ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಕೃತಿಗಳ ನಿರಂತರ ಓದು ಕಾವ್ಯ ರಚನೆಗೆ ಪ್ರೇರಕ: ಸಾಹಿತಿ ಶಶಿಕಲಾ ವಸ್ತ್ರದ

Last Updated 2 ಮಾರ್ಚ್ 2020, 9:30 IST
ಅಕ್ಷರ ಗಾತ್ರ

ಬೀದರ್‌: ‘ನಿರಂತರ ಓದು ಕಾವ್ಯ ರಚನೆಗೆ ಪ್ರೇರಕ ಶಕ್ತಿಯಾಗುತ್ತದೆ. ಮಹಿಳೆಯರು ಬಿಡುವಿಲ್ಲದ ಕೆಲಸದ ಮಧ್ಯೆಯೂ ಒಂದಿಷ್ಟು ಸಮಯ ಮೀಸಲಿಟ್ಟು ಒಳ್ಳೆಯ ಕೃತಿಗಳನ್ನು ಓದುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು’ ಎಂದು ಹಿರಿಯ ಸಾಹಿತಿ ಶಶಿಕಲಾ ವಸ್ತ್ರದ ಸಲಹೆ ನೀಡಿದರು.

ಇಲ್ಲಿಯ ಡಾ.ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗ ಮಂದಿರದಲ್ಲಿ ಭಾನುವಾರ 18ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಮಹಿಳಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಭಾಷೆ, ಸಂಸ್ಕೃತಿ ಹಾಗೂ ಸಾಹಿತ್ಯ ಒಂದಕ್ಕೊಂದು ಬೆಸೆದುಕೊಂಡಿವೆ. ಬಹಳಷ್ಟು ಜನ ನನಗೆ ಓದಲು ಸಮಯವೇ ಇಲ್ಲವೆಂದು ನೆಪ ಹೇಳುತ್ತಾರೆ. ಮಹಿಳೆಯರು ಮೊಬೈಲ್‌ ಹಾಗೂ ಟಿವಿ ವೀಕ್ಷಣೆಯನ್ನು ಕಡಿಮೆ ಮಾಡಿದರೆ ಸಮಯದ ಸದ್ಬಳಕೆ ಸಾಧ್ಯ’ ಎಂದು ಹೇಳಿದರು.

‘ಮಹಿಳೆಯರು ಮನೆಗಳ ಶೋಕೇಸ್‌ಗಳಲ್ಲಿ ಗೊಂಬೆಗಳನ್ನು ಇಡುವ ಬದಲು ಪುಸ್ತಕಗಳನ್ನಿಡಬೇಕು. ಇದರಿಂದ ಆ ಪುಸ್ತಕಗಳ ಬಗೆಗೆ ಮಕ್ಕಳಿಗೂ ತಿಳುವಳಿಕೆ ನೀಡಲು ಸಾಧ್ಯವಾಗುತ್ತದೆ. ಮಕ್ಕಳು ಸಹಜವಾಗಿ ಓದಲು ಶುರುಮಾಡುತ್ತಾರೆ’ ಎಂದು ತಿಳಿಸಿದರು.

‘ಮಹಿಳೆಯರು ಬರೆಯುವುದೇ ತಪ್ಪು ಎನ್ನುವ ವಾತಾವರಣದಲ್ಲಿ ಸೋಫಿಯಾ ಅವರು ಸಾವಿರಾರು ಕವನಗಳನ್ನು ಬರೆದಿದ್ದರು. ಅವಳ ನಿಧನದ ನಂತರ ಎಲ್ಲ ಕವನಗಳನ್ನು ಶವಪೆಟ್ಟಿಯೊಳಗೆ ಇಟ್ಟು ಮಣ್ಣು ಮಾಡಲಾಯಿತು. ಜರ್ಮನಿಯ ಹಿಟ್ಲರ್‌ನ ದುರಾಡಳಿತದ ವಿರುದ್ಧ ಆ್ಯನಾ ಅನೇಕ ಕವಿತೆಗಳನ್ನು ಬರೆದಿದ್ದರು. 100 ವರ್ಷಗಳ ನಂತರ ಅವಳ ಪ್ರತಿಭೆಯನ್ನು ಗುರುತಿಸಿದ ಅಲ್ಲಿನ ಸರ್ಕಾರ ಒಂದು ಗ್ರಹಕ್ಕೆ ಆ್ಯನಾ ಅವರ ಹೆಸರಿಟ್ಟಿತು’ ಎಂದು ಹೇಳಿದರು.

‘ಬೆಂಗಳೂರಲ್ಲಿ ಮಹಿಳೆಯರಿಗೆ ಪ್ರತ್ಯೇಕ ಮಹಿಳಾ ಗೋಷ್ಠಿ ಆಯೋಜಿಸಿದ್ದರೆ ಸಮಾನತೆಯ ವಿರೋಧಿ ಎಂದೇ ಟೀಕಿಸಲಾಗುತ್ತಿತ್ತು. ಆದರೆ, ಕಲ್ಯಾಣ ನಾಡಿನಲ್ಲಿ ಇಂತಹ ಕವಿಗೋಷ್ಠಿ ಆಯೋಜಿಸಿರುವುದು ಸಂತಸ ತಂದಿದೆ. ಕಾರಣ ಮಹಿಳಾ ಸಂವೇದನೆಗಳನ್ನು ಸೂಕ್ಷ್ಮವಾಗಿ ಅರಿತುಕೊಳ್ಳಲು ಸಾಧ್ಯವಾಗಿದೆ. ಅನೇಕ ಜನ ಕವಯತ್ರಿಯರು ಕವನ ವಾಚಿಸಿದರು. ಒಂದು ಕವಿತೆಯೂ ಪುನರಾವರ್ತನೆಯಾಗುವ ರೀತಿಯಲ್ಲಿ ಇರಲಿಲ್ಲ’ ಎಂದರು.

‘ಕಾವ್ಯ ರಚಿಸಿದ ಮಹಿಳೆಗೂ ಕವಿ ಎನ್ನಬೇಕು. ಕವಯತ್ರಿ ಎನ್ನುವುದು ಸೂಕ್ತವಲ್ಲ. ಕವನ ಬರೆಯುವವರನ್ನೂ ಸಮಾನತೆಯಿಂದ ಕಾಣಬೇಕು. ಬದುಕಿನಲ್ಲಿ ಗಂಡು ಹಾಗೂ ಹೆಣ್ಣು ಅರ್ಧನಾರೀಶ್ವರರು. ಇಲ್ಲಿ ದಾಂಪತ್ಯಗೀತೆ ಸುಖಿಗೀತೆ ಆಗಬೇಕು’ ಎಂದು ನುಡಿದರು.

ಆಶಯ ಭಾಷಣ ಮಾಡಿದ ಸಾಹಿತಿ ರತ್ನಸಾಹಿತ್ಯ ಚರಗ, ‘ವಚನ ಸಾಹಿತ್ಯ ಇರುವ ಮನ್ನಣೆ ಬೇರೆ ಯಾವ ಸಾಹಿತ್ಯಕ್ಕೂ ಇಲ್ಲ. ವಚನಗಳಲ್ಲಿ ಬದುಕಿನ ರೂಪರೇಷೆಗಳನ್ನು ತಿಳಿಸುವ ಮೌಲಿಕ ಅಂಶಗಳಿವೆ’ ಎಂದರು.

‘ಇಂದು ಮಾನವೀಯ ಹಾಗೂ ಸಾಮಾಜಿಕ ಮೌಲ್ಯಗಳು ನಶಿಸಿ ಹೋಗುತ್ತಿವೆ. ಇಂದಿನ ಪೀಳಿಗೆಗೆ ಸಾಹಿತ್ಯದ ಮೂಲಕ ಒಳ್ಳೆಯ ನೀತಿಗಳನ್ನು ಹೇಳಿಕೊಡಬೇಕಿದೆ’ ಎಂದು ತಿಳಿಸಿದರು.

ಸಮ್ಮೇಳನದ ಸರ್ವಾಧ್ಯಕ್ಷ ಸೋಮನಾಥ ಯಾಳವಾರ, ಮಲ್ಲಮ್ಮ ಸಂತಾಜಿ, ಶಾಂತಮ್ಮ ಬಲ್ಲೂರ, ಅರುಣಾ ಸುಲ್ತಾನಪೂರೆ, ಜಗದೇವಿ ದುಬಲಗುಂಡಿ, ಭಾರತಿ ವಸ್ತ್ರದ, ಕರುಣಾ ಸಲಗರ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಇದ್ದರು.ಪಾರ್ವತಿ ಸೋನಾರೆ ಸ್ವಾಗತಿಸಿದರು. ಶ್ರೀದೇವಿ ಹೂಗಾರ ನಿರೂಪಿಸಿದರು. ರಾಜಮ್ಮ ಚಿಕ್ಕಪೇಟ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT