ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾರಿ ಅಡಿ ಸಿಲುಕಿದ್ದ ವ್ಯಕ್ತಿಯ ಜೀವ ರಕ್ಷಣೆ

ಮಾರ್ಗದಲ್ಲಿ ಸಾಗುತ್ತಿದ್ದ ಒಬ್ಬ ಅಧಿಕಾರಿಯೂ ನೆರವಿಗೆ ಬರಲಿಲ್ಲ; ಯುವಕರ ಸಮಯಪ್ರಜ್ಞೆಗೆ ಮೆಚ್ಚುಗೆ
Last Updated 29 ಜೂನ್ 2019, 20:00 IST
ಅಕ್ಷರ ಗಾತ್ರ

ಬೀದರ್: ಸೋಲಾಪುರ–ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ ಮೇಲೆ ಚಲಿಸುವಾಗ ಆಕಸ್ಮಿಕವಾಗಿ ಮಗುಚಿ ಬಿದ್ದ ಸರಕು ತುಂಬಿದ ಲಾರಿಯಡಿ ಸಿಲುಕಿ ನರಳಾಡುತ್ತಿದ್ದ ಕ್ಲೀನರ್‌ನನ್ನು ಬಸವಕಲ್ಯಾಣದ ಉದ್ಯಮಿ ಸಯ್ಯದ್‌ ನವಾಜ್‌ ಹಾಗೂ ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್ ಅವರ ಆಪ್ತ ಸಹಾಯಕ ಪಂಕಜ್‌ ಸೂರ್ಯವಂಶಿ ಮಧ್ಯರಾತ್ರಿ ಪ್ರಯಾಸಪಟ್ಟು ಬದುಕಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಬಸವಕಲ್ಯಾಣ ತಾಲ್ಲೂಕಿನ ಹಳ್ಳಿ ಗ್ರಾಮದ ಸಮೀಪ ಉದಗಿರ ಕಡೆಯಿಂದ ಹೈದರಾಬಾದ್‌ಗೆ ಈರುಳ್ಳಿ ಸಾಗಿಸುತ್ತಿದ್ದ ಲಾರಿಯೊಂದು ಆಕಸ್ಮಿಕವಾಗಿ ರಾಷ್ಟ್ರೀಯ ಹೆದ್ದಾರಿಯ ಮೇಲೆ ಉರುಳಿ ಬಿದ್ದಿತು. ಲಾರಿ ಚಾಲಕ ಆಶ್ಚರ್ಯಕರ ರೀತಿಯಲ್ಲಿ ಪಾರಾದರೆ, ಕ್ಲೀನರ್‌ ಹೊರಗೆ ಜಿಗಿಯುವಷ್ಟರಲ್ಲಿ ಆತನ ಬಲಗೈ ಪೂರ್ತಿ ಲಾರಿಯಡಿ ಸಿಲುಕಿತು.

ಕ್ಲೀನರ್‌ ತನ್ನನ್ನು ಬದುಕಿಸುವಂತೆ ಜೋರಾಗಿ ಕೂಗ ತೊಡಗಿದ. ನರಳಾಡಿ. ಶಕ್ತಿ ಇದ್ದಷ್ಟು ಕಿರುಚಾಡಿದ. ಚಾಲಕ, ಕ್ಲೀನರ್‌ನನ್ನು ಹೊರಗೆ ತೆಗೆಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕ್ಲೀನರ್‌ನ ತಲೆಗೂ ಬಲವಾಗಿ ಪೆಟ್ಟಾಗಿ ರಕ್ತ ಹರಿಯುತ್ತಿತ್ತು.

ಹೆದ್ದಾರಿ ಮೇಲೆ ಹೋಗುತ್ತಿದ್ದ ಪ್ರತಿಯೊಂದು ವಾಹನದ ಚಾಲಕರತ್ತ ಕೈಮುಗಿದು ಸಹಾಯಕ್ಕೆ ಬರುವಂತೆ ಕಚ್ಚಾ ಪ್ಲಾಸ್ಟಿಕ್ ಸಾಮಗ್ರಿ ಸಾಗಿಸುತ್ತಿದ್ದ ಲಾರಿಯ ಚಾಲಕ ಅಂಗಲಾಚುತ್ತಿದ್ದ.

ಹೆದ್ದಾರಿಯಲ್ಲಿ ಸಾಗುತ್ತಿದ್ದ ಒಬ್ಬ ಚಾಲಕನೂ ಗಾಡಿ ನಿಲ್ಲಿಸಲು ಸಿದ್ಧನಿರಲಿಲ್ಲ. ಲಾರಿ ಅಡಿ ಸಿಲುಕಿದ್ದ ವ್ಯಕ್ತಿಯ ನರಳಾಟವನ್ನು ನೋಡಿಕೊಂಡು ಎಲ್ಲರೂ ಮುಂದೆ ಸಾಗುತ್ತಿದ್ದರು.

ಬಸವಕಲ್ಯಾಣ ತಾಲ್ಲೂಕಿನ ಉಜಳಂಬದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಿ ನಿದ್ರೆಗೆ ಜಾರಿದ ನಂತರ ಮಧ್ಯರಾತ್ರಿ ಅಧಿಕಾರಿಗಳು ಒಬ್ಬೊಬ್ಬರಾಗಿ ಸರ್ಕಾರಿ ವಾಹನದಲ್ಲಿ ಮನೆಗೆ ತೆರಳುತ್ತಿದ್ದರು. ಯಾರೊಬ್ಬರೂ ವಾಹನ ನಿಲುಗಡೆ ಮಾಡಿ ಗಾಯಾಳುವಿನ ನೆರವಿಗೆ ಬರಲಿಲ್ಲ. ಇದೇ ಅವಧಿಯಲ್ಲಿ ವೇಳೆ ಉಜಳಂಬದಿಂದ ಹೊರಟಿದ್ದ ಸಯ್ಯದ್‌ ನವಾಜ್‌, ಪಂಕಜ್‌ ಸೂರ್ಯವಂಶಿ ಹಾಗೂ ಕೆಲ ಪತ್ರಕರ್ತರು ತಕ್ಷಣ ವಾಹನದಿಂದ ಕೆಳಗೆ ಇಳಿದು ಲಾರಿ ಅಡಿಯಲ್ಲಿ ಸಿಲುಕಿದ್ದ ವ್ಯಕ್ತಿಯ ಸಹಾಯಕ್ಕೆ ಧಾವಿಸಿದರು.

ಹೆದ್ದಾರಿಯಲ್ಲಿ ಸಾಗುತ್ತಿದ್ದ ವಾಹನಗಳ ಚಾಲಕರಿಗೆ ಕ್ಲೀನರ್‌ ಮನವಿ ಮಾಡುವುದನ್ನು ಮುಂದುವರಿಸಿದ್ದ. ಈ ನಡುವೆ ನೆರೆದಿದ್ದ ಎಲ್ಲರೂ ಲಾರಿಯ ಕ್ಯಾಬಿನ್‌ ಅಡಿಯಲ್ಲಿ ಕಬ್ಬಿಣದ ಸಲಾಕೆ ಹಾಗೂ ದೊಣ್ಣೆಗಳನ್ನು ಹಾಕಿ ವಾಹನದ ಮುಂಭಾಗ ಮೇಲೆತ್ತಿ ಕ್ಲೀನರ್ ಕೈಗೆಯಲು ಯತ್ನಿಸಿದರು. ಲಾರಿ ತುಂಬ ಕಚ್ಚಾ ಪ್ಲಾಸ್ಟಿಕ್ ಸಾಮಗ್ರಿ ತುಂಬಿಕೊಂಡಿದ್ದರಿಂದ ಒಂದು ಸೆಂಟಿ ಮೀಟರ್‌ ಸಹ ಮೇಲೆ ಏಳಲಿಲ್ಲ. ಇದೇ ಸಂದರ್ಭದಲ್ಲಿ ಹಿಂದಿನಿಂದ ಮಹಾಮಾರಿಯಂತೆ ವೇಗವಾಗಿ ಬಂದ ಇನ್ನೊಂದು ಲಾರಿ ನಿಂತಿದ್ದ ಲಾರಿಗೆ ಅಪ್ಪಳಿಸಿತು. ಆ ಲಾರಿಯ ಗಾಜುಗಳೆಲ್ಲವೂ ಪುಡಿಯಾದವು. ಲಾರಿ ಮುಂದೆ ರಕ್ಷಣೆ ಕಾರ್ಯದಲ್ಲಿ ತೊಡಗಿದ್ದ ಎಲ್ಲರೂ ತಮ್ಮ ಪ್ರಾಣ ರಕ್ಷಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದರು.

ಪತ್ರಕರ್ತರೊಬ್ಬರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಮೊಬೈಲ್‌ ಕರೆ ಮಾಡಿ ಮಾಹಿತಿ ಮುಟ್ಟಿಸಿದರು. ಜೆಸಿಬಿ ಅಥವಾ ಕ್ರೇನ್‌ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು.

ಎಸ್‌ಪಿ ಅವರು ಸಮೀಪದ ಪೊಲೀಸ್‌ ಠಾಣೆ ಹಾಗೂ ಹೈವೇ ಪೊಲೀಸರಿಗೆ ತಕ್ಷಣ ಸಂದೇಶ ರವಾನೆ ಮಾಡಿದರು. ಪೊಲೀಸರು ಬಂದರಾದರೂ ಕ್ರೇನ್‌ ಬರಲಿಲ್ಲ.

ಕಾರಿನಲ್ಲಿದ್ದ ಉದ್ಯಮಿ ಸಯ್ಯದ್‌ ನವಾಜ್‌ ಹಾಗೂ ಬಸವಕಲ್ಯಾಣ ಶಾಸಕ ಬಿ.ನಾರಾಯಣ ಅವರ ಆಪ್ತ ಸಹಾಯಕ ಪಂಕಜ್‌ ಸೂರ್ಯವಂಶಿ ಅವರು ಬಸವಕಲ್ಯಾಣದ ಸಸ್ತಾಪುರದ ಕ್ರೇನ್‌ ಚಾಲಕನ ಮನೆಗೆ ತೆರಳಿ ಮನವಿ ಮಾಡಿ ತಮ್ಮ ಜತೆಗೆ ಕ್ರೇನ್‌ ಅನ್ನು ಅಪಘಾತ ಸ್ಥಳಕ್ಕೆ ಕರೆ ತಂದರು. ಕ್ರೇನ್‌ ಸಹಾಯದಿಂದ ಲಾರಿಯನ್ನು ಮೇಲಕ್ಕೆ ಎಬ್ಬಿಸಿ ಗಾಯಗೊಂಡ ವ್ಯಕ್ತಿಯನ್ನು ಹೊರ ತೆಗೆದು ಬಸವಕಲ್ಯಾಣ ಆಸ್ಪತ್ರೆಗೆ ಸಾಗಿಸಿದರು.

ಉಮರ್ಗಾ ತಾಲ್ಲೂಕಿನ ಕರಳಿ ಗ್ರಾಮದ ಕ್ಲೀನರ್‌ ಜ್ಞಾನೇಶ್ವರ ಅಂಗ (25) ಬಸವಕಲ್ಯಾಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಬೆಳಿಗ್ಗೆ ಉಮರ್ಗಾಕ್ಕೆ ತೆರಳಿ ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಯ್ಯದ್‌ ನವಾಜ್‌ ಹಾಗೂ ಪಂಕಜ್‌ ಸೂರ್ಯವಂಶಿ ಅವರು ಮುಖ್ಯಮಂತ್ರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಎರಡು ದಿನ ಓಡಾಡಿ ಸುಸ್ತಾದರೂ ಮಾನವೀಯ ನೆಲೆಯಲ್ಲಿ ಲಾರಿ ಕ್ಲೀನರ್‌ ಜೀವ ಉಳಿಸಿದ್ದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

*
ರಾಷ್ಟ್ರೀಯ ಹೆದ್ದಾರಿಯ ಮೇಲಿನ ಹೈವೇ ಪೊಲೀಸರ ಸಭೆ ಕರೆದು ಅಪಘಾತ ಸಂದರ್ಭದಲ್ಲಿ ತಕ್ಷಣಕ್ಕೆ ನೆರವು ಒದಗಿಸುವಂತೆ ಸೂಚನೆ ನೀಡಲಾಗುವುದು.
-ಟಿ.ಶ್ರೀಧರ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT