ಮಂಗಳವಾರ, ಜೂನ್ 2, 2020
27 °C

ಭಾಲ್ಕಿ: ವಸತಿ ಯೋಜನೆಗಳಲ್ಲಿ ಅಕ್ರಮ, ಶಾಸಕ ಈಶ್ವರ ಖಂಡ್ರೆಗೆ ಡಿಸಿ ನೋಟಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಭಾಲ್ಕಿ ತಾಲ್ಲೂಕಿನಲ್ಲಿ 2015 ರಿಂದ 2019ರ ವರೆಗೆ ವಿವಿಧ ವಸತಿ ಯೋಜನೆಗಳಡಿ ನಡೆದ ಅಕ್ರಮಗಳಿಗೆ ಸಂಬಂಧಿಸಿದಂತೆ ಒಂದು ವಾರದೊಳಗೆ ಸ್ಪಷ್ಟೀಕರಣ ನೀಡುವಂತೆ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಅವರಿಗೆ ಜಿಲ್ಲಾಧಿಕಾರಿ ಎಚ್‌.ಆರ್‌.ಮಹಾದೇವ ನೋಟಿಸ್‌ ನೀಡಿದ್ದಾರೆ.

ಮನೆ ಹಂಚಿಕೆಯಲ್ಲಿ ನಿಮ್ಮ (ಖಂಡ್ರೆ) ಆಪ್ತ ಸಹಾಯಕ ಹಾಗೂ ಕಚೇರಿ ಸಿಬ್ಬಂದಿಯ ಹಸ್ತಕ್ಷೇಪ ಇರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಒಂದೇ ಕಂತಿನಲ್ಲಿ ದುರುಪಯೋಗವಾದ ಹಣ ವಸೂಲಿ ಮಾಡಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರಾಜೀವ್‌ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ ಎಂದು ಮೇ 18 ರಂದು ನೀಡಿರುವ ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ.

ಫಲಾನುಭವಿಗಳ ಆ‌ಯ್ಕೆ ಮಾಡಿ ನೀವೇ ಮನೆ ಹಂಚಿಕೆ ಮಂಜೂರಾತಿ ಪತ್ರ, ಕಾಮಗಾರಿ ಆದೇಶ ನೀಡಿರುವುದು ಲೆಟರ್‌ಹೆಡ್‌ನಿಂದಾಗಿ ಸ್ಪಷ್ಟವಾಗಿದೆ. ನಿಯಮಾನುಸಾರ ಮನೆ ಮಂಜೂರಾತಿ ಆದೇಶಪತ್ರವನ್ನು ಭಾಲ್ಕಿ ಪುರಸಭೆ ಮುಖ್ಯಾಧಿಕಾರಿ ಹಾಗೂ ಪಿಡಿಒಗಳು ನೀಡಬೇಕು. ಆದರೆ ಎಲ್ಲವೂ ರಾಜಕೀಯ ಒತ್ತಡದಿಂದ ಆಗಿದೆ ಎಂದು ಹೇಳಿದ್ದಾರೆ. ಯಾವ ಕಾನೂನಿನ ಅಡಿ ನಿಮ್ಮ ಭಾವಚಿತ್ರವಿರುವ ಲೆಟರ್‌ ಹೆಡ್‌ ಮೇಲೆ ಫಲಾನುಭವಿಗಳಿಗೆ ಮನೆ ಮಂಜೂರಾತಿ ಪತ್ರ ನೀಡಿದ್ದೀರಿ ಎನ್ನುವುದರ ಕುರಿತು ಸ್ಪಷ್ಟೀಕರಣ ನೀಡಬೇಕು ಎಂದು ಸೂಚಿಸಿದ್ದಾರೆ.

ತಮ್ಮ (ಶಾಸಕರ) ಆಪ್ತ ಸಹಾಯಕ ಖಾಸಗಿ ಮೊಬೈಲ್‌ ಬಳಸಿ ಜೆಪಿಎಸ್ ಅಳವಡಿಕೆ ಮನೆ ಮಂಜೂರಾತಿ ಹಾಗೂ ಕಾಮಗಾರಿ ಆದೇಶ ಪತ್ರ ಕೊಟ್ಟಿದ್ದಾರೆಂದು ಪುರಸಭೆಯ ಜ್ಯೂನಿಯರ್ ಪ್ರೋಗ್ರಾಮರ್ ಬಸವೇಶ್ವರ ತಿಳಿಸಿದ್ದಾರೆ ಎಂದು ನೋಟಿಸ್‌ನಲ್ಲಿ ವಿವರಿಸಿದ್ದಾರೆ.

ರಾಜೀವ್‌ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಬಿಜೆಪಿ ಕಬ್ಬು ಬೆಳೆಗಾರರ ಪ್ರಕೋಷ್ಟದ ರಾಜ್ಯ ಸಂಚಾಲಕ ಡಿ.ಕೆ.ಸಿದ್ರಾಮ ಅವರು ಮಾಡಿರುವ ಆರೋಪವನ್ನು ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.