ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ | ಕಲುಷಿತ ನೀರಿನ ಘಟನೆ ಮತ್ತೆ ಆಗದಿರಲಿ: ಮುನೀಶ್ ಮೌದ್ಗಿಲ್

Published 3 ಆಗಸ್ಟ್ 2023, 6:44 IST
Last Updated 3 ಆಗಸ್ಟ್ 2023, 6:44 IST
ಅಕ್ಷರ ಗಾತ್ರ

ಬೀದರ್‌: ‘ತಾಲ್ಲೂಕಿನ ಬರಿದಾಬಾದ್ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಅನೇಕರು ಅಸ್ವಸ್ಥರಾಗಿದ್ದಾರೆ. ಇದಕ್ಕೂ ಮುನ್ನ ಔರಾದ್‌ ತಾಲ್ಲೂಕಿನ ಕರಕ್ಯಾಳ ಗ್ರಾಮದಲ್ಲಿ ಇದೇ ರೀತಿ ಘಟನೆ ಆಗಿತ್ತು. ಆಗಲೇ ಎಚ್ಚರ ವಹಿಸುವಂತೆ ತಿಳಿಸಲಾಗಿತ್ತು. ಆದರೂ ಪುನಃ ಆಗಿದೆ. ಈಗಲಾದರೂ ನೀರಿನ ಗಂಭೀರತೆ ಅರಿತು ಕೆಲಸ ಮಾಡಬೇಕು. ಹಳೆಯ ಘಟನೆ ಮರುಕಳಿಸದಂತೆ ಬಹಳ ಎಚ್ಚರಿಕೆ ವಹಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮುನೀಶ್ ಮೌದ್ಗಿಲ್ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಜರುಗಿದ ಜೂನ್‌ ತಿಂಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಲುಷಿತ ನೀರಿಗೆ ಜೆಜೆಎಂ ಕಾಮಗಾರಿ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆ ಯೋಜನೆಯ ಮೇಲುಸ್ತುವಾರಿ ವಹಿಸಿರುವ ಅಧಿಕಾರಿಗಳು ಹೆಚ್ಚು ಜಾಗರೂಕರಾಗಿ ಕೆಲಸ ಮಾಡುವಂತೆ ನಿರ್ದೇಶನ ನೀಡಿದರು.

ಬರಿದಾಬಾದ್‌ನಲ್ಲಿ ಜು. 25ರಂದು ಕಲುಷಿತ ನೀರು ಕುಡಿದು ಸಾರ್ವಜನಿಕರು ಅಸ್ವಸ್ಥರಾದ ಘಟನೆ ನಡೆದಾಗ ಪ್ರಾಥಾಮಿಕ ಹಂತದಲ್ಲಿಯೇ ಬಗೆಹರಿಸಲು ಪಿಡಿಒ ಪ್ರಯತ್ನಿಸಿದ್ದಾರೆ. ಮೇಲಧಿಕಾರಿಗಳ ಗಮನಕ್ಕೆ ವಿಷಯ ತರದ ಕಾರಣ ವಿಳಂಬವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ. ಮಾಹಿತಿ ನೀಡಿದರು.

‘ಗೃಹಲಕ್ಷ್ಮಿ’ ಯೋಜನೆಯಡಿ ಜಿಲ್ಲೆಯಲ್ಲಿ 2,54,211 ಅರ್ಜಿಗಳು ಸಲ್ಲಿಕೆಯಾಗಿವೆ. 1,500 ಅರ್ಜಿಗಳು ಆಧಾರ್‌ ಸರ್ವರ್‌ ಸಮಸ್ಯೆ ಹಾಗೂ ಆಧಾರ್‌ ಲಿಂಕ್‌ ಮಾಡದ ಬ್ಯಾಂಕ್‌ ಖಾತೆ ವಿವರ ನೀಡಿರುವುದರಿಂದ ಪೆಂಡಿಂಗ್‌ನಲ್ಲಿವೆ. ‘ಅನ್ನಭಾಗ್ಯ’ ಯೋಜನೆಯಡಿ ಹೆಚ್ಚುವರಿ ಅಕ್ಕಿ ಬದಲು ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನಗದು ಜಮೆ ಮಾಡಲಾಗಿದೆ. ‘ಗೃಹಜ್ಯೋತಿ’ ಯೋಜನೆಯಡಿ ಜಿಲ್ಲೆಯಲ್ಲಿ 3.67 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ‘ಶಕ್ತಿ’ ಯೋಜನೆಯಡಿ ಜಿಲ್ಲೆಯಲ್ಲಿ ನಿತ್ಯ 93 ಸಾವಿರ ಮಹಿಳೆಯರು ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಸಂಚರಿಸುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಬೆಳೆಗೆ ಪರಿಹಾರ: ‘ಇತ್ತೀಚೆಗೆ ತೊಗರಿ ಬೆಳೆಗೆ ನೆಟೆ ರೋಗ ಬಂದು ಹಾನಿಯಾಗಿದ್ದು, ಕೆಲವು ರೈತರಿಗೆ ಈಗಾಗಲೇ ಮೊದಲ ಕಂತಿನ‌ಲ್ಲಿ ಪರಿಹಾರ ನೀಡಲಾಗಿದೆ. ಇತರೆ ರೈತರಿಗೆ ಬರುವ ಕಂತಿನಲ್ಲಿ ಪರಿಹಾರ ನೀಡಲಾಗುವುದು. ಅತಿವೃಷ್ಟಿಯಿಂದ ಹಾನಿಗೊಳಗಾದ ಬೆಳೆಗಳ ಪರಿಹಾರಕ್ಕಾಗಿ ದಾಖಲೀಕರಣ ಮಾಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸುಗೂರ ತಿಳಿಸಿದರು. ‘ಎಲ್ಲ ರೈತರಿಗೆ ಪರಿಹಾರ ಕಲ್ಪಿಸಬೇಕು’ ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಬೀದರ್‌ ಉಪವಿಭಾಗಾಧಿಕಾರಿ ಲವೀಶ್ ಓರ್ಡಿಯಾ, ಬಸವಕಲ್ಯಾಣ ಉಪವಿಭಾಗಾಧಿಕಾರಿ ರಮೇಶ ಕೋಲಾರ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಇತರರು ಹಾಜರಿದ್ದರು.

ಪ್ರತಿ ವಾರ ಭೇಟಿಗೆ ಸೂಚನೆ
ಕೆಳಹಂತದ ಕಾಮಗಾರಿ ಹಾಗೂ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದರೆ ಅಭಿವೃದ್ಧಿ ಕಾಣಬಹುದು. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಮಿತಿ ರಚಿಸಿಕೊಂಡು ಪ್ರತಿ ವಾರ ಒಂದು ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಬೇಕು. ಮಾಹಿತಿ ಪಡೆಯಬೇಕು ಎಂದು ಮುನೀಶ್‌ ಮೌದ್ಗಿಲ್‌ ಅಧಿಕಾರಿಗಳಿಗೆ ಸೂಚಿಸಿದರು. ಕಾಮಗಾರಿಗಳಲ್ಲಿ ಯಾವುದಾದರೂ ನ್ಯೂನತೆ ಕಂಡುಬಂದರೆ ಕೆಳಹಂತದ ಅಧಿಕಾರಿಗಳು ಮೇಲಧಿಕಾರಿಗಳ ಗಮನಕ್ಕೆ ತರಬೇಕು. ಸಮನ್ವಯದಿಂದ ಕೆಲಸ ಮಾಡಿದಾಗ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT