ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ನಿರ್ಗತಿಕರ ಹಸಿವಿನ ದಾಹ ತೀರಿಸುತ್ತಿದೆ ಗುರುದ್ವಾರ

ಸಾಮಾಜಿಕ ಅಂತರ ಕಾಯ್ದುಕೊಂಡು ಬಡವರಿಗೆ ಸೇವೆ
Last Updated 1 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಬೀದರ್‌: ಕೋವಿಡ್‌–9 ಸೋಂಕು ಜಗತ್ತನ್ನೇ ತಲ್ಲಣಗೊಳಿಸಿದೆ. ಜಿಲ್ಲಾ ಆಡಳಿತ ಸೋಂಕು ಹರಡುವಿಕೆ ತಡೆಯುವ ಉದ್ದೇಶದಿಂದ ನಗರದ ಎಲ್ಲ ಹೋಟೆಲ್‌ಗಳನ್ನು ಬಂದ್‌ ಮಾಡಿಸಿದೆ. ನಿರ್ಗತಿಕರು ಭಿಕ್ಷೆ ಬೇಡಿ ಹಸಿವು ನೀಗಿಸಿಕೊಳ್ಳಬೇಕೆಂದರೂ ರೈಲು ಹಾಗೂ ಬಸ್‌ ನಿಲ್ದಾಣಗಳಲ್ಲಿ ಒಬ್ಬರೂ ಇಲ್ಲ. ಅಂತಹದ್ದರಲ್ಲಿ ಅನ್ನಕ್ಕಾಗಿ ಅಲೆದಾಡುತ್ತಿರುವ ನಿರ್ಗತಿಕರಿಗೆ ಇಲ್ಲಿಯ ಗುರುದ್ವಾರ ಅನ್ನದಾಸೋಹ ಮಾಡುತ್ತಿದೆ. ತನ್ನ ದಾಸೋಹ ಸೇವೆಯನ್ನು ಯಥಾವತ್ತಾಗಿ ಮುಂದುವರಿಸಿದೆ.

ಗುರುದ್ವಾರಕ್ಕೆ 20 ದಿನಗಳಿಂದ ಯಾತ್ರಿಗಳು ಬರುವುದನ್ನು ನಿಲ್ಲಿಸಿದ್ದಾರೆ. ಗುರುದ್ವಾರದಿಂದ ಯಾರೂ ಹೊರಗೆ ಹೋಗುತ್ತಿಲ್ಲ. ಕೆಲ ಕರ ಸೇವಕರು ಮಾತ್ರ ಪೂಜೆ ಪುನಸ್ಕಾರಗಳನ್ನು ಮಂದುವರಿಸಿದ್ದಾರೆ. ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಆದರೆ, ಯಾರೊಬ್ಬರೂ ಹಸಿವಿನ ಬೆಂಕಿಯಲ್ಲಿ ಬೆಂದು ಹೋಗದಿರಲಿ ಎನ್ನುವ ಕಾರಣಕ್ಕೆ ಅನ್ನಪ್ರಸಾದ ದಾಸೋಹ ಮಾಡಲಾಗುತ್ತಿದೆ.

ನಗರದಲ್ಲಿ ವಾಸವಾಗಿರುವ ಎಲ್ಲ ನಿರ್ಗತಿಕರು, ಭಿಕ್ಷಕರು ಹಾಗೂ ಕಡು ಬಡವರು ಲಂಗರ್‌ನಲ್ಲಿ ಬಂದು ಊಟ ಮಾಡಿ ಹೊಟ್ಟೆಯನ್ನು ತಣಿಸಿಕೊಳ್ಳುತ್ತಿದ್ದಾರೆ. ಪಂಕ್ತಿ ಭೋಜನಕ್ಕೆ ಅವಕಾಶ ನೀಡಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಂಡು ಕನಿಷ್ಠ ಒಂದು ಮೀಟರ್‌ ಅಂತರದಲ್ಲಿ ಊಟಕ್ಕೆ ಕುಳ್ಳಿರಿಸಲಾಗುತ್ತಿದೆ. ಇಲ್ಲಿಗೆ ಬರುವವರು ಮುಖಕ್ಕೆ ಕೈವಸ್ತ್ರ ಕಟ್ಟಿಕೊಂಡು ಬರಬೇಕು. ಲಂಗರ್‌ ಭವನದೊಳಗೆ ಪ್ರವೇಶ ಮಾಡುವ ಮೊದಲು ಸ್ವಚ್ಛವಾಗಿ ಕೈತೊಳೆಯಬೇಕು. ನಂತರವೇ ಅವರಿಗೆ ಊಟ ಬಡಿಸಲಾಗುತ್ತಿದೆ.

ನಿರ್ಗತಿಕರು ಊಟ ಮಾಡಿದ ನಂತರ ಅವರ ಮುಸುರೆ ತಟ್ಟೆಗಳನ್ನು ಗುರುದ್ವಾರದಲ್ಲಿ ವಾಸವಾಗಿರುವ ಕರಸೇವಕರು ಮೂರು ಹಂತಗಳಲ್ಲಿ ಸಾಬೂನಿನಿಂದ ತೊಳೆಯುತ್ತಿದ್ದಾರೆ. ಎಲ್ಲರೂ ಒಮ್ಮಲೇ ಬಂದರೆ ಸಮಸ್ಯೆಯಾಗುತ್ತದೆ. ಹೀಗಾಗಿ ಬೆಳಿಗ್ಗೆಯಿಂದ ರಾತ್ರಿ 8 ಗಂಟೆಯ ವರೆಗೂ ಅನ್ನಪ್ರಸಾದ ವಿತರಿಸಲಾಗುತ್ತಿದೆ.
‘ಲಾಕ್‌ಡೌನ್‌ ಆದೇಶ ಹೊರಡಿಸಿದಾಗಿನಿಂದ ಇಲ್ಲಿಗೆ ಹೊರಗಿನ ಯಾತ್ರಿಗಳು ಬರುವುದು ಸಂಪೂರ್ಣ ನಿಂತಿದೆ. ಗುರುದ್ವಾರದಲ್ಲಿ ಕೆಲಸ ಮಾಡುವವರು ತಮಗಾಗಿ ಅಡುಗೆ ಮಾಡಿಕೊಳ್ಳುತ್ತಾರೆ. ಇದರ ಜತೆಗೆ ಹಸಿದು ಇಲ್ಲಿಗೆ ಬರುವ ನಿರ್ಗತಿಕರು ಹಾಗೂ ಕಡುಬಡವರಿಗೆ ಮಾನವೀಯತೆಯ ನೆಲೆಯಲ್ಲಿ ಊಟ ಕೊಡಲಾಗುತ್ತಿದೆ’ ಎಂದು ಗುರುದ್ವಾರ ಪ್ರಬಂಧಕ ಕಮಿಟಿಯ ಮನಪ್ರೀತ್‌ ಸಿಂಗ್‌ ಹೇಳುತ್ತಾರೆ.

‘ಲಂಗರ್‌ನಲ್ಲಿ ಎಲ್ಲ ಬಗೆಯ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಪ್ರಸ್ತುತ ನಿತ್ಯ ಸರಾಸರಿ 800 ರಿಂದ ಒಂದು ಸಾವಿರ ಜನರು ಊಟ ಮಾಡಿಕೊಂಡು ಹೋಗುತ್ತಿದ್ದಾರೆ’ ಎಂದು ತಿಳಿಸುತ್ತಾರೆ.

ಎರಡು ಮಠಗಳಿಂದ ದಾನ

ಬೀದರ್‌: ಜಿಲ್ಲೆಯಲ್ಲಿ ಅನೇಕ ಮಠಗಳು ಹಾಗೂ ಧಾರ್ಮಿಕ ಸಂಸ್ಥೆಗಳಿದ್ದರೂ ಮನುಕುಲದ ಕಲ್ಯಾಣಕ್ಕೆ ಮನ ಮಿಡಿದು ಎರಡು ಮಠಗಳು ಮಾತ್ರ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿವೆ.

ಜಿಲ್ಲೆಯ ಪ್ರಸಿದ್ಧ ಮಠಗಳಲ್ಲಿ ಒಂದಾದ ಬಸವಕಲ್ಯಾಣ ತಾಲ್ಲೂಕಿನ ಹಾರಕೂಡ ಮಠದ ಡಾ.ಚನ್ನವೀರ ಶಿವಾಚಾರ್ಯರು ₹ 50 ಸಾವಿರ ಹಾಗೂ ಭಾಲ್ಕಿ ತಾಲ್ಲೂಕಿನ ಗೋರಚಿಂಚೋಳಿಯ ಸಿದ್ಧರಾಮೇಶ್ವರ ಮಠದ ಸಿದ್ಧರಾಮೇಶ್ವರ ಪಟ್ಟದ್ದೇವರು ₹ 21 ಸಾವಿರ ದೇಣಿಗೆ ನೀಡಿದ್ದಾರೆ.

ಬೀದರ್‌ ಶಾಸಕ ರಹೀಂ ಖಾನ್‌, ಬಸವಕಲ್ಯಾಣ ಶಾಸಕ ಬಿ. ನಾರಾಯಣರಾವ್‌ ಹಾಗೂ ಹುಮನಾಬಾದ್‌ ಶಾಸಕ ರಾಜಶೇಖರ ಪಾಟೀಲ ಅವರು ಸ್ವಂತ ಖರ್ಚಿನಲ್ಲಿ ಬಡವರಿಗೆ 20 ದಿನಗಳವರೆಗೆ ಬೇಕಾಗುವಷ್ಟು ಆಹಾರ ಸಾಮಗ್ರಿ ವಿತರಿಸಿದ್ದಾರೆ. ಸಂಸದ ಭಗವಂತ ಖೂಬಾ ಅವರು ಲೋಕಸಭಾ ಸದಸ್ಯರ ನಿಧಿಯಿಂದ ಪ್ರಧಾನಮಂತ್ರಿ ಪರಿಹಾರ ನಿಧಿಗೆ ₹ 1 ಕೋಟಿ ಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT