ಮಂಗಳವಾರ, ಮೇ 11, 2021
25 °C
ಬಿಜೆಪಿ ಅಭ್ಯರ್ಥಿ: ಶರಣು ಸಲಗರ

Interview| ಅನುಕಂಪ ಪರಿಣಾಮ ಬೀರಲ್ಲ: ಬಸವಕಲ್ಯಾಣ ಬಿಜೆಪಿ ಅಭ್ಯರ್ಥಿ ಶರಣು ಸಲಗರ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಶಿಕ್ಷಕ ಹುದ್ದೆಗೆ ರಾಜೀನಾಮೆ ಕೊಟ್ಟು ರಾಜಕೀಯ ಕ್ಷೇತ್ರಕ್ಕೆ ಧುಮುಕಿರುವ ಶರಣು ಸಲಗರ ಪಕ್ಷದಲ್ಲಿ ಹಲವು ಹಿರಿಯ ಮುಖಂಡರಿದ್ದರೂ ಬಿಜೆಪಿ ಟಿಕೆಟ್‌ ಪಡೆದವರು. ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ.  ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಸಾರ ಇಲ್ಲಿದೆ.

l ಗೆದ್ದರೆ ನೀವು ಮಾಡುವ ಅಭಿವೃದ್ಧಿ ಕಾರ್ಯಗಳೇನು?

–ಬಸವಕಲ್ಯಾಣದಲ್ಲಿರುವ ತ್ರಿಪುರಾಂತ ಕೆರೆ ತುಂಬಿಸುವುದು, ಏತ ನೀರಾವರಿ ಯೋಜನೆ ಕಾಮಗಾರಿ, ಅನುಭವ ಮಂಟಪ ಕಾಮಗಾರಿಗೆ ವೇಗ ನೀಡುವುದು, ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿ ಪಡಿಸುವುದು ಮತ್ತು ಗುಡಿಸಲು ರಹಿತ ಕ್ಷೇತ್ರವಾಗಿ ಮಾಡುವುದು ನನ್ನ ಗುರಿ.

l ಮರಾಠಾ ಸಮುದಾಯದವರು ನಿಮಗೆ ಬೆಂಬಲ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾತಿದೆಯಲ್ಲ?

–ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಕೆಲ ಮರಾಠಾ ಮುಖಂಡರು ಅಪಸ್ವರ ಎತ್ತಿರುವುದು ಸಹಜ. ಮರಾಠಾ ಸಮುದಾಯದವರು ಬಿಜೆಪಿ ಜೊತೆ ಇದ್ದಾರೆ. ಈಗಾಗಲೇ ಮಾಜಿ ಶಾಸಕ ಎಂ.ಜಿ.ಮುಳೆ ನನಗೆ ಬಹಿರಂಗವಾಗಿ ಬೆಂಬಲ ನೀಡಿರುವುದೇ ಇದಕ್ಕೆ ಸಾಕ್ಷಿ.

l ಬಿಜೆಪಿಯಲ್ಲಿಯ ಬಂಡಾಯ ನಿಮಗೆ ಅಡ್ಡಿಯಾಗಲಿದೆಯೇ?

–ನನ್ನೊಂದಿಗೆ ಬಿಜೆಪಿ ಟಿಕೆಟ್‌ ಕೇಳಿದವರೇ ವಿರೋಧ ವ್ಯಕ್ತಪಡಿಸಿದ್ದಾರೆ ಹೊರತು ಪಕ್ಷದ ಕಾರ್ಯಕರ್ತರಲ್ಲ. ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಕ್ಷದ ಅಧಿಕೃತ ಅಭ್ಯರ್ಥಿಯನ್ನೇ ಬೆಂಬಲಿಸಲಿದ್ದಾರೆ. ಅಶಿಸ್ತು ತೋರಿಸುವವರಿಗೆ ಪಕ್ಷದಲ್ಲಿ ಮಾನ್ಯತೆ ಇಲ್ಲ. ಅಂಥವರನ್ನು ಕಾರ್ಯಕರ್ತರೂ ಬೆಂಬಲಿಸುವುದಿಲ್ಲ. ಪಕ್ಷೇತರ ಅಭ್ಯರ್ಥಿಯಿಂದ ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರದು.

l ಜಿಲ್ಲೆಯ ರಾಜಕೀಯದಲ್ಲಿ ನೀವು ಹೊಸಬರು..

– ಕಾರ್ಯಕರ್ತರು ಸಂಘಟಿತರಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. 70 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌ನ ಅನುಭವಿ ಅಭ್ಯರ್ಥಿಗಳು ಸೋಲನುಭವಿಸಿದ ಉದಾಹರಣೆಗಳು ನಮ್ಮ ಮುಂದಿವೆ. ಅನುಭವಿ ಪಕ್ಷೇತರ ಅಭ್ಯರ್ಥಿಗಳು ಚುನಾವಣೆಯಲ್ಲಿ ಬಿಜೆಪಿಯ ಎದುರು ಠೇವಣಿ ಕಳೆದುಕೊಳ್ಳಲಿದ್ದಾರೆ.

l ಕಾಂಗ್ರೆಸ್‌ ಅಭ್ಯರ್ಥಿಯ ಅನುಕಂಪದ ಅಲೆ ನಿಮಗೆ ತೊಡಕಾಗಬಲ್ಲದೆ?

–ಶಿರಾದಲ್ಲಿ ಜೆಡಿಎಸ್‌ ಶಾಸಕರ ನಿಧನದ ನಂತರ ಅವರ ಪತ್ನಿಯನ್ನು ಕಣಕ್ಕಿಳಿಸಲಾಯಿತು. ಆದರೆ ಚುನಾವಣೆಯಲ್ಲಿ ಜನ ಬೆಂಬಲಿಸಲಿಲ್ಲ. ಅವರು ಮೂರನೇ ಸ್ಥಾನಕ್ಕೆ ಹೋದರು. ಅದರಂತೆ ಕಾಂಗ್ರೆಸ್ ಅಭ್ಯರ್ಥಿಯ ಅನುಕಂಪದ ಅಲೆ ಬಿಜೆಪಿ ಮೇಲೆ ಪರಿಣಾಮ ಬೀರದು.

l ಮತದಾರರ ಪ್ರತಿಕ್ರಿಯೆ ಹೇಗಿದೆ?

– ಬಿಜೆಪಿ ಅಭಿವೃದ್ಧಿ ಕಾರ್ಯಗಳೇ ನನಗೆ ಶ್ರೀರಕ್ಷೆ. 40 ಗ್ರಾಮಗಳಲ್ಲಿ ಓಡಾಡಿ ಪ್ರಚಾರ ಮಾಡಿರುವೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಡಳಿತಾರೂಢ ಪಕ್ಷದ ಮೇಲೆ ನಂಬಿಕೆ ಇಟ್ಟು ಜನರು ಬೆಂಬಲ ನೀಡುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು