ಗುರುವಾರ , ನವೆಂಬರ್ 26, 2020
22 °C
ಕಾರ್ಯಕ್ರಮದ ಅರ್ಧ ವೆಚ್ಚ ಭರಿಸಲು ಸಿದ್ಧ: ಖೂಬಾ

ಈಶ್ವರ ಖಂಡ್ರೆ ಸವಾಲು ಸ್ವೀಕರಿಸಿದ ಭಗವಂತ ಖೂಬಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಭಾಲ್ಕಿ ವಿಧಾನಸಭಾ ಕ್ಷೇತ್ರದ ವಸತಿ ಯೋಜನೆ ಅವ್ಯವಹಾರ ಹಾಗೂ ಲಿಂಗಾಯತ ಸಮುದಾಯಕ್ಕೆ ಖಂಡ್ರೆ ಪರಿವಾರದ ಕೊಡುಗೆ ಕುರಿತು ಚರ್ಚಿಸಲು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ನಿಗದಿ ಪಡಿಸಿದ ಸಮಯ ಹಾಗೂ ಸ್ಥಳದಲ್ಲೇ ಚರ್ಚೆಗೆ ಬರಲು ಸಂಸದ ಭಗವಂತ ಖೂಬಾ ಒಪ್ಪಿದ್ದಾರೆ.

‘ಬಹಿರಂಗ ಚರ್ಚೆ ಸುಸೂತ್ರವಾಗಿ ನಡೆಯಲು ಅನುಕೂಲವಾಗುವಂತೆ ಸಮಿತಿಯೊಂದನ್ನು ರಚಿಸೋಣ. ಅದಕ್ಕೆ ಹಿರಿಯ ಶಾಸಕ ಬಂಡೆಪ್ಪ ಕಾಶೆಂಪೂರ ಅವರನ್ನು ಅಧ್ಯಕ್ಷರನ್ನಾಗಿ, ಶಾಸಕರು ಹಾಗೂ ವಿಧಾನ ಪರಿಷತ್‌ ಸದಸ್ಯರನ್ನು ಸದಸ್ಯರನ್ನಾಗಿ ನೇಮಕ ಮಾಡೋಣ, ಸಮಯ ಪರಿಪಾಲನೆ, ವಿಷಯಗಳು ದಾರಿ ತಪ್ಪದಂತೆ ನೋಡಿಕೊಳ್ಳಲು ಒಬ್ಬ ಮಧ್ಯಸ್ಥಿಕೆಗಾರರನ್ನು ನೇಮಕ ಮಾಡೋಣ. ಈ ಕಾರ್ಯಕ್ರಮಕ್ಕೆ ತಗಲುವ ವೆಚ್ಚದ ಅರ್ಧ ಪಾಲನ್ನು ಭರಿಸಲು ಸಿದ್ಧನಿದ್ದೇನೆ’ ಎಂದು ಈಶ್ವರ ಖಂಡ್ರೆ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

‘ಬಹಿರಂಗ ಚರ್ಚೆಯ ಆಮಂತ್ರಣ ಮುದ್ರಿಸಿ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು, ಧಾರ್ಮಿಕ, ಸಹಕಾರ, ಶಿಕ್ಷಣ, ರಾಜಕೀಯ ಮುಖಂಡರು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೂ ಆಹ್ವಾನ ನೀಡೋಣ’ ಎಂದು ಹೇಳಿದ್ದಾರೆ.

‘ಬಹಿರಂಗ ಚರ್ಚೆಯಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಮನೆ ಹಂಚಿಕೆ ಅವ್ಯವಹಾರ, ಬ್ರಿಮ್ಸ್ ಆಸ್ಪತ್ರೆಯಲ್ಲಿ ನಡೆದ ಅವ್ಯವಹಾರ, ಶಾಂತಿವರ್ಧಕ ಶಿಕ್ಷಣ ಸಂಸ್ಥೆ, ಭಾಲ್ಕಿಯ ಹಿರೇಮಠ ಸಂಸ್ಥಾನ, ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ, ಮಹಾತ್ಮ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆ, ಅನುಭವ ಮಂಟಪ, ವೀರಶೈವ ಲಿಂಗಾಯತ ಹಾಗೂ ಜಿಲ್ಲೆಯ ಅಭಿವೃದ್ಧಿ ಕುರಿತು ಚರ್ಚಿಸೋಣ. ಈ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧವಾಗಿದ್ದೇನೆ. ನನ್ನ ಸವಾಲುಗಳಿಗೆ ಉತ್ತರಿಸಲು ನೀವೂ ಸಿದ್ಧರಾಗಿರಿ’ ಎಂದು ಹೇಳಿದ್ದಾರೆ.

‘ನವೆಂಬರ್ 5ರಂದು ಬೆಳಿಗ್ಗೆ 11 ಗಂಟೆಗೆ ಚೆನ್ನಬಸವ ಪಟ್ಟದ್ದೇವರು ರಂಗಮಂದಿರಲ್ಲಿ ಚರ್ಚೆ ನಡೆಸಲು ಇಬ್ಬರೂ ಸೇರಿ ವ್ಯವಸ್ಥೆ ಮಾಡೋಣ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು