ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗುಗಣ್ಣಿನಿಂದ ಪಶು ತಳಿ ವೀಕ್ಷಿಸಿದ ರೈತರು

ಕಪ್ಪು ಮಾಂಸದ ಕರಿ ಕೋಳಿ, ಮೊಟ್ಟೆ ತಿನ್ನುವ ಕೋಣ
Last Updated 9 ಫೆಬ್ರುವರಿ 2020, 10:43 IST
ಅಕ್ಷರ ಗಾತ್ರ

ಬೀದರ್‌: ತಾಲ್ಲೂಕಿನ ಕಮಠಾಣ ಸಮೀಪದ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ ಪಶು ಮೇಳವು ಜಾನುವಾರು ಜಾತ್ರೆಯಾಗಿ ಕಂಡು ಬಂದರೂ ತಜ್ಞರು ಹಾಗೂ ಅನುಭವಿಗಳು ಅಲ್ಲಿ ಸೇರಿದ್ದರಿಂದ ರೈತರು ಹಾಗೂ ಜಾನುವಾರು ಮಾಲೀಕರಿಗೆ ಭರಪೂರ ಮಾಹಿತಿ ದೊರಕಿತು.

ಕಲ್ಯಾಣ ಕರ್ನಾಟಕದ ಅನೇಕ ರೈತರು ಈವರೆಗೂ ನೋಡದ ಅನೇಕ ತಳಿಗಳ ಹಸುಗಳನ್ನು ಬೆರಗುಗಣ್ಣಿನಿಂದ ವೀಕ್ಷಿಸಿ, ತಜ್ಞರೊಂದಿಗೆ ಸಮಾಲೋಚಿಸಿ ತಮ್ಮ ಸಂದೇಹಗಳನ್ನು ನಿವಾರಿಸಿಕೊಂಡರು.

ಉಡುಪಿ ಜಿಲ್ಲೆಯ ಕಾಂಕ್ರೇಜ್‌ ತಳಿಯ ಬೃಹತ್‌ ಕೋಡುಗಳ ಎತ್ತು, ದಿನಕ್ಕೆ 24 ಮೊಟ್ಟೆ ತಿನ್ನುವ ಬೀದರ್‌ ತಾಲ್ಲೂಕಿನ ಬಗದಲ್‌ನ ಜಾಫ್ರಾಬಾದಿ ಗಿರ್‌ ಕೋಣ, ಮುದ್ದು ಮುಖದ ಪುಂಗನೂರು ಹಸುಗಳು, ಎಂತಹ ವಾತಾವರಣಕ್ಕೂ ಒಗ್ಗಿಕೊಳ್ಳುವ ಕಿಲಾರಿ ಎತ್ತು, ಬಿಸಿಲ ನಾಡಿನ ದೇವಣಿ ಹಸುಗಳಿದ್ದ ಮಳಿಗೆಗಳಿಗೆ ಭೇಟಿ ನೀಡಿ ಅವುಗಳ ನಿರ್ವಹಣೆ, ಮೇವು ಸೇವನೆಯ ಪ್ರಮಾಣ ಹಾಗೂ ಹಸು ಬೆಳೆದ ನಂತರ ಅವುಗಳಿಗೆ ದೊರಕುವ ಬೆಲೆಗಳ ಬಗ್ಗೆ ರೈತರು ಆಸಕ್ತಿಯಿಂದ ತಿಳಿದುಕೊಂಡರು.

ಲಾತೂರಿನ ರಾಮರಾವ್‌ ಜಾಧವ, ಬಾಜಿ ಯಾದವ್‌, ಪರಭಣಿಯ ರಾವಸಾಹೇಬ ವಿಠ್ಠಲ್‌ ಅವರು ತಮ್ಮ ಮನೆಯಲ್ಲಿ ಸಾಕಿರುವ 7 ತಿಂಗಳಿಂದ 2 ವರ್ಷದ ವರೆಗಿನ ಹಸುವಿನ ಬೆಲೆ ₹ 60 ಸಾವಿರದಿಂದ ₹ 2 ಲಕ್ಷ ವರೆಗೆ ಇರುವುದಾಗಿ ತಿಳಿಸಿದರು.

ಗೋಪುರಾಕಾರದ ಪ್ರತ್ಯೇಕವಾದ ಪೆಂಡಾಲ್‌ನಲ್ಲಿ ಕಾಂಕ್ರೇಜ್‌ ತಳಿಯ ಎತ್ತನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಇದು ಬೇರೆಯವರಿಗೆ ಸಮೀಪಕ್ಕೂ ಬರಲು ಬಿಡುತ್ತಿರಲಿಲ್ಲ. ಆದರೆ, ಅದರ ಸ್ವಾಮಿನಿಷ್ಠೆ ಮೆಚ್ಚುವಂತಹದ್ದಾಗಿತ್ತು. ಲಾತೂರ್‌ ಜಿಲ್ಲೆಯಿಂದ ಬಂದಿದ್ದ ಅನೇಕ ರೈತರು ದೇವಣಿ ಹಸುಗಳೊಂದಿಗೆ ಬಿಸಿಲಲ್ಲೇ ಸಮಯ ಕಳೆದರು. ಕಡಿಮೆ ಮೇವು ತಿಂದು ಕೃಷಿ ಚಟುವಟಿಕೆಗಳಿಗೆ ನೆರವಾಗುವ ಅತ್ಯುತ್ತಮ ಎತ್ತು ಎನ್ನುವ ಬಗ್ಗೆ ರೈತರಿಗೆ ಮನವರಿಕೆ ಮಾಡಿದರು. ಕಂದು, ಕಪ್ಪು–ಬಿಳಿ ಮಿಶ್ರಿತ ಹೋರಿ ಹಾಗೂ ಹಸುಗಳು ಮೇಳದಲ್ಲಿ ಗಮನ ಸೆಳೆದವು.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ಪುಂಗನೂರು ಮೂಲದ ಹಸುವಿನ ಕುಬ್ಜ ತಳಿಯ ಬಾಲ ಹಾಗೂ ಕೆಚ್ಚಲು ಭೂಮಿಗೆ ತಾಗುವಂತೆ ಕಂಡು ಬಂದಿತು. ಎಲ್ಲ ಹವಾಮಾನಗಳಿಗೆ ಒಗ್ಗಿಕೊಳ್ಳುವ, ಬರ ಪರಿಸ್ಥಿತಿಯಲ್ಲೂ ಒಣ ಮೇವಿಗೆ ಒಗ್ಗಿ ಕೊಳ್ಳುವ ತಳಿ ಇದಾಗಿದೆ. ದಿನಕ್ಕೆ 4 ಲೀಟರ್‌ ಹಾಲು ಕೊಡುತ್ತದೆ. ಇದರ ಸಗಣಿಯನ್ನು ಜೀವಾಮೃತ ಔಷಧಿಯಾಗಿ ಬಳಸಬಹುದು. ಗೋಪೂಜಾ ಕಾರ್ಯಗಳಿಗೆ ಹೆಚ್ಚು ಬೇಡಿಕೆ ಇದೆ ಎಂದು ಪುಂಗನೂರು ಹಸುವಿನ ಮಾಲೀಕ ರೈತರಿಗೆ ಮಾಹಿತಿ ಒದಗಿಸಿದರು.

ಹಾಲೆಂಡ್‌ ಮೂಲದ ಎಚ್‌.ಎಫ್‌.ಹೈನುತಳಿ ಹಾಗೂ ಅದರ ಗರ್ಭಧಾರಣೆಯ ಮಾಹಿತಿಯನ್ನು ಕಿಯೊನಿಕ್ಸ್ ಮಾದರಿಯ ಫಲಕದಲ್ಲಿ ಪ್ರದರ್ಶಿಸಲಾಗಿತ್ತು. ರೈತರು ಓದಿ ತಿಳಿದುಕೊಂಡರು.

ಅಧಿಕ ಪ್ರಮಾಣದಲ್ಲಿ ಪೋಷಕಾಂಶ ಹೊಂದಿರುವ ಕ್ವಾಯಿಲ್ (ಕೌಜ) ಕೋಳಿಯ ಬಗ್ಗೆ ಕುಕ್ಕುಟೋದ್ಯಮಿಗಳು ಮುಗಿಬಿದ್ದು ತಿಳಿದುಕೊಂಡರು. ‘ಕೌಜ ಕೋಳಿಯ ಮರಿಗಳು ಹೈದರಾಬಾದ್‌ನಲ್ಲಿ ಲಭ್ಯ ಇವೆ. ಇವು ಕಡಿಮೆ ಪ್ರಮಾಣದಲ್ಲಿ ಆಹಾರ ನೀರು ಸೇವಿಸುತ್ತವೆ. ಅವುಗಳ ಸಾಕಾಣಿಕೆಗೆ ರಾಜ್ಯದಲ್ಲಿ ಅರಣ್ಯ ಇಲಾಖೆಯ ಅನುಮತಿ ಇಲ್ಲ’ ಎಂದು ಪಶು ತಜ್ಞ ಡಾ.ಗಂಗಾಧರ ಕಾಪ್ಸೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT