ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೇನು ಸಾಕಾಣಿಕೆಯಿಂದ ಕೃಷಿ ಇಳುವರಿ ವೃದ್ಧಿ

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಸುನೀಲಕುಮಾರ ಹೇಳಿಕೆ
Last Updated 11 ಮಾರ್ಚ್ 2020, 19:35 IST
ಅಕ್ಷರ ಗಾತ್ರ

ಬೀದರ್‌: ‘ಪರಾಗ ಸ್ಪರ್ಶದಲ್ಲಿ ಜೇನು ನೊಣಗಳ ಪಾತ್ರ ಶೇಕಡ 65ರಷ್ಟು ಇದೆ. ಜೇನು ಸಾಕಾಣಿಕೆಯಿಂದ ಕೃಷಿಯಲ್ಲಿ ಶೇಕಡ 20 ರಿಂದ 35ರಷ್ಟು ಹೆಚ್ಚು ಇಳುವರಿ ಪಡೆಯಬಹುದಾಗಿದೆ’ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಸುನೀಲಕುಮಾರ ಎನ್.ಎಂ. ಹೇಳಿದರು.

ಇಲ್ಲಿಯ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರ ಕಚೇರಿ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಜೇನು ಪ್ರದರ್ಶನ, ಮಾರಾಟ ಮೇಳ ಹಾಗೂ ಜೇನು ಕೃಷಿ ತಾಂತ್ರಿಕ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಜೇನು ಸಾಕಾಣಿಕೆಗೆ ಮುಂಚೆ ಜೇನು ಪ್ರಬೇಧಗಳು, ಜೇನು ದುಂಬಿಗಳ ಜೀವನ ಶೈಲಿ, ವಿವಿಧ ಋತುಮಾನಗಳಲ್ಲಿ ಅವುಗಳ ನಿರ್ವಹಣೆ ಕುರಿತು ಮಾಹಿತಿ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

‘ಜೇನು ನೊಣಗಳು ಸಹ ಒಂದು ರೀತಿಯಲ್ಲಿ ಸಮಾಜ ಜೀವಿಯಾಗಿವೆ. ಹೆಣ್ಣು ಜೇನು ಒಂದರಿಂದ ಮೂರು ವರ್ಷಗಳ ವರೆಗೆ ಬದುಕಿದರೆ, ಗಂಡು 60 ದಿನಗಳ ವರೆಗೆ ಮಾತ್ರ ಬದುಕಿ ಉಳಿಯುತ್ತದೆ. ಸೈನಿಕ ಹುಳುಗಳ ಜೀವಿತಾವಧಿ 90 ದಿನಗಳು ಮಾತ್ರ. ಇವೆಲ್ಲವೂ ಪ್ರಕೃತಿಯ ವೈವಿಧ್ಯ ಹಾಗೂ ಸಂರಕ್ಷಣೆಗೆ ಅನುಕೂಲಕರವಾಗಿವೆ’ ಎಂದು ಿವರಿಸಿದರು.

‘ರೈತರು ಆರಂಭದಲ್ಲಿ ಎರಡು ಪೆಟ್ಟಿಗೆಗಳಿಂದ ಜೇನು ಸಾಕಾಣಿಕೆ ಆರಂಭಿಸುವುದು ಸೂಕ್ತ. ಅನುಭವದ ಆಧಾರದ ಮೇಲೆ ಪೆಟ್ಟಿಗೆಗಳನ್ನು ವಿಸ್ತರಿಸಿಕೊಳ್ಳಬಹುದು’ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ತೋಟಗಾರಿಕೆ ಕಾಲೇಜಿನ ಡೀನ್ ಡಾ.ರವೀಂದ್ರ ಮೂಲಗೆ ಮಾತನಾಡಿ, ‘ಜೇನು ಸಾಕಾಣಿಕೆಯು ಕೃಷಿ ಇಳುವರಿ ಹೆಚ್ಚಲು ನೆರವಾಗುವುದಲ್ಲದೇ, ರೈತರಿಗೆ ಲಾಭ ನೀಡುವ ಉಪಕಸುಬಾಗಿದೆ’ ಎಂದು ಹೇಳಿದರು.

‘ಜೇನು ಸಾಕಾಣಿಕೆಯು ಕೃಷಿ ಹಾಗೂ ತೋಟಗಾರಿಕೆಯ ಅಭಿವೃದ್ಧಿಗೆ ಪೂರಕವಾಗಿದೆ. ಜೇನು ನೊಣಗಳಿಂದ ಪರಾಗಸ್ಪರ್ಶವಾಗುವುದರಿಂದ ಬೆಳೆಗಳ ಇಳುವರಿ ಮತ್ತು ಗುಣಮಟ್ಟ ಹೆಚ್ಚುತ್ತದೆ. ಹೀಗಾಗಿ ರೈತರು ಜೇನು ಸಾಕಾಣಿಕೆಗೆ ಮುಂದಾಗಬೇಕು’ ಎಂದು ಸಲಹೆ ನೀಡಿದರು.

‘ಜೇನು ಸಾಕಾಣಿಕೆ ಆರಂಭಿಸಿರುವ ರೈತರು ಬೇಸಿಗೆ ಅವಧಿಯಲ್ಲಿ ಹೂಗಳ ಪ್ರಮಾಣ ಇಳಿಕೆಯಾಗುವ ಕಾರಣ ಸಕ್ಕರೆ ಪಾಕ ಒದಗಿಸುವ ಮೂಲಕ ಜೇನು ನೊಣಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು’ ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಬಾವಗೆ ಮಾತನಾಡಿ, ‘ಭೂಮಿಯ ಮೇಲಿರುವ ಸಸ್ಯ ಪ್ರಬೇಧಗಳಲ್ಲಿ ಬಹುತೇಕ ಸಸ್ಯಗಳ ಸಂತತಿಯು ಪರಾಗಸ್ಪರ್ಶದ ಮೂಲಕ ನಡೆಯುತ್ತದೆ. ಜೇನು ಔಷಧದ ರೂಪದಲ್ಲಿಯೂ ಬಳಕೆಯಾಗುತ್ತದೆ. ಬೀದರ್ ಜಿಲ್ಲೆಯು ಜೇನು ಸಾಕಾಣಿಕೆಗೆ ಸೂಕ್ತವಾಗಿದೆ’ ಎಂದು ಹೇಳಿದರು.

‘ತೋಟಗಾರಿಕೆ ಇಲಾಖೆಯಿಂದಲೂ ಜೇನು ಸಾಕಾಣಿಕೆದಾರರಿಗೆ ನೆರವು ನೀಡಲಾಗುತ್ತಿದೆ. ರೈತರು ಯಾವುದೇ ಹಿಂಜರಿಕೆ ಇಲ್ಲದೆ ಇಲಾಖೆಯ ಸೌಲಭ್ಯ ಪಡೆದು ಜೇನು ಸಾಕಾಣಿಕೆ ಆರಂಭಿಸಬೇಕು’ ಎಂದು ತಿಳಿಸಿದರು.

ಬೀದರ್‌ ತಾಲ್ಲೂಕಿನ ಚಿಟ್ಟಾದ ಪ್ರಗತಿಪರ ರೈತ ಜಾಫರ್ ಮಾತನಾಡಿ, ‘ಜೇನು ಸಾಕಾಣಿಕೆಯಿಂದ ಜೇನು ತುಪ್ಪದ ಜತೆಗೆ ಮಾವು, ಪಪ್ಪಾಯಿ, ಪೇರಲ ಬೆಳೆಗಳು ಉತ್ತಮ ಫಸಲು ನೀಡುತ್ತವೆ. ಶುದ್ಧ ಜೇನು ಮಾರಾಟದ ಮೂಲಕವೂ ಅಧಿಕ ಲಾಭ ಪಡೆಯಬಹುದಾಗಿದೆ’ ಎಂದು ಹೇಳಿದರು.
ಪ್ರಗತಿ ಪರ ರೈತ ಚೇತನ ದಾಬಕಾ ಮಾತನಾಡಿದರು. ಬೆಂಗಳೂರಿನ ಜೇನು ಪೆಟ್ಟಿಗೆ ತಯಾರಕ ಇಂದುಶೇಖರ ಹಾಗೂ ಜಿಲ್ಲೆಯ ವಿವಿಧೆಡೆಯ ರೈತರು ಜೇನು ಸಾಕಾಣಿಕೆಯ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಜೇನು ಕೃಷಿಕರಾದ ಡಾ.ಮಲ್ಲಿಕಾರ್ಜುನ ಎಂ.ಎ, ತೋಟಗಾರಿಕೆ ಇಲಾಖೆಯ ವಿಷಯ ತಜ್ಞ ವಿಜಯಕುಮಾರ ರೇವಣ್ಣನವರ್ ಇದ್ದರು.

ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶಿವಪುತ್ರ ಶಂಭು ನಿರೂಪಿಸಿದರು. ಜೇನು ಮೇಳದ ಪ್ರಯುಕ್ತ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರ ಕಚೇರಿಯ ಆವರಣದಲ್ಲಿ ಜೇನು ಪ್ರದರ್ಶನ ಮತ್ತು ಮಾರಾಟ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT