ಬಂದ್‌ಗೆ ಬೀದರ್ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ

7
ಔರಾದ್ ಹೊರತುಪಡಿಸಿ ಎರಡೂವರೆ ತಾಸು ಬಸ್ ಸಂಚಾರ ಬಂದ್

ಬಂದ್‌ಗೆ ಬೀದರ್ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ

Published:
Updated:
Prajavani

ಬೀದರ್: ಅಸಂಘಟಿತ ವಲಯದ ಕಾರ್ಮಿಕರಿಗೆ ಸುರಕ್ಷತಾ ಕಾಯಿದೆ ಜಾರಿಗೊಳಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಭಾರತ ಬಂದ್‌ಗೆ ಜಿಲ್ಲೆಯಲ್ಲಿ ಮಂಗಳವಾರ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಔರಾದ್ ಹೊರತುಪಡಿಸಿ ಜಿಲ್ಲೆಯಲ್ಲಿ ಮಧ್ಯಾಹ್ನ ಎರಡೂವರೆ ತಾಸು ಬಸ್ ಸಂಚಾರ ಸ್ಥಗಿತಗೊಂಡಿದ್ದನ್ನು ಹೊರತುಪಡಿಸಿದರೆ ಸಾರ್ವಜನಿಕರಿಗೆ ಮುಷ್ಕರದ ಬಿಸಿ ಅಷ್ಟಾಗಿ ತಟ್ಟಲಿಲ್ಲ.

ಬಸ್ ಸಂಚಾರ ಬಂದ್‌ ಆಗಿದ್ದ ಅವಧಿಯಲ್ಲಿ ನೆರೆಯ ತೆಲಂಗಾಣ ಹಾಗೂ ಮಹಾರಾಷ್ಟ್ರದ ಸಾರಿಗೆ ಸಂಸ್ಥೆಯ ಬಸ್‌ಗಳು ನಗರದ ಹೊರ ಭಾಗದ ಮೂಲಕ ಸಂಚರಿಸಿದವು. ಖಾಸಗಿ ಬಸ್, ಆಟೊಗಳ ಸಂಚಾರವೂ ಸಹಜವಾಗಿತ್ತು.

ಜಿಲ್ಲೆಯಲ್ಲಿ ಶಾಲಾ, ಕಾಲೇಜುಗಳಿಗೆ ಮುಂಚಿತವಾಗಿಯೇ ರಜೆ ಘೋಷಣೆ ಮಾಡಲಾಗಿತ್ತು. ಅಂಗಡಿ, ಹೋಟೆಲ್‌ಗಳು ತೆರೆದಿದ್ದವು. ಸರ್ಕಾರಿ ಕಚೇರಿ, ಬ್ಯಾಂಕ್, ಚಿತ್ರಮಂದಿರ, ಪೆಟ್ರೋಲ್ ಬಂಕ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.

ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಕಾರ್ಯಕರ್ತರು ಬೆಳಿಗ್ಗೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಸೇರಿ ಬಹಿರಂಗ ಸಭೆ ನಡೆಸಿದರು. ಮಧ್ಯಾಹ್ನ ಅಲ್ಲಿಂದ ಕೇಂದ್ರದ ವಿರುದ್ಧ ಘೋಷಣೆ ಕೂಗುತ್ತ ಉದಗಿರ ರಸ್ತೆ, ಮಡಿವಾಳ ಮಾಚಿದೇವ ವೃತ್ತ, ನೆಹರೂ ಕ್ರೀಡಾಂಗಣ, ಜನರಲ್ ಕಾರ್ಯಪ್ಪ ವೃತ್ತ, ಅಂಬೇಡ್ಕರ್ ವೃತ್ತ, ಮಹಾವೀರ ವೃತ್ತ, ಬಸವೇಶ್ವರ ವೃತ್ತ, ತಹಶೀಲ್ದಾರ್ ಕಚೇರಿ, ಶಿವಾಜಿ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿದರು.

ಸಮಿತಿಯ ಜಿಲ್ಲಾ ಘಟಕದ ಸಂಚಾಲಕ ಬಾಬುರಾವ್ ಹೊನ್ನಾ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಅವರಿಗೆ ಸಲ್ಲಿಸಿದರು.

ಕೇಂದ್ರ ಸರ್ಕಾರದ ತಪ್ಪು ಆರ್ಥಿಕ ನೀತಿಯಿಂದಾಗಿ ಜನಸಾಮಾನ್ಯರು ಬೆಲೆ ಏರಿಕೆಯ ಬಿಸಿ ಅನುಭವಿಸಬೇಕಾಗಿದೆ. ಕೂಡಲೇ ಬೆಲೆ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ನಿವೃತ್ತಿ ವೇತನ ನೀತಿಯನ್ನು ಹಿಂದಿನಂತೆಯೇ ಮುಂದುವರಿಸಬೇಕು. ಅಸಂಘಟಿತ ವಲಯದ ಕಾರ್ಮಿಕರಿಗೂ ಪಿಂಚಣಿ ನೀಡಬೇಕು. ಬಿಎಸ್‍ಎನ್‍ಎಲ್, ರೈಲ್ವೆ ಇಲಾಖೆಗಳ ಖಾಸಗೀಕರಣ ಪ್ರಯತ್ನ ಕೈಬಿಡಬೇಕು. ಕಾರ್ಮಿಕ ಕಾನೂನುಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಸಾರ್ವಜನಿಕ ಕ್ಷೇತ್ರದ ಕೈಗಾರಿಕೆಗಳ ಷೇರು ಮಾರಾಟ ಮಾಡಬಾರದು. ಗುತ್ತಿಗೆ ಕಾರ್ಮಿಕರಿಗೆ ಮಾಸಿಕ ಕನಿಷ್ಠ ₹ 10 ಸಾವಿರ ವೇತನ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.

ಬೋನಸ್ ಮತ್ತು ಭವಿಷ್ಯ ನಿಧಿಗೆ ಇರುವ ಎಲ್ಲ ನಿರ್ಬಂಧಗಳನ್ನು ತೆಗೆದು ಹಾಕಿ ನೌಕರರ ಗ್ರ್ಯಾಚುಟಿ ಹೆಚ್ಚಿಸಬೇಕು. ವಿಶ್ವಬ್ಯಾಂಕ್, ಐಎಂಎಫ್ ಸೇರಿದಂತೆ ವಿದೇಶಿ ಹಣಕಾಸು ಸಂಸ್ಥೆಗಳ ಅಣತಿಯಂತೆ ಕಾರ್ಮಿಕ ಕಾನೂನುಗಳ ಅನುಷ್ಠಾನ ಕೈಬಿಡಬೇಕು ಎಂದು ಬೇಡಿಕೆ ಮಂಡಿಸಿದರು.

ಮುಷ್ಕರದಲ್ಲಿ ಭಾಗವಹಿಸಿದ್ದ ಭಾರತ ವಿದ್ಯಾರ್ಥಿ ಫೆಡರೇಷನ್ ಸದಸ್ಯರು, ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಶೇ 30 ರಷ್ಟು ಅನುದಾನ ಒದಗಿಸಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕರ ಸಂಘಟನೆಗಳ ಜಂಟಿ ಸಮಿತಿಯ ಜಿಲ್ಲಾ ಘಟಕದ ಗೌರವ ಸಂಚಾಲಕ ಮಾರುತಿ ಬೌದ್ಧೆ, ಸಹ ಸಂಚಾಲಕ ಆರ್.ಪಿ. ರಾಜಾ, ಕಟ್ಟಡ ಕಾರ್ಮಿಕರ ಸಂಘದ ಪ್ರಭು ಹೂಚಕನಳ್ಳಿ, ಮುನಿರೊದ್ದಿನ್, ಪ್ರಭುರಾಜ ಕರನಾಯಕ, ಕಿಸಾನ್ ಸಭಾದ ನಜೀರ್ ಅಹಮ್ಮದ್‌, ಗುರುಪಾದಯ್ಯ ಸ್ವಾಮಿ, ಚಂದ್ರಬಾನ, ಅಂಗನವಾಡಿ ನೌಕರರ ಸಂಘದ ಸುಲೋಚನಾ ಪೂಜಾರಿ, ಇಂದುಮತಿ ಆಣದೂರು, ಶಕುಂತಲಾ ಅಮಲಾಪುರ, ಎಸ್‍ಎಫ್‍ಐ ಜಿಲ್ಲಾ ಘಟಕದ ಅಧ್ಯಕ್ಷ ಅರುಣ ಕೋಡಗೆ, ಉಪಾಧ್ಯಕ್ಷ ಅಮರ ಗಾದಗಿ, ಕಾರ್ಯದರ್ಶಿ ಅವಿನಾಶ ಪಾಟೀಲ, ಆಶಾ ಕಾರ್ಯಕರ್ತೆಯರು, ಬಿಸಿಯೂಟ ನೌಕರರು, ಸಿಐಟಿಯು, ಎಐಟಿಯುಸಿ, ಬಿಎಸ್‍ಎನ್‍ಎಲ್ ನೌಕರರ ಸಂಘ, ವಿಮಾ ನೌಕರರ ಸಂಘ, ಬ್ಯಾಂಕ್ ನೌಕರರ ಸಂಘದ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕಾರ್ಮಿಕರ ಪ್ರತಿಭಟನಾ ಮೆರವಣಿಗೆಯ ವೇಳೆ ಕೆಲ ಹೊತ್ತು ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !