ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ಸಿಗರು ಚಿನ್ನದ ಹೆಸರಲ್ಲಿ ಹಿತ್ತಾಳೆ ನಾಣ್ಯ ಹಂಚುತ್ತಿದ್ದಾರೆ: ಖೂಬಾ

Last Updated 8 ಡಿಸೆಂಬರ್ 2021, 15:32 IST
ಅಕ್ಷರ ಗಾತ್ರ

ಬೀದರ್‌: ‘ವಿಧಾನ ಪರಿಷತ್‌ ಚುನಾವಣೆಯಲ್ಲಿ ಗೆಲುವು ಸಾಧಿಸುವ ದುರುದ್ದೇಶದಿಂದ ಕಾಂಗ್ರೆಸ್‌ನವರು ಮತದಾರರಿಗೆ ಚಿನ್ನದ ಹೆಸರಲ್ಲಿ ಹಿತ್ತಾಳೆಯ ನಾಣ್ಯ ಕೊಡುತ್ತಿದ್ದಾರೆ. ಮತದಾರರು ಮೋಸ ಹೋಗಬಾರದು’ ಎಂದು ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಮನವಿ ಮಾಡಿದರು.

‘ಸೋಲಿನ ಭಯದಿಂದ ಹತಾಶರಾಗಿ ಕಾಂಗ್ರೆಸ್‌ ಮುಖಂಡರು ಮತದಾರರಿಗೆ ಬೆದರಿಕೆ ಹಾಕುವ ಕೆಲಸವನ್ನೂ ಮಾಡುತ್ತಿದ್ದಾರೆ’ ಎಂದು ಅವರು ಇಲ್ಲಿಯ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದರು.

‘ಕಾಂಗ್ರೆಸ್‌ನ ಶಾಸಕರೊಬ್ಬರು ಮತವನ್ನು ತೋರಿಸಿ ಹಾಕುವಂತೆ ಪಂಚಾಯಿತಿ ಸದಸ್ಯರ ಮೇಲೆ ಒತ್ತಡ ಹಾಕುತ್ತಿರುವ ದೂರುಗಳು ಕೇಳಿ ಬರುತ್ತಿವೆ. ಕಾಂಗ್ರೆಸ್‌ ನಾಯಕರಿಗೆ ಸಂವಿಧಾನ ಗೊತ್ತಿಲ್ಲವೆ? ಜಿಲ್ಲಾಡಳಿತ ಶಾಂತಿಯುತ ಹಾಗೂ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

‘ಜಿಲ್ಲೆಯಲ್ಲಿ ಚುನಾವಣೆಯ ದಿನ ಶಾಂತಿ ಕದಡುವ ಘಟನೆಗಳು ನಡೆದರೆ ಅದಕ್ಕೆ ಕಾಂಗ್ರೆಸ್‌ ಹೊಣೆ’ ಎಂದು ವಾಗ್ದಾಳಿ ನಡೆಸಿದರು.

‘ಬರುವ ವಿಧಾನಸಭೆ ಚುನಾವಣೆಯಲ್ಲಿ ಶಾಸಕರಾದ ಈಶ್ವರ ಖಂಡ್ರೆ ಹಾಗೂ ರಾಜಶೇಖರ ಪಾಟೀಲ ಕಂಪನಿ ಸೋಲಲಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಮತದಾರರು ನಿರ್ಭಯವಾಗಿ ಗುಪ್ತ ಮತದಾನ ಮಾಡಬೇಕು. ಪೊಳ್ಳು ಬೆದರಿಕೆಗೆ ಯಾರೂ ಭಯಪಡಬೇಕಾಗಿಲ್ಲ. ಬಿಜೆಪಿ ಸರ್ಕಾರ ಮತದಾರರ ರಕ್ಷಣೆಗೆ ನಿಲ್ಲಲಿದೆ’ ಎಂದು ಹೇಳಿದರು.

ಸ್ವಂತ ಬಲದ ಮೇಲೆ ರಾಜಕೀಯಕ್ಕೆ ಬಂದಿದ್ದೇನೆ: ಪ್ರಕಾಶ ಖಂಡ್ರೆ
ಬೀದರ್‌:
‘ನಾನು ಶಾಸಕ ಈಶ್ವರ ಖಂಡ್ರೆ ಅವರಂತೆ ಅಪ್ಪನ ಗಳಿಕೆಯಿಂದ ಮೇಲೆ ಬಂದಿಲ್ಲ. ಸ್ವಂತ ಬಲದ ಮೇಲೆ ರಾಜಕೀಯವಾಗಿ ಬೆಳೆದಿದ್ದೇನೆ’ ಎಂದು ವಿಧಾನ ಪರಿಷತ್‌ ಚುನಾವಣೆಯ ಬಿಜೆಪಿ ಅಭ್ಯರ್ಥಿ ಪ್ರಕಾಶ ಖಂಡ್ರೆ ಹೇಳಿದರು.

‘ನಾನು ಬಿಜೆಪಿ ಮೂಲಕವೇ ರಾಜಕೀಯ ಪ್ರವೇಶಿಸಿದ್ದೇನೆ. ಈಶ್ವರ ಖಂಡ್ರೆ ಆರೋಪಿಸಿದಂತೆ ಯಾರ ಬೆನ್ನಿಗೂ ಚೂರಿ ಹಾಕಿಲ್ಲ. ಈಶ್ವರ ಅವರು ಯಾವುದೇ ವೇದಿಕೆ ಮೂಲಕ ಬಂದರೂ ಅದಕ್ಕೆ ತಕ್ಕ ಉತ್ತರ ನೀಡಲು ಸಿದ್ಧನಿದ್ದೇನೆ’ ಎಂದು ಸವಾಲು ಹಾಕಿದರು.

‘ಈಶ್ವರ ಖಂಡ್ರೆ ಅವರು ಮತ ತೋರಿಸಿ ಹಾಕುವಂತೆ ಮತದಾರರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಸಂವಿಧಾನ ಬಾಹಿರ ನಡವಳಿಕೆ ನಿಲ್ಲಬೇಕು. ಅವರು ಮತಗಟ್ಟೆ ಒಳಗೆ ಬರುವುದಿರಲಿ, ಆವರಣದ ಒಳಗೆ ಬಂದು ನೋಡುವುದನ್ನೂ ಹೇಗೆ ತಡೆಯಬೇಕು ಎನ್ನುವುದು ನಮಗೂ ಗೊತ್ತಿದೆ’ ಎಂದು ಎಚ್ಚರಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್, ಈಶ್ವರಸಿಂಗ್‌ ಠಾಕೂರ್, ವಿಧಾನ ಪರಿಷತ್‌ ಸದಸ್ಯ ರಘುನಾಥರಾವ್ ಮಲ್ಕಾಪುರೆ, ಡಿ.ಕೆ.ಸಿದ್ರಾಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT