ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ: ಪಾಠ ಬೋಧನೆಗೆ ‘ವಾಹನ ಸದ್ದು’ ಅಡ್ಡಿ

ಜಿಲ್ಲೆಯಲ್ಲಿಯೇ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿನಿಯರು ಇರುವ ಕಾಲೇಜು
Last Updated 4 ಫೆಬ್ರುವರಿ 2022, 4:45 IST
ಅಕ್ಷರ ಗಾತ್ರ

ಬಸವಕಲ್ಯಾಣ: ನಗರದ ಅಂಬೇಡ್ಕರ್ ವೃತ್ತದಲ್ಲಿರುವ ನೀಲಾಂಬಿಕಾ ಸರ್ಕಾರಿ ಪದವಿಪೂರ್ವ ಕಾಲೇಜಿನ ಎದುರಲ್ಲಿ ರಸ್ತೆ ಹಾಗೂ ಗ್ಯಾರೇಜುಗಳಿರುವ ಕಾರಣ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ.

ಇಲ್ಲಿ 708 ವಿದ್ಯಾರ್ಥಿನಿಯರು ಇದ್ದಾರೆ. ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಶಿಕ್ಷಣ ನೀಡಲಾಗುತ್ತದೆ. ಜಿಲ್ಲೆಯಲ್ಲಿಯೇ ಅತ್ಯಧಿಕ ಸಂಖ್ಯೆಯ ವಿದ್ಯಾರ್ಥಿನಿಯರು ಇಲ್ಲಿದ್ದರೂ ಜಾಗದ ಅಭಾವ ಉಂಟಾಗಿದೆ. ಬಾಗಿಲಿಗೆ ಹತ್ತಿಕೊಂಡೇ ಆವರಣಗೋಡೆ ಕಟ್ಟಲಾಗಿದೆ. ಆವರಣದ ಸಮೀಪವೇ ಸಾರ್ವಜನಿಕ ರಸ್ತೆ ಇದೆ. ಈ ರಸ್ತೆಯಲ್ಲಿ ಭಾರಿ ವಾಹನಗಳು ಸಂಚರಿಸುವ ಕಾರಣ ತೊಂದರೆ ಆಗುತ್ತಿದೆ.

‘ಎದುರಿನ ರಸ್ತೆ ತೆಗೆದು ಆಟದ ಮೈದಾನಕ್ಕೆ ಅವಕಾಶ ಮಾಡಿಕೊಡಬೇಕು. ಅಲ್ಲದೆ ಅಲ್ಲಮಪ್ರಭು ಗದ್ದುಗೆ ಮಠದಿಂದ ಹಾಗೂ ಡಾ.ಅಂಬೇಡ್ಕರ್ ವೃತ್ತದಿಂದ ಕಾಲೇಜಿನ ಕಡೆಗೆ ಯಾವುದೇ ವಾಹನ ಬರಗೊಡದಂತೆ ವ್ಯವಸ್ಥೆ ಕಲ್ಪಿಸಬೇಕು. ವಾಹನಗಳ ಪ್ರವೇಶ ತಡೆಗೆ ಕಬ್ಬಿಣದ ಗೇಟ್ ಅಳವಡಿಸುತ್ತಿದ್ದರೂ ಆಗಾಗ ವಾಹನಗಳ ಡಿಕ್ಕಿಯಿಂದ ಅದು ಹಾಳಾಗುತ್ತಿದೆ. ಈ ಕಾರಣ ಇಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಿದರೆ ವಾಹನಗಳು ಬರುವುದಿಲ್ಲ. ಅಲ್ಲದೆ ವಿದ್ಯಾರ್ಥಿನಿಯರಿಗೆ ಹೋಗುವುದಕ್ಕೂ ಅನುಕೂಲ ಆಗುತ್ತದೆ’ ಎಂದು ಸಾಮಾಜಿಕ ಕಾರ್ಯಕರ್ತ ವೀರೇಶ ಬೋರಗೆ ಆಗ್ರಹಿಸಿದ್ದಾರೆ.

‘ಕಾಲೇಜಿಗೆ 15 ತರಗತಿ ಕೊಠಡಿಗಳಿವೆ. 12 ಉಪನ್ಯಾಸಕರು ಇದ್ದಾರೆ. ಅರ್ಥಶಾಸ್ತ್ರ, ಸಮಾಜಶಾಸ್ತ್ರ ಮತ್ತು ಜೀವಶಾಸ್ತ್ರದ ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ. ಆದ್ದರಿಂದ ನಾಲ್ವರನ್ನು ಅತಿಥಿ ಉಪನ್ಯಾಸಕರೆಂದು ನೇಮಿಸಿಕೊಳ್ಳಲಾಗಿದೆ. ಗ್ರಂಥಾಲಯಕ್ಕೆ ಪುಸ್ತಕಗಳು ಬೇಕು. ಗ್ರಂಥಪಾಲಕ ಹಾಗೂ ದ್ವಿತೀಯ ದರ್ಜೆ ಗುಮಾಸ್ತನ ಅಗತ್ಯವಿದೆ’ ಎಂದು ಪ್ರಾಶುಪಾಲ ಸುರೇಶ ಅಕ್ಕಣ್ಣ ತಿಳಿಸಿದ್ದಾರೆ.

‘ರಸ್ತೆ ಬದಿಯಲ್ಲಿಯೇ ಲಾರಿ ಗ್ಯಾರೇಜುಗಳು ಇರುವುದರಿಂದ ಅಲ್ಲಿನ ವಾಹನ ರಿಪೇರಿಯ ಭಾರಿ ಸದ್ದಿನಿಂದ ಪಾಠ ಪ್ರವಚನಕ್ಕೆ ಅಡತಡೆ ಆಗುತ್ತಿದೆ. ಗ್ಯಾರೇಜುಗಳ ಸ್ಥಳಾಂತರಕ್ಕೆ ಸಂಬಂಧಿತರು ಕ್ರಮ ತೆಗೆದುಕೊಳ್ಳಬೇಕು ಎಂದು ಹಲವಾರು ಸಲ ಮನವಿ ಪತ್ರ ಸಲ್ಲಿಸಲಾಗಿದೆ’ ಎಂದು ಉಪನ್ಯಾಸಕ ನರಸಿಂಗರೆಡ್ಡಿ ಗದ್ಲೇಗಾಂವ್ ಹೇಳಿದ್ದಾರೆ.

‘ಮುಖ್ಯವೆಂದರೆ, ಅಂಬೇಡ್ಕರ್ ವೃತ್ತದಲ್ಲಿನ ರಸ್ತೆ ದಾಟಿ ಕಾಲೇಜಿಗೆ ಬರಬೇಕಾಗುತ್ತದೆ. ಈ ವೃತ್ತದಲ್ಲಿ ಆಟೊ ಹಾಗೂ ಭಾರಿ ವಾಹನಗಳು ನಿಲ್ಲುತ್ತವೆ. ಹೀಗಾಗಿ ತೊಂದರೆ ಆಗುತ್ತಿದೆ. ಈ ಕಾರಣ ಇಲ್ಲಿ ವಾಹನಗಳು ನಿಲ್ಲದಂತೆ ಕ್ರಮ ತೆಗೆದುಕೊಳ್ಳಬೇಕು. ವೃತ್ತದ ಇನ್ನೊಂದು ಬದಿಯಲ್ಲಿ ಪ್ರೌಢಶಾಲೆಯೂ ಇದೆ. ಈ ವಾಹನಗಳ ಸದ್ದಿನಿಂದ ಅಲ್ಲಿಯೂ ಪಾಠ ಪ್ರವಚನಕ್ಕೆ ಅಡಚಣೆ ಅಗುತ್ತಿದೆ. ಆದ್ದರಿಂದ ಇದನ್ನು ‘ಸೈಲೆಂಟ್ ಝೋನ್’ ಎಂದು ಘೋಷಿಸಲು ಹಲವಾರು ಸಲ ಒತ್ತಾಯಿಸಿದರೂ ಪ್ರಯೋಜನ ಆಗಿಲ್ಲ’ ಎನ್ನುತ್ತಾರೆ ವಿದ್ಯಾರ್ಥಿನಿ ನಾಗಲಾಂಬಿಕಾ.

*ವಿದ್ಯಾರ್ಥಿನಿಯರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ದ್ವಿತೀಯ ಪಿಯುಸಿಯಲ್ಲಿ ಇಲ್ಲಿನವರು ಜಿಲ್ಲೆಯಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಅಗ್ರಶ್ರೇಣಿಯಲ್ಲಿ ಉತ್ತೀರ್ಣ ಆಗುತ್ತಾರೆ

-ಸುರೇಶ ಅಕ್ಕಣ್ಣ, ಪ್ರಾಂಶುಪಾಲ

*ಡಾ.ಅಂಬೇಡ್ಕರ್ ವೃತ್ತದಿಂದ ಕಾಲೇಜು ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಬೇಕು. ಇದಕ್ಕಾಗಿ ಅಳವಡಿಸಿದ ಕಬ್ಬಿಣದ ಗೇಟ್ ಸರಿಪಡಿಸಬೇಕು

-ವೀರೇಶ ಬೋರಗೆ, ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT