ಬೀದರ್: ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಬೀದರ್ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ (ಬಿಡಿಸಿಸಿ) ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರ ಸಹೋದರ ಅಮರಕುಮಾರ ಖಂಡ್ರೆಯವರ ಪೆನಾಲ್ ಜಯಭೇರಿ ಗಳಿಸಿದೆ.
ಬ್ಯಾಂಕಿನ ಆಡಳಿತ ಮಂಡಳಿಯ ಒಟ್ಟು 15 ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿತ್ತು. ಅದರಲ್ಲಿ ಬ್ಯಾಂಕಿನ ಮಾಜಿ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಅವರ ಪೆನಾಲ್‌ನ ಮೂವರು ಚುನಾವಣೆಗೂ ಮುನ್ನವೇ ಅವಿರೋಧವಾಗಿ ಆಯ್ಕೆಯಾಗಿದ್ದರು. ಬುಧವಾರ 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಖಂಡ್ರೆ ಪೆನಾಲ್‌ನ ಎಂಟು ಜನ ಆಯ್ಕೆಯಾದರು. ಇದರೊಂದಿಗೆ ಡಿಸಿಸಿ ಬ್ಯಾಂಕಿನ ಅಧಿಕಾರದ ಚುಕ್ಕಾಣಿ ಖಂಡ್ರೆ ಪರಿವಾರದ ಕೈಗೆ ಬಂದಂತಾಗಿದೆ. ಇನ್ನು, ಉಮಾಕಾಂತ ಹಾಗೂ ಕಿಶನರಾವ ಮಾತ್ರ ಚುನಾವಣೆಯಲ್ಲಿ ಗೆಲುವು ಸಾಧಿಸಿದರು.
ಅಮರಕುಮಾರ ಖಂಡ್ರೆಯವರ ಬೆನ್ನಿಗೆ ಅವರ ಸಹೋದರ, ಸಚಿವ ಈಶ್ವರ ಬಿ. ಖಂಡ್ರೆ ಹಾಗೂ ಉಮಾಕಾಂತ ಅವರಿಗೆ ಕೇಂದ್ರ ಸಚಿವ ಭಗವಂತ ಖೂಬಾ ಅವರು ಬೆಂಬಲ ಸೂಚಿಸಿದ್ದರು. ಇದರಿಂದ ಚುನಾವಣೆ ಕಾವು ಮತ್ತಷ್ಟು ಹೆಚ್ಚಾಗಿತ್ತು. ಮತದಾನಕ್ಕೂ ಪೂರ್ವದಲ್ಲಿ ಪರಸ್ಪರ ಕೆಸರೆರಚಾಟ, ವೈಯಕ್ತಿಕ ಟೀಕೆ ಟಿಪ್ಪಣಿಗಳು ಕೂಡ ನಡೆದಿದ್ದವು. ಸಹಜವಾಗಿಯೇ ಎಲ್ಲರ ಗಮನ ಚುನಾವಣೆಯತ್ತ ಸೆಳೆದಿತ್ತು. ಆದರೆ, ಅಂತಿಮವಾಗಿ ಖಂಡ್ರೆ ಪೆನಾಲ್ ಜಯಗಳಿಸಿ ಜಿಲ್ಲೆಯ ರಾಜಕೀಯದಲ್ಲಿ ಮೇಲುಗೈ ಸಾಧಿಸಿದೆ. ಸಹಕಾರ ಕ್ಷೇತ್ರವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ.
38 ವರ್ಷಗಳ ಅಧಿಕಾರ ಅಂತ್ಯ:
ಬೀದರ್ ಡಿಸಿಸಿ ಬ್ಯಾಂಕ್ 101 ವರ್ಷಗಳನ್ನು ಪೂರೈಸಿದೆ. ಇದರಲ್ಲಿ ಕಳೆದ 38 ವರ್ಷಗಳಿಂದ ನಾಗಮಾರಪಳ್ಳಿ ಕುಟುಂಬದವರೇ ಅಧ್ಯಕ್ಷರಾಗಿ ಅಧಿಕಾರ ನಡೆಸುತ್ತಿದ್ದರು. 1985ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಮಾಜಿಸಚಿವ ದಿವಂಗತ ಗುರುಪಾದಪ್ಪ ನಾಗಮಾರಪಳ್ಳಿ ಅವರು 2015ರ ನವೆಂಬರ್ ವರೆಗೆ ಆ ಸ್ಥಾನದಲ್ಲಿದ್ದರು. ಅದರ ನಂತರ ಅವರ ಮಗ ಉಮಾಕಾಂತ ನಾಗಮಾರಪಳ್ಳಿ ಆ ಸ್ಥಾನಕ್ಕೆ ಬಂದಿದ್ದರು. ಇದುವರೆಗೆ ಅವರೇ ಅಧ್ಯಕ್ಷರಾಗಿದ್ದರು. ಮತ್ತೊಂದು ಅವಧಿಗೆ ಪುನರಾಯ್ಕೆ ಬಯಸಿದ್ದರು. ಆದರೆ, ಈಶ್ವರ ಖಂಡ್ರೆಯವರ ಪ್ರಭಾವಳಿ ನಡುವೆ ನಾಗಮಾರಪಳ್ಳಿ ಕುಟುಂಬದ ಆಟ ನಡೆಯಲಿಲ್ಲ. ಕೇಂದ್ರ ಸಚಿವ ಭಗವಂತ ಖೂಬಾ ಅವರ ಬೆಂಬಲ ಗಿಟ್ಟಿಸಿದರೂ ಅದು ಗೆಲುವಿನ ದಡ ಸೇರಿಸಲಿಲ್ಲ.
ಗುರುಪಾದಪ್ಪ ನಾಗಮಾರಪಳ್ಳಿ ಅವರ ನಿಧನದ ಬಳಿಕ ಜಿಲ್ಲೆಯಲ್ಲಿ ನಾಗಮಾರಪಳ್ಳಿ ಕುಟುಂಬದ ಪ್ರಭಾವ ನಿಧಾನವಾಗಿ ಕಡಿಮೆಯಾಗುತ್ತ ಬರುತ್ತಿದೆ. ಅವರ ಮಗ ಸೂರ್ಯಕಾಂತ ನಾಗಮಾರಪಳ್ಳಿ ಅವರು ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ (ಎನ್‌ಎಸ್‌ಎಸ್‌ಕೆ) ಅಧ್ಯಕ್ಷ ಸ್ಥಾನದಿಂದ ಉಮಾಕಾಂತ ಈ ಹಿಂದೆಯೇ ನಿರ್ಗಮಿಸಿದ್ದಾರೆ. ಈಗ ಡಿಸಿಸಿ ಬ್ಯಾಂಕಿನಲ್ಲಿ ಸೋಲು ಕಂಡಿದ್ದು, ಎಲ್ಲಾ ಅಧಿಕಾರ ಕೇಂದ್ರದಿಂದ ದೂರವಾದಂತಾಗಿದೆ. ಆದರೆ, ತಂದೆಯ ನಿಧನದ ನಂತರ ಉಮಾಕಾಂತ ಅವರು ಬ್ಯಾಂಕ್‌ನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಿದ್ದಾರೆ ಎಂಬ ಮಾತುಗಳು ಸಹಕಾರ ಕ್ಷೇತ್ರದಲ್ಲಿ ಕೇಳಿ ಬರುತ್ತಿದ್ದವು. ಆದರೆ, ಆ ಮಾತುಗಳು ಮತಗಳಾಗಿ ಬದಲಾಗಲಿಲ್ಲ.
ಒಟ್ಟು 15 ಸ್ಥಾನಗಳ ಪೈಕಿ 13ರ ಫಲಿತಾಂಶ ಘೋಷಿಸಲಾಗಿದೆ. ಹೈಕೋರ್ಟ್‌ನಲ್ಲಿ ವ್ಯಾಜ್ಯ ಇರುವುದರಿಂದ ಇನ್ನೆರಡು ಸ್ಥಾನಗಳ ಫಲಿತಾಂಶ ಬಳಿಕ ಪ್ರಕಟಿಸಲಾಗುತ್ತದೆ.
–ಲವೀಶ್ ಒರ್ಡಿಯಾ ಚುನಾವಣಾಧಿಕಾರಿ
ಶೇಕಡಾ ನೂರು ಪ್ರತಿಶತ ಮತದಾನ
ಬೀದರ್ ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಶೇಕಡಾ ನೂರಕ್ಕೆ ನೂರರಷ್ಟು ಮತದಾನವಾಗಿದೆ. ಎಲ್ಲಾ ಆರು ವರ್ಗಗಳಲ್ಲಿ ನೂರು ಪ್ರತಿಶತ ಮತದಾನ ಆಗಿದೆ. ಒಟ್ಟು 195 ಅರ್ಹ ಮತದಾರರು ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದ್ದು ವಿಶೇಷ.
ಮತದಾನ ಮುಗಿಯುವವರೆಗೆ ಇದ್ದ ಖಂಡ್ರೆ
ಮತದಾನ ಪ್ರಕ್ರಿಯೆ ಆರಂಭದಿಂದ ಫಲಿತಾಂಶ ಘೋಷಣೆ ಆಗುವವರೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರು ನಗರದಲ್ಲಿಯೇ ಮೊಕ್ಕಾಂ ಹೂಡಿದ್ದರು. ಆಪ್ತರೊಂದಿಗೆ ಖಾಸಗಿ ಸ್ಥಳದಲ್ಲಿ ಕುಳಿತು ಮತದಾನದ ಪ್ರತಿಯೊಂದು ಮಾಹಿತಿ ಕಲೆ ಹಾಕಿ ರಣತಂತ್ರ ರೂಪಿಸುತ್ತಿದ್ದರು. ಇನು ಫಲಿತಾಂಶ ಹೊರಬಿದ್ದ ನಂತರ ಅವರ ಸಹೋದರ ಅಮರಕುಮಾರ ಖಂಡ್ರೆಯವರು ಅವರಿದ್ದ ಸ್ಥಳಕ್ಕೆ ತೆರಳಿದರು. ಅಲ್ಲಿ ಅವರ ಬೆಂಬಲಿಗರು ಬಣದವರು ಇಬ್ಬರಿಗೂ ಹೂಮಾಲೆ ಹಾಕಿ ಗೌರವಿಸಿದರು. ನಂತರ ಸಂಭ್ರಮಾಚರಿಸಿದರು.
ಭಾವುಕರಾದ ಉಮಾಕಾಂತ
ಬೀದರ್ ಡಿಸಿಸಿ ಬ್ಯಾಂಕಿನ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಮತ ಎಣಿಕೆ ಕೇಂದ್ರದಿಂದ ಹೊರಬಂದ ಉಮಾಕಾಂತ ನಾಗಮಾರಪಳ್ಳಿ ಅವರು ಎಂದಿನಂತೆ ನಗುಮುಖದಿಂದಲೇ ಹೊರಬಂದು ಎಲ್ಲರಿಗೂ ಕೈಮುಗಿದರು. ‘ಬೀದರ್ ಡಿಸಿಸಿ ಬ್ಯಾಂಕಿನ ಚುನಾವಣೆ ಧರ್ಮ–ಅಧರ್ಮದ ಚುನಾವಣೆ ಆಗಿತ್ತು. ಹಣ ಬಲ ಹಾಗೂ ಅಧಿಕಾರ ಬಲ ಚುನಾವಣೆಯಲ್ಲಿ ಕೆಲಸ ಮಾಡಿದೆ. ಎಲ್ಲ ಮತದಾರರು ಭಯಭೀತರಾಗಿದ್ದರು. ಜಿಲ್ಲಾ ಉಸ್ತುವಾರಿ ವಹಿಸಿಕೊಂಡವರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಅಧಿಕಾರ ದುರುಪಯೋಗದ ಜೊತೆಗೆ ಹಣದ ಹೊಳೆಯನ್ನೆ ಹರಿಸಿದ್ದಾರೆ’ ಎಂದು ಭಾವುಕರಾಗಿ ಹೇಳಿದರು.
ಎಂದೂ ಕಂಡರಿಯದ ಭದ್ರತೆ
ತೀವ್ರ ಜಿದ್ದಾಜಿದ್ದಿನ ಚುನಾವಣೆ ಇದಾಗಿದ್ದರಿಂದ ಬೀದರ್ ಡಿಸಿಸಿ ಬ್ಯಾಂಕಿಗೆ ಬೆಳಿಗ್ಗೆಯಿಂದ ಸಂಜೆ ಆರು ಗಂಟೆಯ ವರೆಗೆ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಭದ್ರತೆಯಲ್ಲಿ ಲೋಪ ಆಗದಂತೆ ತಡೆಯಲು ಬ್ಯಾಂಕ್ ಎದುರಿನ ಬೀದರ್–ಹೈದರಾಬಾದ್ ಮುಖ್ಯರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಬ್ಯಾರಿಕೇಡ್ ಹಾಕಲಾಗಿತ್ತು. ಡಿಸಿಸಿ ಬ್ಯಾಂಕ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಗಳೆಲ್ಲ ಬಂದ್ ಮಾಡಲಾಗಿತ್ತು. ಎಲ್ಲಿ ನೋಡಿದರಲ್ಲಿ ಪೊಲೀಸರೇ ಇದ್ದರು. ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲಾಗಿತ್ತು. ಇಡೀ ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೆ ವಿಡಿಯೋ ಚಿತ್ರೀಕರಣ ಮಾಡಲಾಯಿತು. ಡ್ರೋಣ್ ಮೂಲಕ ನಿಗಾ ವಹಿಸಲಾಗಿತ್ತು. ಚುನಾವಣಾಧಿಕಾರಿ ಲವೀಶ್ ಒರ್ಡಿಯಾ ಅವರು ಇಡೀ ಪ್ರಕ್ರಿಯೆ ನಡೆಸಿಕೊಟ್ಟರು. ಮತದಾನ ಕೇಂದ್ರದ ಹೊರಗೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಎಸ್ಪಿ ಚನ್ನಬಸವಣ್ಣ ಎಸ್.ಎಲ್. ಬೀಡು ಬಿಟ್ಟಿದ್ದರು. ‘ಎಂಪಿ ಎಂಎಲ್‌ಎ ಎಲೆಕ್ಷನ್‌ಗೂ ಇಷ್ಟೊಂದು ಭದ್ರತೆ ನೋಡಿರಲಿಲ್ಲ. ಎಂದೂ ಕಂಡರಿಯದ ಭದ್ರತೆ’ ಎಂದು ಜನ ಮಾತಾಡಿದರು.
ಖೂಬಾ ಬಂದದ್ದಕ್ಕೆ ಗೆಲುವು–ಈಶ್ವರ ಖಂಡ್ರೆ
ಬೀದರ್: ‘ಕೇಂದ್ರ ಸಚಿವ ಭಗವಂತ ಖೂಬಾ ಅವರ ಅಹಂಕಾರ ಸೊಕ್ಕು ದರ್ಪಕ್ಕೆ ರೈತರು ಚುನಾವಣೆಯಲ್ಲಿ ಉತ್ತರ ಕೊಟ್ಟಿದ್ದಾರೆ. ಖೂಬಾ ಚುನಾವಣೆಯಲ್ಲಿ ಬಂದದ್ದಕ್ಕೆ ಗೆಲುವು ಸುಲಭವಾಗಿದೆ. ಅವರ ವಿರುದ್ಧ ವಿರೋಧಿ ಅಲೆ ಎಷ್ಟಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಅವರು ಬೆಂಬಲಿಸಿದರೆ ಮತ ಹಾಕೋರು ಮತ ಹಾಕಲ್ಲ’ ಎಂದು ಸಚಿವ ಈಶ್ವರ ಬಿ. ಖಂಡ್ರೆ ವ್ಯಂಗ್ಯವಾಡಿದರು. ಡಿಸಿಸಿ ಬ್ಯಾಂಕ್ ಜನರ ಬ್ಯಾಂಕ್ ಆಗಬೇಕು. ಕೆಲವೇ ಪಟ್ಟಭದ್ರ ಹಿತಾಸಕ್ತಿಗಳ ಕೈಯಲ್ಲಿತ್ತು. ಉಮಾಕಾಂತ ಸೋಲಿನಿಂದ ಹತಾಶರಾಗಿದ್ದಾರೆ. ಹತಾಶರಾಗಿ ಹಣ ಬಲ ಅಧಿಕಾರ ಬಲ ಎಂಬ ಹೇಳಿಕೆ ನೀಡಿದ್ದಾರೆ. ಅದಕ್ಕೆ ಯಾವುದೇ ಬೆಲೆ ಇಲ್ಲಾ. ಪ್ರಜಾಪ್ರಭುತ್ವದ ವ್ಯವಸ್ಥೆಯ ಅಡಿಯಲ್ಲಿ ಚುನಾವಣೆ ನಡೆದಿದೆ. ಧರ್ಮ ಅಧರ್ಮದ ಆತ್ಮಾವಲೋಕನ ಮಾಡಿಕೊಳ್ಳಲಿ. 38 ವರ್ಷಗಳಿಂದ ಹೇಗೆ ಚುನಾವಣೆ ಮಾಡಿದ್ದಾರೆ ಎಂದು ಜನ್ರಿಗೆ ಗೊತ್ತಿತ್ತಾ ಎಂದು ಚುನಾವಣೆ ಫಲಿತಾಂಶ ಹೊರಬಿದ್ದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.
‘ಗೆಲುವಿನ ಶ್ರೇಯಸ್ಸು ಅಣ್ಣನಿಗೆ ಸಲ್ಲುತ್ತದೆ’
‘ಚುನಾವಣೆಯಲ್ಲಿ ಗೆಲುವಿನ ಶ್ರೇಯಸ್ಸು ನಮ್ಮ ಅಣ್ಣನಿಗೆ ಸಲ್ಲುತ್ತದೆ. ನಾನೊಬ್ಬ ಕಾರ್ಯಕರ್ತನಷ್ಟೇ’ ಎಂದು ಚುನಾವಣಾ ಫಲಿತಾಂಶದ ನಂತರ ಅಮರಕುಮಾರ ಖಂಡ್ರೆ ತಿಳಿಸಿದರು. ‘12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನಾವು 8ರಲ್ಲಿ ಗೆದ್ದಿದ್ದೇವೆ. ಕೋರ್ಟ್‌ನಲ್ಲಿ ವ್ಯಾಜ್ಯ ಇರುವುದರಿಂದ 2ರ ಫಲಿತಾಂಶ ಪೆಂಡಿಂಗ್ ಇಟ್ಟಿದ್ದಾರೆ. ಅವುರೆಡರಲ್ಲೂ ನಮ್ಮ ಪೆನಾಲ್‌ನವರೇ ಇದ್ದಾರೆ. ಅವರೇ ಗೆಲ್ಲುತ್ತಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಬ್ಯಾಂಕ್ ಮುನ್ನಡೆಸಿಕೊಂಡು ಹೋಗುವೆ. ಯಾರ ಆರೋಪಕ್ಕೂ ಪ್ರತಿಕ್ರಿಯಿಸಲಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.