ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದ ವಿವಿಧೆಡೆ ವಿದ್ಯುತ್‌ ಕಡಿತ ನಿಲ್ಲಿಸಿ

Last Updated 3 ಮಾರ್ಚ್ 2022, 4:55 IST
ಅಕ್ಷರ ಗಾತ್ರ

ಬೀದರ್‌: ವಿದ್ಯಾನಗರ, ಮೈಲೂರ್‌ ಕ್ರಾಸ್‌, ಬೊಮ್ಮಗೊಂಡೇಶ್ವರ ವೃತ್ತ ಹಾಗೂ ಬ್ರಹ್ಮನಗರದಲ್ಲಿ ಮುನ್ಸೂಚನೆ ನೀಡದೇ ವಿದ್ಯುತ್‌ ಪೂರೈಕೆ ಸ್ಥಗಿತಗೊಳಿಸುವುದು ಹೆಚ್ಚುತ್ತಿರುವ ಕಾರಣ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗಿದೆ. ಸಂಜೆ ವೇಳೆಗೆ ವಿದ್ಯುತ್‌ ಕೈಗೊಡುತ್ತಿರುವುದು ಇನ್ನೂ ಹೆಚ್ಚು ಸಮಸ್ಯೆಯಾಗುತ್ತಿದೆ.

ಹೋಟೆಲ್‌, ಎಲೆಕ್ಟ್ರಾನಿಕ್‌ ಉಪಕರಣಗಳ ದುರಸ್ತಿ ಅಂಗಡಿಗಳು, ಪಾನೀಯ ಅಂಗಡಿಗಳು, ಸೈಬರ್‌ ಕೆಫೆಗಳು ತೊಂದರೆ ಅನುಭವಿಸುತ್ತವೆ. ವಿದ್ಯುತ್‌ ಕಡಿತಗೊಳಿಸಿದ ತಕ್ಷಣ ಜೆಸ್ಕಾಂ ಕಚೇರಿಯಲ್ಲಿ ಸಹಾಯವಾಣಿ ರಿಸಿವರ್‌ ತೆಗೆದು ಇಡಲಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಗ್ರಾಹಕರ ಮೊಬೈಲ್‌ ಕರೆಗಳನ್ನು ಸ್ವೀಕರಿಸುತ್ತಿಲ್ಲ.

ಜೆಸ್ಕಾಂ ಅಧಿಕಾರಿಗಳು ಕಾಟಾಚಾರಕ್ಕೆ ನಡೆಸುತ್ತಿರುವ ಕುಂದುಕೊರತೆಗಳ ಪರಿಶೀಲನಾ ಸಭೆಯಿಂದ ಯಾವ ಪ್ರಯೋಜನವೂ ಆಗುತ್ತಿಲ್ಲ. ನೇರವಾಗಿ ಒಂಬುಡ್ಸ್‌ಮನ್‌ ಕಚೇರಿಗಳಿಂದಲೇ ಸಭೆ ನಡೆಸುವಂತಾಗಬೇಕು. ತಾಂತ್ರಿಕ ಕಾರಣಗಳಿಂದ ವಿದ್ಯುತ್‌ ಸ್ಥಗಿತಗೊಂಡಾಗ ತ್ವರಿತ ದುರಸ್ತಿ ಕಾರ್ಯ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು.

ಸಂಗಮೇಶ ನಾಸಿಗಾರ, ಸಂತೋಷ, ನಾಗೇಶ ಮತ್ತು ಗೌರೀಶ್, ನಗರ ನಿವಾಸಿಗಳು

ಚರಂಡಿ ವ್ಯವಸ್ಥೆ ಕಲ್ಪಿಸಿ

ಬಸವಕಲ್ಯಾಣ: ನಗರದ ಧರ್ಮಪ್ರಕಾಶ ಓಣಿಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ರಸ್ತೆ ಮೇಲೆ ಕೊಳಚೆ ನೀರು ಹರಿದಾಡುತ್ತಿದ್ದು, ಪಾದಚಾರಿಗಳಿಗೆ ಸಂಕಷ್ಟತಂದೊಡ್ಡಿದೆ.

ಓಣಿಯ ಕೆಲ ಭಾಗದಲ್ಲಿ ಚರಂಡಿಯೇ ಇಲ್ಲ. ಕೆಲವೆಡೆ ಇದ್ದರೂ ಕಾಮಗಾರಿ ಸರಿಯಾಗಿ ನಡೆಯದೆ ಕೆಲ ದಿನಗಳಲ್ಲಿಯೇ ಹಾಳಾಗಿದೆ. ಇದರಿಂದ ಎಲ್ಲೆಂದರಲ್ಲಿ ಮನೆ ಬಳಕೆಯ ನೀರು ಸಂಗ್ರಹ ಆಗುತ್ತಿದೆ. ಇದರಿಂದ ದುರ್ನಾತ ಹಬ್ಬುತ್ತಿದ್ದು ಸೊಳ್ಳೆ, ನೊಣಗಳ ಕಾಟ ಹೆಚ್ಚಾಗಿ ಸ್ಥಳೀಯರಲ್ಲಿ ರೋಗಗಳ ಭೀತಿ ಆವರಿಸಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು.

ಧನರಾಜ ರಾಜೋಳೆ, ನಿವಾಸಿ

ಕುಡಿವ ನೀರಿನ ಕಾಮಗಾರಿಗೆ ಚಾಲನೆ

ತೋಗಲೂರು(ಹುಲಸೂರ): ತಾಲ್ಲೂಕಿನ ತೋಗಲೂರ ಗ್ರಾಮದಲ್ಲಿ ಹಲವು ದಿನಗಳಿಂದ ಚರಂಡಿ ಇಲ್ಲದೆ ರಸ್ತೆಯ ಮೇಲೆಯೇ ಕೊಳಚೆ ನೀರು ಹರಿದಾಡುತ್ತಿದೆ.

ಬಳಕೆಯ ನೀರು ಅಲ್ಲಲ್ಲಿನ ತಗ್ಗು ಪ್ರದೇಶದಲ್ಲಿ ನಿಂತು ಗಬ್ಬು ವಾಸನೆ ಬರುತ್ತಿದೆ. ಸುತ್ತಲಿನ ನಿವಾಸಿಗಳು ಅನಿವಾರ್ಯವಾಗಿ ವಾಸನೆ ಸಹಿಸಿಕೊಂಡು, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಕೊಳಚೆ ನೀರಿನ ಪ್ರದೇಶಗಳು ಸೊಳ್ಳೆ ಉತ್ಪತ್ತಿಯ ತಾಣವಾಗಿವೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಬದಿಗಳಲ್ಲಿ ಚರಂಡಿ ನಿರ್ಮಾಣ ಮಾಡಿ ಕೊಳಚೆ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಮಾಡಬೇಕು.

ನಿವಾಸಿಗಳು

ನೀರಿನ ವ್ಯರ್ಥ ಸೋರಿಕೆ ತಡೆಯಿರಿ

ಖಟಕಚಿಂಚೋಳಿ: ಸಮೀಪದ ದಾಡಗಿ ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕರ್‌ಗೆ ಅಳವಡಿಸಿದ ಕೊಳವೆಯಲ್ಲಿ ಬಿರುಕು ಬಿಟ್ಟಿದ್ದು, ಕಳೆದ 3 ದಿನಗಳಿಂದ ಸೋರಿಕೆ ಆಗುತ್ತಿದೆ. ನಿತ್ಯ ನೂತ್ಯ ನೂರಾರು ಲೀಟರ್ ನೀರು ರಸ್ತೆಯ ಮೇಲೆ ಹರಿದು ವ್ಯರ್ಥವಾಗುತ್ತದೆ. ಪಂಚಾಯಿತಿ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಒಡೆದು ಹೋದ ಪೈಪ್ ದುರಸ್ತಿಗೊಳಿಸಬೇಕು.

ಭದ್ರು ಭವರಾ, ಗ್ರಾಮಸ್ಥ

ನಿರ್ಣಾ; ಚರಂಡಿ ಸ್ವಚ್ಛಗೊಳಿಸಿ

ಚಿಟಗುಪ್ಪ: ತಾಲ್ಲೂಕಿನ ನಿರ್ಣಾ ಗ್ರಾಮದಲ್ಲಿನ 3ನೇ ವಾರ್ಡ್‌ ವ್ಯಾಪ್ತಿಯ ಓಣಿಗಳಲ್ಲಿನ ರಸ್ತೆ ಬದಿಯ ಚರಂಡಿಗಳು ಹಲವು ತಿಂಗಳಿನಿಂದ ತುಂಬಿ ಹರಿಯುತ್ತಿದ್ದರೂ ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನಹರಿಸುತ್ತಿಲ್ಲ.

ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಸ್ಥಳೀಯರು ಸಂಚರಿಸಲು ಕಷ್ಟವಾಗುತ್ತಿದೆ. ಮನೆಗಳಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಸಂಬಂಧಿಸಿದ ಅಧಿಕಾರಿಗಳು ಚರಂಡಿಗಳ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು.

ಸೂರ್ಯಕಾಂತ, ನಿರ್ಣಾ ನಿವಾಸಿ

ಹಂದಿಗಳ ಕಾಟ ತಪ್ಪಿಸಿ

ಭಾಲ್ಕಿ: ತಾಲ್ಲೂಕಿನ ಜೊಳದಾಪಾಕಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಹಿಂಬದಿ ಸೇರಿದಂತೆ ಗ್ರಾಮದ ತಿಪ್ಪೆಗುಂಡಿ, ಚರಂಡಿ ಒಳಗೊಂಡಂತೆ ವಿವಿಧೆಡೆ ಹಂದಿಗಳ ಉಪಟಳ ಹೆಚ್ಚಾಗಿದೆ. ಇದರಿಂದ ಸ್ಥಳೀಯರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.

ಸಂಬಂಧಪಟ್ಟ ಜನಪ್ರತಿನಿಧಿ, ಅಧಿಕಾರಿಗಳು ಗ್ರಾಮದ ಎಲ್ಲೆಡೆ ಬ್ಲಿಚಿಂಗ್‌ ಪೌಡರ್‌ ಸಿಂಪಡಿಸಿ, ಹಂದಿಗಳನ್ನು ಸೆರೆ ಹಿಡಿಯಲು ಕ್ರಮಕೈಗೊಳ್ಳಬೇಕು. ಗ್ರಾಮ ವಾಸಿಗಳಿಗೆ ನೆಮ್ಮದಿಯಿಂದ ಬದುಕಲು ಅನುಕೂಲ ಕಲ್ಪಿಸಿಕೊಡಬೇಕು.

ಗ್ರಾಮ ನಿವಾಸಿಗಳು, ಜೊಳದಾಪಕಾ

ಕಸ ವಿಲೇವಾರಿ ಮಾಡಿ

ಹುಮನಾಬಾದ್: ಪಟ್ಟಣದ ಕೆ.ಬಿ. ಕಚೇರಿ ಮುಂಭಾಗದ ರಸ್ತೆಯ ಬದಿಯಲ್ಲಿ ಹಲವು ದಿನಗಳಿಂದ ಪ್ಲಾಸ್ಟಿಕ್ ತ್ಯಾಜ್ಯ ಬಿದ್ದಿದೆ. ನಿತ್ಯ ನೂರಾರು ಜನರು ಓಡಾಡುವ ರಸ್ತೆ ಇದಾಗಿದೆ. ಪುರಸಭೆಯಿಂದ ನಿತ್ಯ ಕಸ ವಿಲೇವಾರಿ ಆಗುತ್ತಿಲ್ಲ. ಸ್ವಲ್ಪವೇ ಗಾಳಿ ಬೀಸಿದರು ಪ್ಲಾಸ್ಟಿಕ್ ತ್ಯಾಜ್ಯವೆಲ್ಲ ರಸ್ತೆಯಲ್ಲ ಹರಿದಾಡುತ್ತದೆ. ಕೂಡಲೇ ಪಟ್ಟಣದ ಅಧಿಕಾರಿಗಳು ಇತ್ತ ಗಮನಹರಿಸಿ ತ್ಯಾಜ್ಯ ನಿತ್ಯ ತ್ಯಾಜ್ಯ ವಿಲೇವಾರಿಗೆ ಕ್ರಮ ತೆಗೆದುಕೊಳ್ಳಬೇಕು.

ಆಕಾಶ್, ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT