ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ ಜಿಲ್ಲೆ ಸಂಪೂರ್ಣ ಸ್ತಬ್ಧ

ಮನೆಗಳಿಂದ ಹೊರ ಬರದ ಜನ, ತೆರೆಯದ ಅಂಗಡಿಗಳು
Last Updated 24 ಮೇ 2020, 15:46 IST
ಅಕ್ಷರ ಗಾತ್ರ

ಬೀದರ್: ಕೋವಿಡ್ 19 ಸೋಂಕು ಹರಡುವಿಕೆಯನ್ನು ತಡೆಯಲು ರಾಜ್ಯ ಸರ್ಕಾರ ಘೋಷಿಸಿದ ಭಾನುವಾರದ ಲಾಕ್ ಡೌನ್‌ಗೆ ಬೀದರ್‌ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ನಗರದ ಉದಗಿರ ರಸ್ತೆ, ಡಾ.ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಭಗತ್‌ಸಿಂಗ್ ವೃತ್ತ, ಹರಳಯ್ಯ ವೃತ್ತ, ಮೈಲೂರು ಕ್ರಾಸ್, ಚಿದ್ರಿ ರಸ್ತೆ, ಗಾಂಧಿ ಗಂಜ್‌ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳು ನಿರ್ಜನವಾಗಿದ್ದವು.

ಕೇಂದ್ರ ಬಸ್‌ ನಿಲ್ದಾಣ, ನಗರ ಸಾರಿಗೆ ಬಸ್‌ ನಿಲ್ದಾಣ ಹಾಗೂ ಗ್ರಾಮೀಣ ನಿಲ್ದಾಣಗಳು ಪ್ರಯಾಣಿಕರಿಲ್ಲದೆ ಬಿಕೊ ಎನ್ನುತ್ತಿದ್ದವು. ಜನರು ಸ್ವ ಇಚ್ಚೆಯಿಂದ ಮನೆಯಲ್ಲೇ ಉಳಿದ ಕಾರಣ ನಗರದ ಪ್ರಮುಖ ರಸ್ತೆಗಳು ಬಿಕೊ ಎನ್ನುತ್ತಿದ್ದವು.

ಶನಿವಾರ ಸಂಜೆ ಬೆಂಗಳೂರಿಗೆ ತೆರಳಿದ ಬಸ್‌ಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ರಸ್ತೆ ಸಾರಿಗೆ ಸಂಸ್ಥೆಯ ಉಳಿದ ಬಸ್‌ಗಳು ಶನಿವಾರ
ರಾತ್ರಿಯೇ ಜಿಲ್ಲೆಯ ಆಯಾ ಡಿಪೊಗಳಿಗೆ ಸೇರಿದ್ದವು. ಭಾನುವಾರ ಯಾವುದೇ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಆಟೊರಿಕ್ಷಾ, ಕಾರು, ಕ್ರೂಸರ್‌ ಹಾಗೂ ಜೀಪ್‌ಗಳ ಓಡಾಟ ಕಂಡು ಬರಲಿಲ್ಲ.‌

ಶನಿವಾರ ರಾತ್ರಿ ಬೆಂಗಳೂರಿನಿಂದ ಹೊರಟು ಬೆಳಗಿನ ಜಾವ ಬೀದರ್‌ಗೆ ಬಂದ ಪ್ರಯಾಣಿಕರು ತಮ್ಮ ಸಂಬಂಧಿಗಳನ್ನು ಸಂಪರ್ಕಿಸಿ ದ್ವಿಚಕ್ರವಾಹನಗಳಲ್ಲಿ ಮನೆಗಳಿಗೆ ತೆರಳಿದರು.
ಕೆಲ ರೈತರು ಹಾಗೂ ವ್ಯಾಪಾರಿಗಳು ತರಕಾರಿ ಮಾರಾಟ ಮಾಡಲು ಬೆಳಿಗ್ಗೆ 6 ಗಂಟೆಯ ವೇಳಗೆ ಬರೀದ್‌ಶಾಹಿ ಉದ್ಯಾನ ಮುಂಭಾಗದ ಮೈದಾನಕ್ಕೆ ಬಂದಿದ್ದರು. 8 ಗಂಟೆಯಾದರೂ ಗ್ರಾಹಕರು ಬಾರದಿದ್ದಾಗ ವಾಹನಗಳಲ್ಲಿ ತರಕಾರಿ ತುಂಬಿಕೊಂಡು ತಮ್ಮ ಮನೆಗಳಿಗೆ ತೆರಳಿದರು.

ನಗರದಲ್ಲಿ ಮೆಡಿಕಲ್‌ ಸ್ಟೋರ್‌ಗಳು ಮಾತ್ರ ತೆರೆದುಕೊಂಡಿದ್ದವು. ಖಾಸಗಿ ಆಸ್ಪತ್ರೆಗಳು ತೆರೆದುಕೊಂಡಿದ್ದರೂ ಚಿಕಿತ್ಸೆ ಪಡೆಯಲು ಬಂದ ರೋಗಿಗಳ ಸಂಖ್ಯೆ ವಿರಳವಾಗಿತ್ತು.

ಹೋಟೆಲ್‌, ಖಾನಾವಳಿ, ಕಿರಾಣಿ ಹಾಗೂ ತರಕಾರಿ ಅಂಗಡಿಗಳು ಸೇರಿದಂತೆ ಎಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ‌ಕೆಲ ಆಸ್ಪತ್ರೆಗಳು ಬಾಗಿಲು ಮುಚ್ಚಿದ್ದರಿಂದ ಕ್ಷ ಕಿರಣ, ಸ್ಕ್ಯಾನಿಂಗ್ ಹಾಗೂ ರಕ್ತ ತಪಾಸಣೆ ಕೇಂದ್ರಗಳು ಸಹ ಬಂದ್‌ ಆಗಿದ್ದವು.

ಬರೀದ್‌ಶಾಹಿ ವೃತ್ತ, ಅಂಬೇಡ್ಕರ್‌ ವೃತ್ತ, ಬಸವೇಶ್ವರ ವೃತ್ತಗಳಲ್ಲಿ ಪೊಲೀಸ್‌ ಬಂದೋಬಸ್ತ್‌ ಬಿಗಿಗೊಳಿಸಲಾಗಿತ್ತು. ನಗರದಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ದ್ವಿಚಕ್ರವಾಹನ ಸವಾರರನ್ನು ತಡೆದು ದಾಖಲೆಗಳನ್ನು ಪರಿಶೀಲಿಸಿದರು. ಹೆಲ್ಮೆಟ್‌ ಹಾಕಿಕೊಳ್ಳದ ಸವಾರರಿಗೂ ಅಧಿಕ ಮೊತ್ತದ ದಂಡ ವಿಧಿಸಿ ಬಿಸಿ ಮುಟ್ಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT