ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಾಠಾ ಸಮಾಜದ ಸಭೆಯಲ್ಲಿ ಪ್ರತಿರೋಧ: ವೇದಿಕೆ ಏರದೆ ಕಾಲ್ಕಿತ್ತ ಸಂಸದ ಖೂಬಾ

Last Updated 2 ಏಪ್ರಿಲ್ 2021, 11:18 IST
ಅಕ್ಷರ ಗಾತ್ರ

ಬಸವಕಲ್ಯಾಣ (ಬೀದರ್ ಜಿಲ್ಲೆ): ಉಪ ಚುನಾವಣೆ ಪ್ರಯುಕ್ತ ನಗರದ ಕ್ರಿಸ್ಟಲ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಕಲ ಮರಾಠಾ ಸಮಾಜದ ಸಭೆಗೆ ದಿಢೀರ್ ಬಂದ ಸಂಸದ ಭಗವಂತ ಖೂಬಾ ಹಾಗೂ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಅವರು‌ ತೀವ್ರ ಪ್ರತಿರೋಧ ಎದುರಿಸಬೇಕಾಯಿತು.

ಕಾರ್ಯಕರ್ತರು ಧಿಕ್ಕಾರದ ಜತೆಗೆ ಗೋ ಬ್ಯಾಕ್ ಖೂಬಾ ಎಂದು ಘೋಷಣೆ ಕೂಗಿದ್ದರಿಂದ ಅವರು ಸಭೆಯಿಂದ ಹೊರಗೆ ಹೋಗಬೇಕಾಯಿತು.

ಯಡಿಯೂರಪ್ಪ ಅವರು ಮರಾಠಾ ನಿಗಮ ಸ್ಥಾಪಿಸಿ ಅಧ್ಯಕ್ಷರ ನೇಮಕ ಮಾಡಿಲ್ಲ. ಮುಖ್ಯಮಂತ್ರಿ ಆದರೆ 24 ಗಂಟೆಯಲ್ಲಿ ಸಮಾಜವನ್ನು 2ಎ ಪ್ರವರ್ಗಕ್ಕೆ ಸೇರ್ಪಡೆ ಮಾಡುತ್ತೇನೆ ಎಂದು ಭರವಸೆ ನೀಡಿ ಇದುವರೆಗೆ ಕ್ರಮ ತೆಗೆದುಕೊಂಡಿಲ್ಲ. ಆದ್ದರಿಂದ ನಿಮ್ಮ ಅಗತ್ಯ ನಮಗಿಲ್ಲ ಎಂದು ಯುವಕರು ಆಕ್ರೋಶ ವ್ಯಕ್ತಪಡಿಸಿದರು.

ಸಂಸದರು ಅರ್ಧ ಗಂಟೆಗೂ ಹೆಚ್ಚು ಕಾಲ ತಟಸ್ಥರಾಗಿ ನಿಂತಲ್ಲಿಯೇ ನಿಂತರಾದರೂ ಕಾರ್ಯಕರ್ತರು ವೇದಿಕೆಗೆ ಹೋಗಲು ಬಿಡಲಿಲ್ಲ. ಘೋಷಣೆ ಕೂಗುವುದು, ಚೀರಾಟ ಹೆಚ್ಚಾಯಿತು. ಗದ್ದಲ ಹೆಚ್ಚಾಗಿದ್ದರಿಂದ ಸಮಾಜದ ಕೆಲ ಹಿರಿಯರು ಶಾಂತಿ ಕಾಪಾಡುವ ಸಲುವಾಗಿ ಸಂಸದರು ದಯವಿಟ್ಟು ಸಭೆಯಿಂದ ಹೊರ ಹೋಗಬೇಕು ಎಂದು ವಿನಂತಿಸಿದರು.

ಬಿಜೆಪಿ ಅಭ್ಯರ್ಥಿ ಶರಣು ಸಲಗರ ಅವರು ಕುರ್ಚಿ ಮೇಲೆ ನಿಂತು ಎಲ್ಲರಿಗೂ ನಮಸ್ಕರಿಸಿ ಸಭಾಭವನದಿಂದ ನಿರ್ಗಮಿಸಿದರು.

ಎನ್.ಸಿ.ಪಿಯಿಂದ ಸ್ಪರ್ಧಿಸಿರುವ ಮಾಜಿ ಶಾಸಕ ಎಂ.ಜಿ.ಮುಳೆ, ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅನಿಲ ಭೂಸಾರೆ, ಪದ್ಮಾಕರ ಪಾಟೀಲ, ಬಾಬುರಾವ್ ಕಾರಬಾರಿ, ಕರ್ನಾಟಕ ಕ್ಷತ್ರೀ ಯ ಮರಾಠಾ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ದಿಗಂಬರರಾವ್ ಮಾನಕರಿ, ವಕೀಲ ನಾರಾಯಣ ಗಣೇಶ ಮೊದಲಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT