ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಟೇನ್ಮೆಂಟ್‌ ಪ್ರದೇಶ: ಧಾರ್ಮಿಕ ಕೇಂದ್ರ ತೆರವಿಗಿಲ್ಲ ಅವಕಾಶ

Last Updated 8 ಜೂನ್ 2020, 16:06 IST
ಅಕ್ಷರ ಗಾತ್ರ

ಬೀದರ್‌: ಕೋವಿಡ್ 19 ಸೋಂಕಿನ ಕಾರಣ ಜಿಲ್ಲೆಯಲ್ಲಿ ಗುರುತಿಸಲಾದ ಕಂಟೇನ್ಮೆಂಟ್‌ ಝೋನ್‌ಗಳ ವ್ಯಾಪ್ತಿಯಲ್ಲಿ ಇರುವ ದೇವಾಲಯಗಳು, ಮಸೀದಿ, ಚರ್ಚ್ ಹಾಗೂ ಇತರ ಯಾವುದೇ ಧಾರ್ಮಿಕ ಕೇಂದ್ರಗಳನ್ನು ತೆರೆಯುವಂತಿಲ್ಲ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಹೇಳಿದ್ದಾರೆ.

ಜಿಲ್ಲೆಯ ವಿವಿಧ ತಾಲ್ಲೂಕುಗಳ ತಹಶೀಲ್ದಾರರು ಹಾಗೂ ಇತರ ಅಧಿಕಾರಿಗಳೊಂದಿಗೆ ಸೋಮವಾರ ನಡೆಸಿದ ವಿಡಿಯೊ ಸಂವಾದದಲ್ಲಿ ದೇವಾಲಯ, ಮಸೀದಿ, ಚರ್ಚ್‌ ಸೇರಿದಂತೆ ಧಾರ್ಮಿಕ ಕೇಂದ್ರಗಳ ತೆರೆಯುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿದ ಸುತ್ತೋಲೆಯ ಅಂಶಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು.

‘ಕೋವಿಡ್ 19 ಪ್ರಯುಕ್ತ ಧಾರ್ಮಿಕ ಸ್ಥಳಗಳಲ್ಲಿ ಕಡ್ಡಾಯ ನಿಯಮಗಳನ್ನು ಅನುಸರಿಸಲು ಎಲ್ಲ ತಹಶೀಲ್ದಾರರು ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯಿಂದ ಎಲ್ಲ ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರಿಗೆ ಪತ್ರಗಳನ್ನು ರವಾನಿಸಬೇಕು’ ಎಂದು ತಿಳಿಸಿದರು.

‘ಧಾರ್ಮಿಕ ಸ್ಥಳಗಳಲ್ಲಿ ಜನಸಂದಣಿಯಾಗದ ಹಾಗೆ ನೋಡಿಕೊಳ್ಳಬೇಕು. ಪ್ರತಿ ದಿನ ಸ್ವಚ್ಛತಾ ಕಾರ್ಯ ನಡೆಸಬೇಕು ಎಂದು ಆಯಾ ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರಿಗೆ ತಿಳಿಸಬೇಕು’ ಎಂದರು.

‘ಧಾರ್ಮಿಕ ಸ್ಥಳಗಳಿಗೆ ಬರುವ ಜನರು ಕಡ್ಡಾಯ ಮಾಸ್ಕ್‌ ಧರಿಸಬೇಕು. ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಕೈ ತೊಳೆದುಕೊಳ್ಳಬೇಕು. ಸ್ಯಾನಿಟೈಸರ್ ಉಪಯೋಗಿಸಬೇಕು ಎನ್ನುವ ಮಹತ್ವದ ಅಂಶಗಳ ಮಾಹಿತಿಯ ಪೋಸ್ಟರ್‌ಗಳನ್ನು ಧಾರ್ಮಿಕ ಸ್ಥಳಗಳಲ್ಲಿ ಅಲ್ಲಲ್ಲಿ ಅಂಟಿಸಿ ಜನರಲ್ಲಿ ವ್ಯಾಪಕ ತಿಳಿವಳಿಕೆ ಮೂಡಿಸುವ ಕೆಲಸ ಆಗಬೇಕು’ ಎಂದು ಹೇಳಿದರು.

‘ಧಾರ್ಮಿಕ ಮತ್ತು ಇತರ ಸ್ಥಳಗಳಲ್ಲಿ ಇರುವಾಗ, ಸೀನು ಬಂದರೆ ಕರವಸ್ತ್ರ ಬಳಸಬೇಕು ಎನ್ನುವ ಪರಿಜ್ಞಾನ ಕೆಲವರಿಗೆ ಇರುವುದಿಲ್ಲ. ಸೀನುವುದರಿಂದ ವೈರಾಣು ಒಬ್ಬರಿಂದ ಇನ್ನೊಬ್ಬರಿಗೆ ವೇಗವಾಗಿ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಕರವಸ್ತ್ರ ಇಲ್ಲದಿದ್ದಾಗ ತೋಳುಗಳನ್ನು ಮೂಗಿನ ಮುಂದೆ ತಂದು ಸೀನುವಂತಹ ಸುರಕ್ಷತಾ ವಿಧಾನಗಳನ್ನು ಅನುಸರಿಸುವಂತೆ ತಿಳಿವಳಿಕೆ ಮೂಡಿಸಬೇಕು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗ್ವಾರ್‌ ಮಾತನಾಡಿ, ‘ಧಾರ್ಮಿಕ ಕೇಂದ್ರಗಳಲ್ಲಿ ಪ್ರತಿ ದಿನ ನಡೆಯುವ ಪ್ರಾರ್ಥನೆ ವೇಳೆಯಲ್ಲಿ ಕೋವಿಡ್ 19 ನಿಯಮಗಳ ಪಾಲನೆ ಬಗ್ಗೆ ಅರಿವು ಮೂಡಿಸಬೇಕು. ಸಂಬಂಧಿಸಿದ ನೋಡಲ್ ಅಧಿಕಾರಿಗಳು ಆಗಾಗ ಅಲ್ಲಿನ ಕಾರ್ಯವೈಖರಿ ಪರೀಕ್ಷಿಸಿ, ನಿಯಮಗಳು ಪಾಲನೆ ಆಗುತ್ತಿದೆಯೋ ಇಲ್ಲವೋ ಎನ್ನುವುದರ ಬಗ್ಗೆ ನಿಗಾ ವಹಿಸಬೇಕು’ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ ಮಾತನಾಡಿ, ‘ಧಾರ್ಮಿಕ ಸ್ಥಳಗಳ ಆವರಣದಲ್ಲಿನ ಅಂಗಡಿಗಳು ಸರಿಯಾಗಿ ನಿಯಮ ಪಾಲನೆ ಮಾಡಬೇಕು’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಉಪ ವಿಭಾಗಾಧಿಕಾರಿಗಳಾದ ಅಕ್ಷಯ್ ಶ್ರೀಧರ್, ಭಂವರಸಿಂಗ್ ಮೀನಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿ.ಜಿ.ರೆಡ್ಡಿ, ವೈದ್ಯಾಧಿಕಾರಿಗಳಾದ ಡಾ.ಕೃಷ್ಣಾ ರೆಡ್ಡಿ, ಡಾ.ರತಿಕಾಂತ ಸ್ವಾಮಿ, ಡಾ.ದೀಪಾ ಖಂಡ್ರೆ, ಡಾ.ಇಂದುಮತಿ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT