಟೌಟ್, ಬ್ಯಾನರ್‌ಗಳನ್ನು ತೆರವುಗೊಳಿಸಿದ್ದಾರೆ. ಸಭೆ, ಸಮಾರಂಭ ಗಳಿಗೆ ಕಡಿವಾಣ ಹಾಕಲಾಗಿದೆ.

ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅವರು ಬುಧವಾರ ಇಲ್ಲಿಗೆ ಭೇಟಿ ನೀಡಿ ಚುನಾವಣಾ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಉಪ ವಿಭಾಗಾಧಿಕಾರಿ ಭುವನೇಶ ಪಾಟೀಲ, ತಹಶೀಲ್ದಾರ್ ಸಾವಿತ್ರಿ ಸಲಗರ ಅವರು ಅಧಿಕಾರಿಗಳ ಸಭೆ ಆಯೋಜಿಸಿ ಚುನಾವಣೆ ಸಿದ್ಧತೆ ಕೈಗೊಂಡಿದ್ದಾರೆ. ಪೊಲೀಸ್ ಅಧಿಕಾರಿಗಳು, ಪೌರಾಯುಕ್ತರು, ತಾಲ್ಲೂಕು ಪಂಚಾಯಿತಿ ಇಒ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT