ಶನಿವಾರ, ಜನವರಿ 18, 2020
20 °C
ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣ ನಿರ್ಮಾಣ

ಏಕಪಕ್ಷೀಯ ನಿರ್ಧಾರ ಕೈಬಿಡದಿದ್ದರೆ ಧರಣಿ: ಅರಳಿ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣ ನಿರ್ಮಾಣದ ಸ್ಥಳದ ಕುರಿತು ಜಿಲ್ಲಾಧಿಕಾರಿ ಏಕಪಕ್ಷೀಯ ನಿರ್ಧಾರ ಕೈಬಿಡಬೇಕು. ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಎಚ್ಚರಿಸಿದ್ದಾರೆ.

ಕೊಳಾರ(ಕೆ) ಸಮೀಪದ ರೇಷ್ಮೆ ಇಲಾಖೆ ಕಚೇರಿ ಪಕ್ಕದಲ್ಲೇ ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣ ನಿರ್ಮಿಸಲಾಗುವುದು. ಸ್ಥಳ ಬದಲಾವಣೆ ಇಲ್ಲವೇ ಇಲ್ಲ ಎಂದು ಜಿಲ್ಲಾಧಿಕಾರಿ ಹೇಳಿಕೆ ನೀಡಿರುವುದು ಹಾಸ್ಯಾಸ್ಪದ. ಇದು ಜನಪ್ರತಿನಿಧಿಗಳ ಹಕ್ಕಿನ ಉಲ್ಲಂಘನೆ ಎಂದು ಹೇಳಿದ್ದಾರೆ.

ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣ ಜನರಿಗೆ ಹತ್ತಿರವಾಗಿರಬೇಕು. ಆದರೆ, ಜಿಲ್ಲಾಧಿಕಾರಿ ತನ್ನ ಸ್ವಂತ ಆಸ್ತಿ ಎನ್ನುವಂತೆ, ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಪರವಾನಗಿ ಇಲ್ಲದೆ ತನ್ನ ವಸತಿಗೃಹ ಕಟ್ಟಿಕೊಂಡಂತೆ ಏಕಪಕ್ಷೀಯ ನಿರ್ಧಾರ ಪ್ರಕಟಿಸಿರುವುದು ಆಶ್ಚರ್ಯ ಉಂಟು ಮಾಡಿದೆ ಎಂದಿದ್ದಾರೆ.

ಈಶ್ವರ ಖಂಡ್ರೆ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ನಡೆದ ಸಭೆಯಲ್ಲಿ ಸದ್ಯದ ಜಿಲ್ಲಾಧಿಕಾರಿ ಕಚೇರಿ ಸ್ಥಳದಲ್ಲೇ ಸಂಕೀರ್ಣ ನಿರ್ಮಿಸಲು ಒಕ್ಕೋರಲಿನಿಂದ ನಿರ್ಣಯಿಸಲಾಗಿತ್ತು. ಸಂಸದ ಭಗವಂತ ಖೂಬಾ, ಶಾಸಕ ರಹೀಂಖಾನ್ ಹಾಗೂ ಇತರರ ಸಮ್ಮುಖದಲ್ಲೇ ಈ ತೀರ್ಮಾನ ಆಗಿತ್ತು. ನಂತರ 2017 ರ ಆಗಸ್ಟ್ 13 ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಕೀರ್ಣ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು ಎಂದು ಹೇಳಿದ್ದಾರೆ.

ರೇಷ್ಮೆ ಇಲಾಖೆ ಕಚೇರಿ ನಗರದಿಂದ 8 ಕಿ.ಮೀ. ಅಂತರದಲ್ಲಿದೆ. ನ್ಯಾಯಾಲಯ, ತಹಶೀಲ್ದಾರ್ ಕಚೇರಿ, ಬ್ಯಾಂಕ್, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಿಂದ ದೂರ ಇದೆ. ಹೀಗಾಗಿ ಸಂಕೀರ್ಣ ನಿರ್ಮಿಸಲು ಸೂಕ್ತವಾಗಿಲ್ಲ. ಅಲ್ಲಿ ಸಂಕೀರ್ಣ ನಿರ್ಮಿಸಿದರೆ ಜನರಿಗೆ ಅನುಕೂಲದ ಬದಲು ಸಮಸ್ಯೆಯಾಗಲಿದೆ ಎಂದು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು