ಸಂಸದ ಭಗವಂತ ಖೂಬಾ ರೋಡ್‌ ಶೋ

ಮಂಗಳವಾರ, ಏಪ್ರಿಲ್ 23, 2019
25 °C
‘ಬಿಜೆಪಿ’ ಟೊಪ್ಪಿಗೆ, ನರೇಂದ್ರ ಮೋದಿ ಮುಖವಾಡ ಧರಿಸಿದ್ದ ಕಾರ್ಯಕರ್ತರು

ಸಂಸದ ಭಗವಂತ ಖೂಬಾ ರೋಡ್‌ ಶೋ

Published:
Updated:
Prajavani

ಬೀದರ್: ಬೀದರ್‌ ಲೋಕಸಭಾ ಕ್ಷೇತ್ರದ ಚುನಾವಣೆ ಕಾವು ದಿನೇ ದಿನೇ ಏರತೊಡಗಿದ್ದು, ಕಾಂಗ್ರೆಸ್ ಅಭ್ಯರ್ಥಿಯ ಶಕ್ತಿ ಪ್ರದರ್ಶನದ ನಂತರ ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ನಗರದಲ್ಲಿ ಬುಧವಾರ ರೋಡ್ ಶೋ ಮಾಡಿ ಬಲ ಪ್ರದರ್ಶಿಸಿದರು.

ನಾಮಪತ್ರ ಸಲ್ಲಿಸಿದ ನಂತರ ಗಣೇಶ ಮೈದಾನದಿಂದ ಜನರಲ್ ಕಾರ್ಯಪ್ಪ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ರೋಡ್ ಶೋ ನಡೆಸಿ ಮತ ಯಾಚಿಸಿದರು.

ಸುಡು ಬಿಸಿಲಲ್ಲೇ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಂಚರಿಸಿ ಬಿರುಸಿನ ಪ್ರಚಾರ ಮಾಡಿದರು.
ಮತದಾರರತ್ತ ಕೈಬೀಸಿ, ನಮಸ್ಕರಿಸಿ ಮತ ಕೋರಿದರು.

ಸಾಂಪ್ರದಾಯಿಕ ಉಡುಗೆ ತೊಟ್ಟು ತಲೆ ಮೇಲೆ ಕಳಸ ಹೊತ್ತುಕೊಂಡಿದ್ದ ಲಂಬಾಣಿ ಮಹಿಳೆಯರು ನೃತ್ಯ ಮಾಡಿದರು.
ಬ್ಯಾಂಡ್ ಬಾಜಾ ಮೆರವಣಿಗೆಗೆ ಕಳೆ ತಂದುಕೊಟ್ಟವು.

ಬೀದರ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆಯಿಂದ ಬಂದಿದ್ದ ಬಿಜೆಪಿ ಕಾರ್ಯಕರ್ತರು ಉತ್ಸಾಹದಿಂದ ಭಾಗವಹಿಸಿದ್ದರು. ತಲೆ ಮೇಲೆ ‘ಬಿಜೆಪಿ’ ಎಂದು ಬರೆದಿದ್ದ ಟೊಪ್ಪಿಗೆ ತೊಟ್ಟು, ಕೊರಳಲ್ಲಿ ಪಕ್ಷದ ಚಿನ್ಹೆಯ ಶಲ್ಯ ಹಾಕಿಕೊಂಡು, ಪ್ರಧಾನಿ ನರೇಂದ್ರ ಮೋದಿ ಅವರ ಮುಖವಾಡ ಧರಿಸಿದ್ದ ಕಾರ್ಯಕರ್ತರು ಗಮನ ಸೆಳೆದರು. ಅನೇಕರು ಕೈಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಭಾವಚಿತ್ರ, ಬಿಜೆಪಿಯ ಚಿನ್ಹೆ ಇರುವ ಧ್ವಜಗಳನ್ನು ಹಿಡಿದುಕೊಂಡಿದ್ದರು. ನರೇಂದ್ರ ಮೋದಿ, ಯಡಿಯೂರಪ್ಪ ಹಾಗೂ ಭಗವಂತ ಖೂಬಾ ಅವರಿಗೆ ಜಯಕಾರ ಹಾಕಿದರು.

ಖೂಬಾ ಅವರೊಂದಿಗೆ ಔರಾದ್ ಶಾಸಕ ಪ್ರಭು ಚವಾಣ್, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಈಶ್ವರಸಿಂಗ್ ಠಾಕೂರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅನಿಲ ಭೂಸಾರೆ, ಮುಖಂಡರಾದ ಡಿ.ಕೆ. ಸಿದ್ರಾಮ, ರೇವಣಸಿದ್ದಪ್ಪ ಜಲಾದೆ, ಶಶಿ ಹೊಸಳ್ಳಿ ಮೊದಲಾದವರು ತೆರೆದ ಜೀಪ್‌ನಲ್ಲಿ ಇದ್ದರು.

ಬಿಸಿಲು ಹೆಚ್ಚಾಗಿರುವ ಕಾರಣ ಮೆರವಣಿಗೆ ನಡುವೆ ಅಲ್ಲಲ್ಲಿ ಕಾರ್ಯಕರ್ತರು ಅಂಗಡಿಗಳ ಮುಂದಿನ ಛಾವಣಿ ಕೆಳಗೆ ನಿಂತು ದಣಿವಾರಿಸಿಕೊಂಡರು. ಹೋಟೆಲ್‌ಗಳಲ್ಲಿ ತಣ್ಣನೆ ನೀರು, ಕೂಲ್ ಡ್ರಿಂಕ್ಸ್ ಕುಡಿದು ತಂಪು ಅನುಭವ ಪಡೆದರು.

ನಾಮಪತ್ರ ಸಲ್ಲಿಕೆ:

ಗಣೇಶ ಮೈದಾನದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯ ನಡುವೆಯೇ ಸಂಸದ ಭಗವಂತ ಖೂಬಾ ಅವರು ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ನಾಮಪತ್ರ ಸಲ್ಲಿಸಿದರು. ನಂತರ ರೋಡ್ ಶೋ ನಡೆಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !