ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಪ್ರಯಾಣ ದರ ಏರಿಕೆ ತಟ್ಟಿದ ಬಿಸಿ

ಜಿಲ್ಲೆಗೆ ಬರುವ ಮಹಾರಾಷ್ಟ್ರ, ತೆಲಂಗಾಣ ಬಸ್ ಪ್ರಯಾಣ ದರದಲ್ಲೂ ಹೆಚ್ಚಳ
Last Updated 27 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಬೀದರ್‌: ಒಂದು ವಾರದ ಹಿಂದೆಯೇ ಹಾಲಿನ ದರ ಹೆಚ್ಚಳವಾಗಿದೆ. ಬಜೆಟ್‌ನಲ್ಲಿ ಮದ್ಯದ ಮೇಲಿನ ತೆರಿಗೆ ಹೆಚ್ಚಳವಾಗಲಿದೆ ಎನ್ನುವ ಸುದ್ದಿ ಆಗಲೇ ಮದ್ಯಪ್ರಿಯರಿಗೆ ನೋವು ಉಂಟು ಮಾಡಿದೆ. ಇದೀಗ ಬಸ್‌ ಪ್ರಯಾಣ ದರವೂ ಹೆಚ್ಚಳವಾಗಿರುವುದು ಜನಸಾಮಾನ್ಯರಿಗೆ ಬಿಸಿ ಮುಟ್ಟಿಸಿದೆ.

ತಾಲ್ಲೂಕು ಕೇಂದ್ರಗಳಲ್ಲಿ ಸರಿಯಾದ ಸೌಲಭ್ಯಗಳು ಇಲ್ಲ ಎನ್ನುವ ಕಾರಣಕ್ಕೆ ಅನೇಕ ಜನ ಸರ್ಕಾರಿ ನೌಕರರು ಹಾಗೂ ಖಾಸಗಿ ಸಂಸ್ಥೆಗಳ ಸಿಬ್ಬಂದಿ ಬೀದರ್‌ನಲ್ಲಿ ವಾಸವಾಗಿದ್ದಾರೆ. ಶಿಕ್ಷಕರು, ಬ್ಯಾಂಕ್‌ ಸಿಬ್ಬಂದಿ ಸೇರಿದಂತೆ ಅನೇಕ ನೌಕರರು ನಿತ್ಯ ತಾಲ್ಲೂಕು ಕೇಂದ್ರಗಳ ಕಚೇರಿಗಳಿಗೆ ತೆರಳಿ ಸಂಜೆ ಬೀದರ್‌ಗೆ ಮರಳುತ್ತಾರೆ. ತಾಲ್ಲೂಕು ಕೇಂದ್ರಗಳಿಂದ ಕೂಲಿ ಕಾರ್ಮಿಕರು ಜಿಲ್ಲಾ ಕೇಂದ್ರಕ್ಕೆ ಬರುತ್ತಾರೆ. ಬಸ್‌ ಪ್ರಯಾಣ ದರ ಹೆಚ್ಚಳದ ಬಿಸಿ ಎಲ್ಲರಿಗೂ ತಟ್ಟಿದೆ.

ಜಿಲ್ಲಾ ಕೇಂದ್ರದಿಂದ ತಾಲ್ಲೂಕು ಕೇಂದ್ರಗಳಿಗೆ ತೆರಳುವ ಬಸ್‌ಗಳ ಪ್ರಯಾಣ ದರದಲ್ಲಿ ₹ 5 ರಿಂದ ₹ 10 ಮಾತ್ರ ಹೆಚ್ಚಳವಾಗಿದೆ. ದೂರದ ನಗರಗಳಿಗೆ ತೆರಳುವ ಕೆಂಪು ಬಸ್‌ಗಳ ದರದಲ್ಲಿ ₹ 50 ವರೆಗೆ ಏರಿಕೆಯಾಗಿದೆ. ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ಹಾಗೂ ದಾವಣಗೆರೆ ನಗರಗಳಿಗೆ ತೆರಳುವ ಎಸಿ ಹಾಗೂ ಸ್ಲೀಪರ್‌ ಕೋಚ್‌) ಬಸ್‌ಗಳ ಪ್ರಯಾಣ ದರದಲ್ಲಿ ₹ 20 ಹೆಚ್ಚಳವಾಗಿದೆ.

ನಗರ ಸಾರಿಗೆ ಬಸ್‌ಗಳ ಪ್ರಯಾಣ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಮಹಾರಾಷ್ಟ್ರದ ಸಾರಿಗೆ ಸಂಸ್ಥೆ ಒಂದು ತಿಂಗಳ ಹಿಂದೆಯೇ ಬಸ್‌ ಪ್ರಯಾಣ ದರ ಏರಿಕೆ ಮಾಡಿದೆ. ಹೀಗಾಗಿ ರಾಜ್ಯದಿಂದ ಮಹಾರಾಷ್ಟ್ರದ ನಗರಗಳಿಗೆ ಹೊರಡುವ ಬಸ್‌ಗಳ ಪ್ರಯಾಣ ದರ 15 ದಿನ ಹಿಂದೆಯೇ ಹೆಚ್ಚಾಗಿದೆ.

ತೆಲಂಗಾಣ ಕಡೆಗೆ ಪ್ರಯಾಣಿಸುವ ಬಸ್‌ಗಳ ಪ್ರಯಾಣ ದರ ಹೆಚ್ಚಾಗಿಲ್ಲ.

ಒಂದು ದಿನದ ಪಾಸ್‌ ದರದಲ್ಲೂ ಹೆಚ್ಚಳ
ಬೀದರ್‌:
ಒಂದು ದಿನದ ಬಸ್‌ ಪಾಸ್‌ ದರದಲ್ಲೂ ಹೆಚ್ಚಳವಾಗಿದೆ. ಬೀದರ್‌–ಕಲಬುರ್ಗಿ ಮಧ್ಯದ ಬಸ್‌ ಪಾಸ್ ದರ ₹215ರಿಂದ ₹ 240, ಹುಮನಾಬಾದ್–ಕಲಬುರ್ಗಿ ₹110ರಿಂದ ₹120 ಹಾಗೂ ಬೀದರ್‌ – ಹುಮನಾಬಾದ್‌ ಬಸ್‌ ಪಾಸ್‌ ದರ ₹104 ರಿಂದ ₹115ಕ್ಕೆ ಹೆಚ್ಚಿದೆ.

‘ಕೇಂದ್ರ ಕಚೇರಿಯ ಒಂದು ದಿನದ ಪಾಸ್‌ಗಳ ಪರಿಷ್ಕೃತ ದರ ಪಟ್ಟಿ ಬಂದಿದೆ. ಮಾಸಿಕ ದರದ ಪಟ್ಟಿ ಶೀಘ್ರದಲ್ಲೇ ಬರಲಿದೆ. ಪರಿಷ್ಕೃತ ದರ ಪಟ್ಟಿ ಬರುವ ವರೆಗೆ ಮಾಸಿಕ ಪಾಸ್‌ಗಳ ವಿತರಣೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ. ಹೊಸ ಪಟ್ಟಿ ಬಂದ ತಕ್ಷಣ ವಿತರಿಸಲಾಗುವುದು’ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ ಕುಲಕರ್ಣಿ ತಿಳಿಸಿದರು.

*
ಸಾರಿಗೆ ಸಂಸ್ಥೆ ಬಸ್ ಪ್ರಯಾಣ ದರದಲ್ಲಿ ಶೇ 12ರಷ್ಟು ಹೆಚ್ಚಳ ಮಾಡಲಾಗಿದ್ದು, ದರ ಏರಿಕೆ ಗುರುವಾರದಿಂದ ಅನ್ವಯವಾಗಲಿದೆ.
-ಶಶಿಧರ ಕುಲಕರ್ಣಿ, ವಿಭಾಗೀಯ ನಿಯಂತ್ರಣಾಧಿಕಾರಿ

*
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರ ದೈನಂದಿನ ಜೀವನ ನಿರ್ವಹಣೆ ಕಷ್ಟದಲ್ಲಿರುವ ಸಂದರ್ಭದಲ್ಲಿ ಬಸ್ ದರ ಹೆಚ್ಚಳದ ಅಗತ್ಯವಿರಲಿಲ್ಲ.
-ಶಿವಕುಮಾರ ಪಟಪಳ್ಳಿ, ಖಾಸಗಿ ಉದ್ಯೋಗಿ
.....................................................................
ಬೀದರ್‌ನಿಂದ ಬೇರೆ ಊರುಗಳಿಗೆ ಇರುವ ಪ್ರಯಾಣ ದರ
......................................................................
ಊರು – ಮೊದಲಿನ ದರ –ಪರಿಷ್ಕೃತ ದರ (ರೂ.ಗಳಲ್ಲಿ)
......................................................
ಕಲಬುರ್ಗಿ– 113 –126
ಬೆಂಗಳೂರು(ಸಾಮಾನ್ಯ)–695– 770
ಬೆಂಗಳೂರು(ರಾಜಹಂಸ)– 980– 1,005
ಬೆಂಗಳೂರು(ಎ.ಸಿ)– 1,080– 1,090
ಹೈದರಾಬಾದ್– 166– 170
ಮುಂಬೈ– 880– 892
ಪುಣೆ– 556– 570
ಉದಗಿರ– 90– 105
ನಾಂದೇಡ 225– 250
ಸೋಲಾಪುರ 230– 242
...........
ಬಸವಕಲ್ಯಾಣ– 90– 100
ಹುಮನಾಬಾದ್– 55– 60
ಭಾಲ್ಕಿ– 44– 50
ಔರಾದ್– 44– 50
ಕಮಲನಗರ– 70– 80
................................
ಬಳ್ಳಾರಿ 403–452
ಬಳ್ಳಾರಿ(ಎ.ಸಿ) 741–745
ಬೆಳಗಾವಿ 460–530
ಹುಬ್ಬಳ್ಳಿ 480–538
ಶಿವಮೊಗ್ಗ 590–660
ದಾವಣಗೆರೆ 526–590
ದಾವಣಗೆರೆ(ಎ.ಸಿ) 944–953

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT