ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇವಲ ಶಸ್ತ್ರಾಸ್ತ್ರಗಳಿಂದ ದೇಶ ಬಲಿಷ್ಠವಾಗದು

ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ
Last Updated 4 ಏಪ್ರಿಲ್ 2019, 17:01 IST
ಅಕ್ಷರ ಗಾತ್ರ

ಬೀದರ್‌: ‘ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿ ಪಡಿಸಿದ ಮಾತ್ರಕ್ಕೆ ಯಾವುದೇ ದೇಶ ಬಲಿಷ್ಠವಾಗುವುದಿಲ್ಲ. ಆಧ್ಯಾತ್ಮಿಕವಾಗಿಯೂ ಪ್ರಬಲವಾಗಿ ಇರಬೇಕಾಗುತ್ತದೆ’ ಎಂದು ವಿಜಯಪುರ ಮತ್ತು ಗದಗ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ನುಡಿದರು.

ನಗರದ ಶಾಹಿನ್ ಕಾಲೇಜಿನ ಅವರಣದಲ್ಲಿ ಬೀದರ್ ನಾಗರಿಕ ಸಮಿತಿ ವತಿಯಿಂದ ಆಯೋಜಿಸಿದ್ದ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಸ್ವೀಕರಿಸಿದ ಚಿದಂಬರ ಆಶ್ರಮದ ಶಿವಕುಮಾರ ಸ್ವಾಮೀಜಿ ಹಾಗೂ ಪಂಡಿತ ವೀರಭದ್ರಪ್ಪ ಗಾದಗೆ ಅವರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಗ್ರಿಕ್ ದೇಶದ ತತ್ವಜ್ಞಾನಿಗಳು ಇತಿಹಾಸ ಬರೆಯುವಲ್ಲಿ ಎಡವಟ್ಟು ಮಾಡಿದರು. ಜಗತ್ತು ಮುಂದೆ ಬರಲು ಪಾಶ್ಚಿಮಾತ್ಯ ದೇಶಗಳೇ ಕಾರಣ ಎಂದು ಬಿಂಬಿಸತೊಡಗಿದರು. ಆದರೆ ಪಾಶ್ಚಿಮಾತ್ಯ ದೇಶದ ಒಬ್ಬ ನಾಯಕರು ಸಮಾಧಾನದಿಂದ ಬದುಕಲಿಲ್ಲ. ಅಧ್ಯಾತ್ಮದ ಅವತರಣಿಕೆ ಇಲ್ಲದ ಕಾರಣ ಗ್ರಿಕ್ ಹಾಗೂ ರೋಮನ್ನರ ಇತಿಹಾಸ ಒಂದೇ ಬಾರಿಗೆ ನಾಶವಾಯಿತು’ ಎಂದು ತಿಳಿಸಿದರು.

‘ಅಮೆರಿಕ, ರಷ್ಯಾ, ಫ್ರಾನ್ಸ್ ದೇಶಗಳು ಭಾರತ ಹಾಗೂ ಜರ್ಮನಿಯ ಸಂಸ್ಕೃತಿ ಅಳವಡಿಸಿಕೊಂಡಿರುವ ಕಾರಣ ಇಂದು ಶಕ್ತಿಶಾಲಿ ರಾಷ್ಟ್ರಗಳಾಗಿ ಎದ್ದು ನಿಲ್ಲಲು ಸಾಧ್ಯವಾಯಿತು’ ಎಂದರು.

‘ಇಂದು ಸನ್ಯಾಸಿಗಳಿಗೆ ಗೌರವ ಡಾಕ್ಟರೇಟ್ ಆಗಲಿ, ಪ್ರಶಸ್ತಿಗಳಾಗಲಿ ಅಗತ್ಯವಿಲ್ಲ. ಏಕೆಂದರೆ ಅವರಿಗೆ ಸಮಾಜವೇ ಕುಟುಂಬ, ಅಧ್ಯಾತ್ಮವೇ ಸಂಪತ್ತು. ಅವರು ಪಡೆದ ಪ್ರಶಸ್ತಿಗಳು ಕೇವಲ ಸಮಾಜದ ಆಸ್ತಿ ಮಾತ್ರ. ಆದರೂ ಪ್ರತಿಭಾವಂತರನ್ನು ಗುರುತಿಸುವುದು ಅಗತ್ಯ. ಇದರಿಂದ ಸಮಾಜಕ್ಕೆ ಹೊಸ ಸಂದೇಶ ಸಾರಲು ಹಾಗೂ
ಇತರರಿಗೆ ಆದರ್ಶದಾಯಕವಾಗಲು ಪ್ರೋತ್ಸಾಹ ನೀಡಿದಂತಾಗುತ್ತದೆ’ ಎಂದರು.

ಮುಖ್ಯ ಅತಿಥಿಗಳಾಗಿ ಕಲಬುರಗಿ ಕೇಂದ್ರಿಯ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್.ಎಂ.ಮಹೇಶ್ವರಯ್ಯ ಮಾತನಾಡಿ, ‘ಹಾನರೀಸ್ಟ್ ಕಾಜಾ’ ಎಂಬ ಗ್ರಿಕ್ ಹಾಗೂ ಲ್ಯಾಟೀನ್ ಪದದಿಂದ ಆರಂಭವಾದ ಈ ಗೌರವ ಡಾಕ್ಟರೇಟ್ 1858ರಲ್ಲಿ ಜರ್ಮನ್ ದೇಶದಲ್ಲಿ ಆರಂಭವಾಯಿತು. ನಂತರದ ದಿನಗಳಲ್ಲಿ ಭಾರತದ ವಿಶ್ವವಿದ್ಯಾಲಯಗಳೂ ಇದನ್ನು ಆರಂಭಿಸಿದವು’ ಎಂದು ತಿಳಿಸಿದರು.

‘ಯೋಗ್ಯರಿಗೆ ಗೌರವ ಸನ್ಮಾನಗಳು ದೊರೆತರೆ ಅವು ಸಮಾಜಕ್ಕೆ ಮಾದರಿಯಾಗುತ್ತವೆ. ಆದರೆ, ಬಹುತೇಕ ಕಡೆಗಳಲ್ಲಿ ಗೌರವ ಡಾಕ್ಟರೇಟ್‌ಗಳು ಮಾರಾಟದ ವಸ್ತುಗಳಾಗಿ ಗೋಚರಿಸುತ್ತಿವೆ. ಶಿವಕುಮಾರ ಶ್ರೀಗಳು, ಗಾದಗೆ ಹಾಗೂ ಕಳೆದ ವರ್ಷ ಸನ್ಮಾನಿತರಾದ ಬಲಬೀರಸಿಂಗ್‌ ಅವರಿಗೆ ದೊರೆತ ಗೌರವ ಡಾಕ್ಟರೇಟ್‌ನಿಂದಾಗಿ ಈ ಭಾಗದ ಗರಿಮೆ ಹೆಚ್ಚಿಸಿವೆ’ ಎಂದು ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಆರ್ ನಿರಂಜನ್ ಮಾತನಾಡಿ, ‘ಬೇರೆಡೆ ಹೋಲಿಸಿದರೆ ಗುವಿವಿ ಕಳೆದ 37 ವರ್ಷಗಳಲ್ಲಿ 480ಕ್ಕೂ ಅಧಿಕ ಕಾಲೇಜುಗಳು ಹೊಂದಿವೆ. ಆದರೆ ಇಂದು ಗುಣಮಟ್ಟದ ಶಿಕ್ಷಣದ ಕೊರತೆ ಎದ್ದು ಕಾಣುತ್ತಿದೆ. ಅದಕ್ಕಾಗಿ ಪ್ರಾಥಮಿಕ ಹಂತದಿಂದಲೇ ಸಂಸ್ಕಾರದಾಯಕ ಶಿಕ್ಷಣ ನೀಡುತ್ತಿರುವ ಮಠಾಧೀಶರ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚು ಒತ್ತು ನೀಡಬೇಕಿದೆ’ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿದ ಶಿವಕುಮಾರ ಶ್ರೀಗಳು ಮಾತನಾಡಿ, ’ಇಂದು ವಿದ್ಯೆಗೆ ಕೊರತೆ ಇಲ್ಲ. ಆದರೆ ಬುದ್ದಿಯ ಕೊರತೆ ಹೆಚ್ಚಾಗುತ್ತಿದೆ. ಸಾಕ್ಷರತೆ ಉಳ್ಳುವರು ಅಸುರಿಗಳಾಗಿರುವುದರಿಂದಲೇ ಶೈಕ್ಷಣಿಕ ಗುಣಮಟ್ಟ ಕಳಚಿಕೊಳ್ಳುತ್ತಿದೆ. ಸ್ಪರ್ಧೆಯುಕ್ತ ಕಲಿಕೆಗೆ ಜಾರದೆ, ನೈತಿಕ ಹಾಗೂ ಮೌಲ್ಯಯುತ ಶಿಕ್ಷಣದತ್ತ ಧಾವಿಸಬೇಕು’ ಎಂದು ಸಲಹೆ ನೀಡಿದರು.

ವೀರಭದ್ರಪ್ಪ ಗಾದಗೆ ಮಾತನಾಡಿ, ‘ಸಂಗೀತವು ಇಡೀ ದೇಶವನ್ನು ನೆಮ್ಮದಿಯೆಡೆಗೆ ಕೊಂಡೊಯ್ಯುತ್ತದೆ. ಅದಕ್ಕಾಗಿ ಪ್ರಾಥಮಿಕ ಹಂತದಿಂದಲೇ ಸಂಗೀತವು ಪಠ್ಯಕ್ರಮವಾಗಬೇಕು’ ಎಂದರು.

ಉತ್ತರ ಪ್ರದೇಶದ ಲಕ್ನೋ ವಿವಿ ಡೀನ್ ಮುಫ್ತಿ ಮಹಮ್ಮದ್ ಫಾರೂಖ್ ಮಾತನಾಡಿದರು.

ಗುರುದ್ವಾರ ಪ್ರಬಂಧಕ ಸಮಿತಿ ಅಧ್ಯಕ್ಷ ಸರ್ದಾರ್ ಬಲಬೀರಸಿಂಗ್, ಕಲಬುರಗಿ ಕೇಂದ್ರೀಯ ವಿವಿ ಪ್ರಾಧ್ಯಾಪಕಿ ರಾಜೇಶ್ವರಿ ಮಹೇಶ್ವರಯ್ಯ ಇದ್ದರು. ಬೀದರ್ ನಾಗರಿಕ ಸಮಿತಿ ಅಧ್ಯಕ್ಷ ಡಾ.ಚನ್ನಬಸಪ್ಪ ಹಾಲಹಳ್ಳಿ ಅಧ್ಯಕ್ಷತೆ ವಹಿಸಿದ್ದರು.

ಶಾಹಿನ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಅಬ್ದುಲ್ ಖದೀರ್ ಸ್ವಾಗತಿಸಿದರು.

ಕರ್ನಾಟಕ ಜಾನಪದ ವಿವಿ ಪ್ರಾದೇಶಿಕ ಕೇಂದ್ರದ ಸಂಯೋಜನಾಧಿಕಾರಿ ಡಾ.ಜಗನ್ನಾಥ ಹೆಬ್ಬಾಳೆ ಪ್ರಾಸ್ತಾವಿಕ ಮಾತನಾಡಿದರು.

ಜಾನಪದ ಪರಿಷತ್‌ನ ಮೀರಾ ನೇಣಿ ನಿರೂಪಿಸಿದರು. ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಅಧ್ಯಕ್ಷ ಪ್ರೊ.ಸ್.ಬಿ ಬಿರಾದಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT