ಗುರುವಾರ , ಅಕ್ಟೋಬರ್ 17, 2019
21 °C
ಹುಲಸೂರ ಕೃಷಿಕನ ನಿರಂತರ ಶ್ರಮದಿಂದ ಉತ್ತಮ ಬೆಳೆ

ಬಸವಕಲ್ಯಾಣ: ಕಬ್ಬು ಬೆಳೆದು ಲಾಭ ಮಾಡಿಕೊಂಡ ರೈತ

Published:
Updated:
Prajavani

ಬಸವಕಲ್ಯಾಣ: ಹುಲಸೂರನ ರೈತ ಸಹೋದರರಾದ ವಿಲಾಸ ಹಾಗೂ ದಿಲೀಪ ಜಾನಬಾ ಅವರು ನಿರಂತರ ಶ್ರಮದಿಂದ ಹೊಲದಲ್ಲಿ ಕಬ್ಬು ಹಾಗೂ ಇತರೆ ಬೆಳೆ ಬೆಳೆದು ಲಾಭ ಮಾಡಿಕೊಂಡಿದ್ದಾರೆ. ಕಬ್ಬು 10 ಅಡಿಗೂ ಹೆಚ್ಚಿನ ಎತ್ತರಕ್ಕೆ ಬೆಳೆದಿದ್ದು ಎಲ್ಲರ ಗಮನ ಸೆಳೆಯುತ್ತಿದೆ.

ಹುಲಸೂರ ಈಚೆಗೆ ತಾಲ್ಲೂಕು ಕೇಂದ್ರ ಆಗಿದ್ದು ಹಿಂದುಳಿದ ಪ್ರದೇಶವಾಗಿದೆ. ಇಲ್ಲಿನ ಜಮೀನು ಕೂಡ ಅಷ್ಟೊಂದು ಫಲವತ್ತಾಗಿ ಇಲ್ಲ. ಅಲ್ಲದೆ ಬೇಸಿಗೆಯಲ್ಲಿ ನೀರಿನ ಕೊರತೆ ಆಗುತ್ತದೆ. ಈ ಕಾರಣ ಕಬ್ಬು ಮತ್ತಿತರೆ ನೀರಾವರಿ ಆಧಾರಿತ ಬೆಳೆ ಬೆಳೆಯುವುದು ಕಡಿಮೆ. ಇಂಥದರಲ್ಲೂ ಇವರು ಕಬ್ಬು ಬೆಳೆಯುತ್ತಿದ್ದಾರೆ. ಐದಾರು ವರ್ಷಗಳಿಂದ ಕಬ್ಬಿನ ಇಳುವರಿಯೂ ಹೆಚ್ಚಿದೆ. ಹೀಗಾಗಿ ಅನ್ಯ ರೈತರಿಗೆ ಇವರು ಮಾದರಿ ಆಗಿದ್ದಾರೆ.

ಈ ವರ್ಷ ಈ ಭಾಗದಲ್ಲಿ ಮಳೆ ವಿಳಂಬವಾಗಿ ಸುರಿದಿದ್ದರೂ ಇವರ ಹೊಲದಲ್ಲಿನ ಕಬ್ಬು ಹಾಗೂ ಸೋಯಾಬಿನ್ ಸರಿಯಾಗಿ ಬೆಳೆದಿದೆ. ಕೆಲ ಭಾಗದಲ್ಲಿ ಬೆಳೆದ ಝೆಂಡು ಹೂ ಕೂಡ ಹೊಲವನ್ನು ಹಳದಿಯಾಗಿ ಕಾಣುವಂತೆ ಮಾಡಿವೆ. ಪಕ್ಕದಲ್ಲಿಯೇ ರಸ್ತೆಯಿದ್ದು ಅಲ್ಲಿಂದ ಹೋಗುವವರು ಈ ಹೊಲದ ಕಡೆ ಒಮ್ಮೆ ತಿರುಗಿ ನೋಡುವಂತೆ ಹಸಿರು ಕಂಗೊಳಿಸುತ್ತಿದೆ.

`ಮೊದಲು ಬರೀ ತೊಗರಿ, ಸಜ್ಜೆ ಬೆಳೆಯುತ್ತಿದ್ದೇವು. ಕೆಲ ವರ್ಷಗಳಿಂದ ಕಬ್ಬು ಬೆಳೆಯುತ್ತಿದ್ದೇವೆ. ಐದಾರು ಎಕರೆ ಜಮೀನಿದ್ದು ಒಂದುವರೆ ಎಕರೆಯಲ್ಲಿ ಕಬ್ಬು ಇನ್ನುಳಿದಿದರಲ್ಲಿ ತೊಗರಿ, ಸೋಯಾಬಿನ್, ಹೂವು ಬೆಳೆದಿದ್ದೇವೆ' ಎಂದು ರೈತ ವಿಲಾಸ ಜಾನಬಾ ತಿಳಿಸಿದರು.

`ಕೃಷಿಯೇ ಕುಟುಂಬ ನಿರ್ವಹಣೆಗೆ ಆಧಾರವಾಗಿದೆ. ಬಾವಿಯ ನೀರಿನ ಹಿತಮಿತ ಬಳಕೆಯಿಂದ ಬೆಳೆ ಉತ್ತಮವಾಗಿ ಬರುತ್ತಿದೆ. ಹೀಗಾಗಿ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಅಗತ್ಯವಿದ್ದಾಗ ಅಷ್ಟೇ ರಾಸಾಯನಿಕ ಗೊಬ್ಬರ ಸಿಂಪಡಿಸಲಾಗುತ್ತದೆ. ಇಲ್ಲದಿದ್ದರೆ ತಿಪ್ಪೆ ಗೊಬ್ಬರವನ್ನೇ ಹರಡುತ್ತೇವೆ. ಕಬ್ಬು ಅಷ್ಟೇ ಅಲ್ಲ ಇತರೆ ಬೆಳೆಗಳಿಗೂ ಅಗತ್ಯವಿದ್ದಾಗ ನೀರುಣಿಸಲಾಗುತ್ತದೆ' ಎಂದಿದ್ದಾರೆ.

`ಹುಲಸೂರ ದೊಡ್ಡ ಊರಾಗಿದ್ದು ಈಚೆಗೆ ಇದನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಲಾಗಿದೆ. ಆದರೂ, ಇಲ್ಲಿ ವ್ಯಾಪಾರ ವಹಿವಾಟು ಹೇಳಿಕೊಳ್ಳುವಷ್ಟು ಬೆಳೆದಿಲ್ಲ. ಆದ್ದರಿಂದ ಇಲ್ಲಿನ ಅನೇಕರು ಕೃಷಿಯಲ್ಲಿಯೇ ತೊಡಗಿದ್ದಾರೆ. ವಿಲಾಸ ಹಾಗೂ ದಿಲೀಪ ಜಾನಬಾ ಅವರು ದಿನ ಬೆಳಗಾದರೆ ಹೊಲದಲ್ಲಿ ದುಡಿಯಲು ಹೋಗುತ್ತಾರೆ. ಆದ್ದರಿಂದ ಉತ್ತಮ ಕೃಷಿಕರೆದು ಗುರುತಿಸಿಕೊಂಡಿದ್ದಾರೆ' ಎಂದು ಗ್ರಾಮಸ್ಥ ನಾಗನಾಥ ಇಜಾರೆ ಹೇಳಿದ್ದಾರೆ.

*
ಬೇಸಿಗೆ ಬಂತೆಂದರೆ ಈ ಭಾಗದಲ್ಲಿ ನೀರಿನ ಸಮಸ್ಯೆ ಕಾಡುತ್ತದೆ. ಅಂಥದರಲ್ಲೂ ಸರಿಯಾದ ಆರೈಕೆಯಿಂದ ಕಬ್ಬಿಗೆ ಹಾನಿ ಆಗದಂತೆ ನೋಡಿಕೊಳ್ಳಲಾಗುತ್ತಿದೆ.
-ವಿಲಾಸ ಜಾನಬಾ, ರೈತ

Post Comments (+)