ಶನಿವಾರ, ನವೆಂಬರ್ 28, 2020
24 °C
ಸ್ವನಿಧಿ ಸಾಲ ಸೌಲಭ್ಯಕ್ಕಾಗಿ 7,400 ಅರ್ಜಿಗಳು

ಯೋಜನೆ ಅನುಷ್ಠಾನದಲ್ಲಿ ಬೀದರ್ ಜಿಲ್ಲೆ ಹಿಂದೆ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಕೋವಿಡ್‌ ಕಾಣಿಸಿಕೊಂಡಾಗಿನಿಂದಲೂ ಸಂಕಷ್ಟದಲ್ಲಿರುವ ಬೀದಿ ಬದಿ ವ್ಯಾಪಾರಿಗಳಿಗೆ ನೆರವಾಗಲು ಕೇಂದ್ರ
ಸರ್ಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಸ್ವನಿಧಿ ಸಾಲ ಸೌಲಭ್ಯ ಯೋಜನೆಯ ಅನುಷ್ಠಾನ ಜಿಲ್ಲೆಯಲ್ಲಿ ಮಂದಗತಿಯಲ್ಲಿ ಸಾಗಿದೆ. ಜಿಲ್ಲಾಡಳಿತ ಹೆಚ್ಚಿನ ಆಸಕ್ತಿ ತೋರಿಸದ ಕಾರಣ ನೈಜ ಬೀದಿ ಬದಿ ವ್ಯಾಪಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ಸ್ವನಿಧಿ ಸಾಲ ಸೌಲಭ್ಯ ಯೋಜನೆ ಜುಲೈ 1ರಿಂದ ಜಾರಿಗೆ ಬಂದಿದೆ. ಜಿಲ್ಲೆಯಲ್ಲಿ ಅರ್ಜಿ ಪಡೆಯುವಲ್ಲಿಯೇ ಕಾಲಹರಣ ಮಾಡಲಾಗುತ್ತಿದೆ. ಬಹಳಷ್ಟು ಜನರಿಗೆ ಇನ್ನೂ ಅರ್ಜಿ ಸಲ್ಲಿಕೆ ಬಗ್ಗೆ ಗೊಂದಲ ಇದೆ. ಆದರೆ, ಕೆಲವರು ಬೀದಿ ಬದಿ ವ್ಯಾಪಾರಿಗಳೆಂದು ಸುಳ್ಳು ಹೇಳಿಕೊಂಡು ಆನ್‌ಲೈನ್‌ನಲ್ಲಿ ಅರ್ಜಿ ಅಪ್‌ಲೋಡ್‌ ಮಾಡಿದ್ದಾರೆ. ಇದು ಬ್ಯಾಂಕ್‌ ಅಧಿಕಾರಿಗಳಿಗೂ ತಲೆ ನೋವಾಗಿದೆ.

ನಿಜವಾದ ಬೀದಿ ಬದಿ ವ್ಯಾಪಾರಿಗಳು ಯಾರು ಎನ್ನುವುದನ್ನು ಖಚಿತ ಪಡಿಸಿಕೊಳ್ಳುವುದು ಬ್ಯಾಂಕ್‌ ಅಧಿಕಾರಿಗಳಿಗೆ ಕಷ್ಟವಾಗುತ್ತಿದೆ. ಈಗಾಗಲೇ ಬ್ಯಾಂಕ್‌ ಅಧಿಕಾರಿಗಳು ವಿಷಯ ಜಿಲ್ಲಾಡಳಿತದ ಗಮನಕ್ಕೂ ತಂದಿದ್ದಾರೆ. ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಗೂ ಬ್ಯಾಂಕ್‌ ಅಧಿಕಾರಿಗಳ ಸಮನ್ವಯದ ಕೊರತೆಯಿಂದ ಯೋಜನೆಗೆ ಹಿನ್ನಡೆಯಾಗುವ ಲಕ್ಷಣಗಳು ಕಂಡು ಬರುತ್ತಿವೆ ಎಂದು ಬೀದಿ ವ್ಯಾಪಾರಿಗಳು ಹೇಳುತ್ತಾರೆ.

ಈ ಯೋಜನೆಯು 2022ರ ಮಾರ್ಚ್ 31ರ ವರೆಗೂ ಜಾರಿಯಲ್ಲಿರಲಿದೆ. ಕೋವಿಡ್‌ ನಿಂದ ಸಂಕಷ್ಟ ಅನುಭವಿಸಿರುವ
ಬೀದಿ ಬದಿ ವ್ಯಾಪಾರಿಗಳಿಗೆ ಕಿರು ಸಾಲ ನೀಡುವ ಮೂಲಕ ಅವರಿಗೆ ಉತ್ತೇಜನ ನೀಡುವುದು ಯೋಜನೆಯ ಉದ್ದೇಶವಾಗಿದೆ. ಸಾಲ ಮರುಪಾವತಿ ಮಾಡಲು ಒಂದು ವರ್ಷ ಕಾಲಾವಕಾಶ ನೀಡಲಾಗುತ್ತದೆ. ನಿಗದಿತ ಅವಧಿಯೊಳಗೆ ಸಾಲ ಮರು ಪಾವತಿಸುವ ಫಲಾನುಭವಿಗಳಿಗೆ ಹೆಚ್ಚುವರಿಯಾಗಿ ಸಾಲ ಸೌಲಭ್ಯ ಪಡೆಯುವ ಅವಕಾಶವೂ ಇದೆ.

ನಗರ ಸ್ಥಳೀಯ ಸಂಸ್ಥೆಗಳಾದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತಿ ವ್ಯಾಪ್ತಿಯ
ಬೀದಿ ಬದಿ ವ್ಯಾಪಾರಿಗಳಿಗೆ ಈ ಯೋಜನೆಯ ಲಾಭ ದೊರೆಕಲಿದೆ. ವಾಣಿಜ್ಯ ಬ್ಯಾಂಕ್‌, ಗ್ರಾಮೀಣ ಬ್ಯಾಂಕ್‌, ಸಹಕಾರ ಬ್ಯಾಂಕ್‌ ಹಾಗೂ ಇತರೆ ಹಣಕಾಸು ಸಂಸ್ಥೆಗಳ ಮೂಲಕ ನೆರವು ಕಲ್ಪಿಸಲಾಗುತ್ತಿದೆ.

ಬೀದರ್ ನಗರಸಭೆ 2018–2019ರಲ್ಲಿ 956 ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಿ ಗುರುತಿನ ಚೀಟಿ ನೀಡಿದೆ.
ಲಾಕ್‌ಡೌನ್‌ ಅವಧಿಯಲ್ಲಿ ಕೆಲವರು ಕೂಲಿ ಕೆಲಸ ಮಾಡಲು ಶುರು ಮಾಡಿದ್ದಾರೆ. ಹೀಗಾಗಿ ಮತ್ತೊಮ್ಮೆ ಸಮೀಕ್ಷೆ ನಡೆಸಿ ಗುರುತಿನ ಚೀಟಿ ಕೊಡುವ ಅಗತ್ಯ ಇದೆ ಎಂದು ನಗರಸಭೆ ಆಯುಕ್ತ ರವೀಂದ್ರನಾಥ ಅಂಗಡಿ ಹೇಳುತ್ತಾರೆ.

ಜಿಲ್ಲೆಯ ವಿವಿಧೆಡೆಯಿಂದ 7,400 ಅರ್ಜಿಗಳು ಬಂದಿವೆ. 2,032 ಜನರನ್ನು ಮೊದಲ ಹಂತದಲ್ಲಿ ಅರ್ಹರೆಂದು ಗುರುತಿಸಲಾಗಿದೆ. ಬ್ಯಾಂಕಿನಿಂದ ಅರ್ಜಿಗಳನ್ನು ನೇರವಾಗಿ ಸ್ಥಳೀಯ ಸಂಸ್ಥೆಗಳಿಗೆ ಪರಿಶೀಲನೆಗಾಗಿ ಕಳಿಸಲಾಗುತ್ತಿದೆ. ಅಲ್ಲಿನ ಪರಿಶೀಲನೆ ನಡೆಸಿ ಮರಳಿ ಬ್ಯಾಂಕ್‌ಗೆ ಪ್ರಮಾಣತಪತ್ರ ಕಳಿಸಬೇಕಿದೆ ಎನ್ನುತ್ತಾರೆ ಬ್ಯಾಂಕ್‌ ಅಧಿಕಾರಿಗಳು

ಬೀದರ್‌ ನಗರ ಪ್ರದೇಶದದಿಂದಲೇ ಆರು ಸಾವಿರ ಜನ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ . ಜಿಲ್ಲೆಯ ಇನ್ನುಳಿದ ಸ್ಥಳೀಯ ಸಂಸ್ಥೆಗಳಿಂದ 1,400 ಅರ್ಜಿಗಳು ಸಲ್ಲಿಕೆಯಾಗಿವೆ. ಈಗಾಗಲೇ ಎರಡು ಸಾವಿರ ಅರ್ಜಿಗಳು ತಿರಸ್ಕೃತ ಗೊಂಡಿವೆ. ಒಂದು ತಿಂಗಳಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎನ್ನವುದು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳ ಹೇಳಿಕೆಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.