ಭಾನುವಾರ, ಆಗಸ್ಟ್ 18, 2019
25 °C
ಶಿಕ್ಷಕರು, ಮಕ್ಕಳ ಪೋಷಣೆಯಿಂದ ನಳನಳಿಸುತ್ತಿರುವ ಗಿಡಗಳು

ಹಸಿರಿನಿಂದ ಕಂಗೊಳಿಸುವ ಘೋಲು ತಾಂಡಾ ಶಾಲೆ

Published:
Updated:
Prajavani

ಭಾಲ್ಕಿ: ಶಿಕ್ಷಕರು ಮನಸ್ಸು ಮಾಡಿದರೆ ಏನೆಲ್ಲಾ ಸಾಧ್ಯ ಎನ್ನುವುದಕ್ಕೆ ತಾಲ್ಲೂಕಿನ ಗಡಿಭಾಗದ ಘೋಲು ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯೇ ಉತ್ತಮ ನಿದರ್ಶನ. 2005-06ರಲ್ಲಿ ಪ್ರಾರಂಭವಾದ ಮರಾಠಿ ಮಾಧ್ಯಮ ಶಾಲೆಯು ಈಗ ಹಸಿರಿನಿಂದ ಕಂಗೊಳಿಸುತ್ತಿದೆ.

ಶಾಲಾ ಕೈತೋಟದಲ್ಲಿ ಗುಲಾಬಿ, ಸೇವಂತಿ, ಮಲ್ಲಿಗೆ, ಸೇರಿದಂತೆ ನಾನಾ ಪ್ರಕಾರದ ಹೂವಿನ ಜಾಪಳಕಾಯಿ, ಬಾದಾಮಿ, ನಿಂಬೆ ಒಳಗೊಂಡಂತೆ ಅನೇಕ ಪ್ರಕಾರದ ಹಣ್ಣಿನ ಗಿಡಗಳನ್ನು ಬೆಳೆಯಲಾಗಿದೆ. ಪ್ರತಿದಿನ ಪರಿಸರ ಸ್ವಚ್ಛತೆ ಅವಧಿಯಲ್ಲಿ ಎಲ್ಲ ವರ್ಗಗಳ ವಿದ್ಯಾರ್ಥಿಗಳು ಗಿಡಗಳಿಗೆ ನೀರು ಉಣಿಸುವ, ಕಳೆ ಕೀಳುವ, ಸಸಿ ನೆಡುವ ಕಾರ್ಯದಲ್ಲಿ ತೊಡಗುತ್ತಾರೆ. ಮಧ್ಯಾಹ್ನದ ಬಿಸಿಯೂಟಕ್ಕೆ ಅವಶ್ಯಕವಾದ ಕರಿಬೇವು, ನುಗ್ಗೆ ಕಾಯಿ ಒಳಗೊಂಡಂತೆ ಇತರ ತರಕಾರಿ ಗಿಡಗಳನ್ನು ಬೆಳೆಯಲಾಗಿದೆ.

‘ಈ ಗ್ರಾಮದ ಶಾಲೆಯ 1ರಿಂದ 5ನೇ ತರಗತಿಯಲ್ಲಿ 15 ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ. ವಿದ್ಯಾರ್ಥಿಗಳ ಉತ್ತಮ ಶೈಕ್ಷಣಿಕ ವಿಕಾಸಕ್ಕೆ ಹಸಿರು ವಾತಾವರಣ ಪೂರಕವಾಗಿದೆ. ನಿಸರ್ಗವೇ ಒಳ್ಳೆಯ ಶಿಕ್ಷಕ. ಮಕ್ಕಳಿಗೆ ಬಾಲ್ಯದಿಂದಲೇ ಪರಿಸರ ಮಹತ್ವ ತಿಳಿಸಿಕೊಡಲು ಪರಿಸರ ಕಾಳಜಿಯ ಭಾವನೆ ಮೂಡಿಸಲು ನಾವು ವಿಶೇಷ ಕಾಳಜಿ ವಹಿಸುತ್ತಿದ್ದೇವೆ. ಇರುವಷ್ಟು ಮಕ್ಕಳ ಸರ್ವತೋಮುಖ ಏಳಿಗೆಗೆ ಶ್ರಮ ವಹಿಸುತ್ತಿದ್ದೇವೆ. ನಮ್ಮ ಎಲ್ಲ ಕಾರ್ಯಕ್ಕೆ ಪಾಲಕರ, ಎಸ್‍ಡಿಎಂಸಿ ಸದಸ್ಯರ, ಗ್ರಾಮಸ್ಥರ ಸಂಪೂರ್ಣ ಸಹಕಾರ, ಪ್ರೋತ್ಸಾಹವಿದೆ’ ಎಂದು ಶಾಲೆಯ ಶಿಕ್ಷಕರು ತಿಳಿಸಿದರು.

‘ಇತ್ತೀಚಿನ ವರ್ಷಗಳಲ್ಲಿ ಬರಗಾಲದ ಭೀತಿ ನಿರಂತರವಾಗಿ ಎದುರಾಗುತ್ತಿದೆ. ಸಮಾಜದ ಎಲ್ಲರೂ ಪರಿಸರ ಬೆಳವಣಿಗೆಗೆ ವಿಶೇಷ ಗಮನ ವಹಿಸಬೇಕು. ಎಲ್ಲೆಲ್ಲಿ ಖಾಲಿ ಸ್ಥಳವಿದೆಯೋ ಅಲ್ಲಿ ಸಸಿ, ಗಿಡಗಳನ್ನು ನೆಡಬೇಕು. ಅಂದಾಗ ಮಾತ್ರ ಸಕಾಲಕ್ಕೆ ಮಳೆ ಬರಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ಶಾಲೆಯ ಶಿಕ್ಷಕರು.

‘ನಾನು ಶಿಕ್ಷಕನಾಗಿ ಬಂದಾಗ ಶಾಲೆಯ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಗ್ರಾಮದ ಒಂದು ಮನೆಯ ಮುಂಭಾಗದಲ್ಲಿಯೇ ಮಕ್ಕಳನ್ನು ಕೂಡಿಸಿಕೊಂಡು ತರಗತಿ ಆರಂಭಿಸುತ್ತಿದ್ದೆ. ಬಂಜರು ಭೂಮಿಯಂತೆ ಇದ್ದ ಶಾಲೆ ಆವರಣವನ್ನು ಹೇಗಾದರೂ ಮಾಡಿ ಹಸಿರಿನಿಂದ ಕಂಗೊಳಿಸುವಂತೆ ಮಾಡಬೇಕು ಎಂಬ ಉದ್ದೇಶದಿಂದ ವರ್ಷದಿಂದ ವರ್ಷಕ್ಕೆ ಸಸಿಗಳನ್ನು ಹೆಚ್ಚೆಚ್ಚು ಸಸಿ ನೆಡುತ್ತಾ ಪೋಷಣೆ ಮಾಡುತ್ತಾ ಸಾಗಿದೆ. ನಂತರದ ಕೆಲ ವರ್ಷಗಳಲ್ಲಿ ಶಾಲೆಗೆ ಸೇರಿಕೊಂಡ ರವೀತಾ ಠಾಕೂರೆ, ಬಾಬುರಾವ್ ಮೇತ್ರೆ, ಶಾಲಾ ಮಕ್ಕಳು ನನ್ನ ಕಾರ್ಯಕ್ಕೆ ಸಾಥ್ ನೀಡಿ ಶಾಲೆ ಆವರಣವನ್ನು ಹಸಿರಿನಿಂದ ಕೂಡಿರುವಂತೆ ಮಾಡಿದ್ದಾರೆ’ ಎಂದು ಪ್ರಭಾರ ಮುಖ್ಯಶಿಕ್ಷಕ ಧರ್ಮೇಂದ್ರ ಎ.ಭೋಸ್ಲೆ ಹೇಳಿದರು.

ಕಳೆದ ಮೇ ತಿಂಗಳಿನಿಂದ ಶಾಲೆಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಹೀಗಾಗಿ ಗಿಡಗಳು ಒಣಗುವ ಹಂತಕ್ಕೆ ಬಂದಿವೆ. ಸಂಬಂಧಪಟ್ಟವರು ಶಾಲೆ ಆವರಣದಲ್ಲಿ ನೂತನ ಕೊಳವೆ ಬಾವಿ ಕೊರೆಯಿಸಿ ನೀರಿನ ಸಮಸ್ಯೆಗೆ ಮುಕ್ತಿ ಹಾಡಬೇಕು ಎಂದು ಧರ್ಮೇಂದ್ರ ಭೋಸ್ಲೆ ಮನವಿ ಮಾಡುತ್ತಾರೆ.

*
ಮಕ್ಕಳ ಕಲಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಶಾಲೆಯಲ್ಲಿ ಗೋಡೆಯ ಮೇಲೆ ಚಿತ್ರಿಸಿರುವ ಚಿತ್ರ, ಮಾಹಿತಿ ಮಕ್ಕಳ ಕಲಿಕೆಗೆ ಸಹಕಾರಿ ಆಗಿವೆ.
-ಧರ್ಮೇಂದ್ರ ಎ.ಭೋಸ್ಲೆ, ಪ್ರಭಾರ ಮುಖ್ಯಶಿಕ್ಷಕ

Post Comments (+)