ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ವಾಸ್ತವ್ಯಕ್ಕೆ ಮೊದಲೇ ಅಭಿವೃದ್ಧಿ ಆರಂಭ

ಉಜಳಂಬ: ನಿತ್ಯ ಭೇಟಿ ನೀಡುತ್ತಿರುವ ಅಧಿಕಾರಿಗಳ ದಂಡು
Last Updated 8 ಜೂನ್ 2019, 19:45 IST
ಅಕ್ಷರ ಗಾತ್ರ

ಬಸವಕಲ್ಯಾಣ: ತಾಲ್ಲೂಕಿನ ಉಜಳಂಬದಲ್ಲಿ ಜೂನ್ 29 ಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗ್ರಾಮವಾಸ್ತವ್ಯ ನಡೆಸಲಿದ್ದಾರೆ. ಆದ್ದರಿಂದ ನಿತ್ಯ ಇಲ್ಲಿಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುತ್ತಿದ್ದು ರಸ್ತೆ ಹಾಗೂ ಚರಂಡಿ ನಿರ್ಮಾಣ ಹಾಗೂ ಇತರೆ ಕಾಮಗಾರಿಗಳು ಭರದಿಂದ ಸಾಗಿವೆ.

ಉಜಳಂಬದಿಂದ ನಾಲ್ಕು ಕಿ.ಮೀ ಸಾಗಿದರೆ ಮಹಾರಾಷ್ಟ್ರದ ಗಡಿಯಿದೆ. ತಾಲ್ಲೂಕಿನ ಕೊನೆಯಲ್ಲಿರುವ ಕಾರಣವೋ ಏನೋ ಈ ಭಾಗದಲ್ಲಿ ಹೇಳಿಕೊಳ್ಳುವಷ್ಟು ಅಭಿವೃದ್ಧಿ ಆಗಿಲ್ಲ. ಆದರೆ ಮುಖ್ಯಮಂತ್ರಿಯವರು ಇಲ್ಲಿಗೆ ಭೇಟಿ ನೀಡಲು ನಿರ್ಧರಿಸಿರುವುದು ಗೊತ್ತಾದಾಗ ಎಲ್ಲ ಇಲಾಖೆಯವರು ಇಲ್ಲಿಗೆ ಬಂದು ಎಲ್ಲಿ ಏನು ಸಮಸ್ಯೆಯಿದೆ ಎಂಬುದನ್ನು ಹುಡುಕತೊಡಗಿದ್ದಾರೆ. ಮುಖ್ಯಮಂತ್ರಿಯವರು ವಾಸ್ತವ್ಯ ಹೂಡಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿನ ಹಳೆಯ ಕೊಠಡಿಗಳನ್ನು ಶನಿವಾರ ಕೆಡವಲಾಗಿದೆ. ಅರ್ಧಕ್ಕೆ ನಿಂತಿದ್ದ ಹೊಸ ಕೊಠಡಿಗಳ ಕೆಲಸ ತೀವ್ರಗೊಳಿಸಲಾಗಿದೆ. ಅಲ್ಲಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಿಸಲಾಗುತ್ತಿದೆ.

ಶಾಸಕ ಬಿ.ನಾರಾಯಣರಾವ್ ಅವರು ಇಲ್ಲಿ ಅಧಿಕಾರಿಗಳ ಸಭೆ ಆಯೋಜಿಸಿ ಮುಖ್ಯಮಂತ್ರಿಯವರ ಸ್ವಾಗತಕ್ಕೆ ಸಿದ್ಧತೆ ಕೈಗೊಳ್ಳಲು ಸೂಚಿಸಿದ್ದಾರೆ. ಜಿಲ್ಲಾ ಪಂಚಾಯಿತಿ ಸಿಇಒ ಮಹಾಂತೇಶ ಬೀಳಗಿ, ಉಪ ವಿಭಾಗಾಧಿಕಾರಿ ಗ್ಯಾನೇಂದ್ರಕುಮಾರ ಗಂಗವಾರ್, ತಹಶೀಲ್ದಾರ್ ಸಾವಿತ್ರಿ ಶರಣು ಸಲಗರ ಹಾಗೂ ಇತರೆ ಅಧಿಕಾರಿಗಳು ಊರಲ್ಲಿ ಸಂಚರಿಸಿ ರಸ್ತೆ, ಚರಂಡಿ, ಕುಡಿಯುವ ನೀರಿನ ಸರಬರಾಜು, ಶಾಲೆ, ಅಂಗನವಾಡಿಯ ವ್ಯವಸ್ಥೆ ಪರಿಶೀಲಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ ಕೂಡ ಭೇಟಿ ನೀಡಿದ್ದಾರೆ.

`ಈ ಭಾಗಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭೇಟಿ ನೀಡುವುದೇ ಇಲ್ಲ. ಉಜಳಂಬದಿಂದ ಕೆಲವೇ ದೂರದಲ್ಲಿರುವ ಬರೀ ದಲಿತರು ವಾಸಿಸುವ ಧಮ್ಮೂರಿಗೆ ಚುನಾವಣೆಯಲ್ಲಿ ಮತ ಕೇಳುವುದಕ್ಕೂ ಯಾರೂ ಬರುವುದಿಲ್ಲ. ನಾನು ಅನೇಕ ಸಲ ಅಲ್ಲಿಗೆ ಹೋಗಿದ್ದರಿಂದ ಅಲ್ಲಿನ ದಯನೀಯ ಪರಿಸ್ಥಿತಿಯ ಬಗ್ಗೆ ಅರಿವಿದೆ. ಆದ್ದರಿಂದ ಮುಖ್ಯಮಂತ್ರಿಯವರ ವಾಸ್ತವ್ಯಕ್ಕೆ ಈ ಗ್ರಾಮ ಆಯ್ಕೆ ಮಾಡಿಕೊಳ್ಳಲಾಗಿದೆ. ಜೂನ್ 29 ರಂದು ಬೆಳ್ಳಿಗ್ಗೆಯಿಂದ ಸಂಜೆಯವರೆಗೆ ಮುಖ್ಯಮಂತ್ರಿ ಜನರ ಅಹವಾಲು ಸ್ವೀಕರಿಸುವರು. ನಂತರ ಸಂಜೆ ಕೆಲ ಸಮಯ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ರಾತ್ರಿ ಅಲ್ಲಿನ ಶಾಲೆಯಲ್ಲಿಯೇ ಅವರು ವಾಸ್ತವ್ಯ ಮಾಡುವರು. ಬೆಳ್ಳಿಗೆ ಅವರನ್ನು ಧಮ್ಮೂರಿಗೂ ಕರೆದುಕೊಂಡು ಹೋಗಲಾಗುತ್ತದೆ' ಎಂದು ಶಾಸಕ ಬಿ.ನಾರಾಯಣರಾವ್ ತಿಳಿಸಿದ್ದಾರೆ.

`ಜೂನ್ 29 ರಂದು ಇಲ್ಲಿಗೆ ಬರುವ ಬಗ್ಗೆ ಬೆಂಗಳೂರಿನಲ್ಲಿ ಈಚೆಗೆ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದಕ್ಕೂ ಮೊದಲು ಅವರು ಕಲಬುರ್ಗಿ ಜಿಲ್ಲೆಯಲ್ಲಿಯೂ ಕೆಲ ಸ್ಥಳಗಳಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಮುಖ್ಯಮಂತ್ರಿಯವರು ಬಂದಾಗ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಅಹವಾಲುಗಳನ್ನು ಕೂಡ ಸಲ್ಲಿಸಬೇಕು' ಎಂದೂ ಅವರು ಕೇಳಿಕೊಂಡಿದ್ದಾರೆ.

`ಅಧಿಕಾರಿಗಳ ಸೂಚನೆಯ ಮೇರೆಗೆ ಗ್ರಾಮದಲ್ಲಿ ರಸ್ತೆ ಹಾಗೂ ಚರಂಡಿಗಳ ನಿರ್ಮಾಣ ಹಾಗೂ ನವೀಕರಣ ಕಾರ್ಯ ಆರಂಭಗೊಂಡಿದೆ. ಶಾಲೆಯ ಆವರಣದಲ್ಲಿ ಹಳೆಯ ಕೊಠಡಿಗಳನ್ನು ಕೆಡವಿ ಪರಿಸರ ಸ್ವಚ್ಛಗೊಳಿಸಲಾಗುತ್ತಿದೆ' ಎಂದು ಗ್ರಾಮ ಪಂಚಾಯಿತಿ ಸದಸ್ಯ ಮಹೇಶ ಪಾಟೀಲ ತಿಳಿಸಿದ್ದಾರೆ.

`ಗ್ರಾಮದಲ್ಲಿ 7 ಸಾವಿರಕ್ಕೂ ಅಧಿಕ ಜನಸಂಖ್ಯೆಯಿದೆ. ಆದ್ದರಿಂದ ರೈತ ಸಂಪರ್ಕ ಕೇಂದ್ರದ ಮಂಜೂರಾತಿಗೆ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉತ್ತಮ ವ್ಯವಸ್ಥೆಗೆ, ವಿದ್ಯುತ್ ವಿತರಣಾ ಕೇಂದ್ರ ಆರಂಭಕ್ಕೆ ಮುಖ್ಯಮಂತ್ರಿ ಯವರಿಗೆ ಒತ್ತಾಯಿಸಲಾಗುತ್ತದೆ' ಎಂದೂ ಹೇಳಿದ್ದಾರೆ.

`ಗ್ರಾಮಕ್ಕೆ ಕೆರೆ ಮಂಜೂರು ಮಾಡಬೇಕು. ಸುತ್ತಲಿನ ಮದಾರವಾಡಿ, ಫುಲದಾರವಾಡಿ, ಜೋಗೆವಾಡಿ, ಬೇಡರವಾಡಿ ಹಾಗೂ ಧಮ್ಮೂರಿಯಲ್ಲಿ ವಿಕಾಸ ಕಾರ್ಯಗಳನ್ನು ಕೈಗೊಳ್ಳಬೇಕು. ಭಕನಾಳ, ಭೋಸ್ಗಾ ರಸ್ತೆಗಳ ಡಾಂಬರೀಕರಣ ನಡೆಸಬೇಕು ಎಂಬುದರ ಬಗ್ಗೆಯೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುತ್ತದೆ' ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಚಂದ್ರಕಾಂತ ಪಾಟೀಲ ಹೇಳಿದ್ದಾರೆ.

ಬಸವಕಲ್ಯಾಣ ತಾಲ್ಲೂಕಿನ ಉಜಳಂಬದಲ್ಲಿನ ನೀರು ಸರಬರಾಜು ವ್ಯವಸ್ಥೆಯನ್ನು ಜಿಲ್ಲಾ ಪಂಚಾಯಿತಿ ಸಿಇಒ ಮಹಾಂತೇಶ ಬೀಳಗಿ ಪರಿಶೀಲಿಸಿದರು.
ಬಸವಕಲ್ಯಾಣ ತಾಲ್ಲೂಕಿನ ಉಜಳಂಬದಲ್ಲಿನ ನೀರು ಸರಬರಾಜು ವ್ಯವಸ್ಥೆಯನ್ನು ಜಿಲ್ಲಾ ಪಂಚಾಯಿತಿ ಸಿಇಒ ಮಹಾಂತೇಶ ಬೀಳಗಿ ಪರಿಶೀಲಿಸಿದರು.


*
ಗಡಿಭಾಗದ ಅಭಿವೃದ್ಧಿಯ ಉದ್ದೇಶದಿಂದ ಸಿಎಂ ವಾಸ್ತವ್ಯಕ್ಕೆ ಉಜಳಂಬ ಗ್ರಾಮ ಆಯ್ಕೆ ಮಾಡಿದ್ದು ಅವರು ಜೂನ್ 29 ಕ್ಕೆ ಇಲ್ಲಿಗೆ ಬರಲಿದ್ದಾರೆ.
-ಬಿ.ನಾರಾಯಣರಾವ್, ಶಾಸಕ

*
ಗ್ರಾಮಕ್ಕೆ ಪಿಯು ಕಾಲೇಜು, ಪೊಲೀಸ್ ಠಾಣೆ ಮಂಜೂರಾತಿಗೆ ಹಾಗೂ ಇತರೆ ಸಮಸ್ಯೆ ಬಗೆಹರಿಸಲು ಸಿಎಂ ಗೆ ಮನವಿ ಸಲ್ಲಿಸಲಾಗುವುದು.
-ಮಹೇಶ ಪಾಟೀಲ,ಗ್ರಾ.ಪಂ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT