ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರಕಗಳ ಅಂದಕ್ಕೆ ಕುಂದು; ‘ಬೀದರ್‌ ಬ್ರ್ಯಾಂಡ್‌’ಗೆ ಏಟು

Last Updated 1 ಸೆಪ್ಟೆಂಬರ್ 2019, 20:01 IST
ಅಕ್ಷರ ಗಾತ್ರ

ಬೀದರ್‌: ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿನ ಕುರುಹುಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಪುರಾತನ ಊರು ಇಂದು ನಗರಸಭೆಯಿಂದಾಗಿಯೇ ಪ್ರಾಮುಖ್ಯತೆ ಕಳೆದುಕೊಳ್ಳಲು ಆರಂಭಿಸಿದೆ ಎಂಬ ನೋವು ಜನರದ ಜನರನ್ನು ಕಾಡುತ್ತಿದೆ.

ನಗರದಲ್ಲಿರುವ ಐತಿಹಾಸಿಕ ಸ್ಮಾರಕಗಳ ಬಳಿಗೆ ಹೋದರೆ ಸಾಕು ಅವುಗಳ ಅವ್ಯವಸ್ಥೆಗೆ ಕಾರಣ ಯಾರು ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಜಿಲ್ಲಾಧಿಕಾರಿ ನಿವಾಸದ ಕೂಗಳತೆಯಲ್ಲೇ 14ನೇ ಶತಮಾನದಲ್ಲಿ ನಿರ್ಮಿಸಿದ ದೊಡ್ಡದಾದ ಕೋಟೆ ಇದೆ. ಈ ಕೋಟೆ ಮುಂದಿನ ಕಂದಕದಲ್ಲಿ ಇಣುಕಿದರೆ ನಗರಸಭೆ ಹರಿಯ ಬಿಟ್ಟಿರುವ ಕೊಳಚೆ ನೀರು ಹಾಗೂ ತ್ಯಾಜ್ಯ ಹೇಸಿಗೆ ತರಿಸುತ್ತದೆ.

ಪುರಾತನ ನಗರದಲ್ಲಿದ್ದ ಜಮುನಾ ಮೋರಿ ಹಳ್ಳ ದೊಡ್ಡ ನಾಲಾ ಆಗಿ ಗುರುತಿಸಿಕೊಂಡಿದೆ. ಓಲ್ಡ್‌ಸಿಟಿಯ ಮನೆಗಳಿಂದ ಹೊರ ಬರುವ ಕೊಳಚೆ ನೀರು ಹಾಗೂ ಗಟಾರ ನೀರು ಈ ಹಳ್ಳ ಸೇರುತ್ತದೆ.ಅಗ್ನಿಶಾಮಕ ಕಚೇರಿಯಿಂದ ಸ್ವಲ್ಪ ಮುಂದೆ ಸಾಗಿದರೆ ಜಮುನಾ ಮೋರಿಯ ನೀರಿಗೆ ಕೋಟೆ ಮುಂದಿನ ಕಂದಕಕ್ಕೆ ಸಂಪರ್ಕ ಕಲ್ಪಿಸಿರುವುದು ಕಂಡು ಬರುತ್ತದೆ. ಇದರಲ್ಲಿ ಇದೀಗ ಪ್ಲಾಸ್ಟಿಕ್‌ ತ್ಯಾಜ್ಯ ಸೇರಿಕೊಂಡಿದೆ.

ಕಂದಕಕ್ಕೆ ಹರಿದು ಬರುವ ನೀರನ್ನು ಬೇರೆ ಕಡೆಗೆ ಡೈವರ್ಟ್‌ ಮಾಡುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು 15 ವರ್ಷಗಳಿಂದ ಮನವಿ ಮಾಡುತ್ತಿದ್ದಾರೆ. ನಗರಸಭೆ ಇಂದಿಗೂ ಕ್ರಮ ಕೈಗೊಂಡಿಲ್ಲ. ಪ್ರವಾಸಿಗರು ಕೋಟೆಯ ಮೇಲೆ ನಿಂತು ನಗರ ವೀಕ್ಷಣೆ ಮಾಡಿದರೆ ಅವರಿಗೆ ಘನತ್ಯಾಜ್ಯದ ದರ್ಶನವಾಗುತ್ತದೆ.

ಸ್ವರೂಪ ಕೆಡಿಸಿದ್ದೇ ನಗರಸಭೆ: ಬೀದರ್ ಕೋಟೆಯಿಂದ ಅಷ್ಟೂರಿಗೆ ತೆರಳುವ ಮಾರ್ಗದಲ್ಲಿ ದುಲ್ಹನ್‌ ದರ್ವಾಜಾ ಇದೆ. ಇದನ್ನು ವಿರೂಪಗೊಳಿಸಿದ್ದೇ ನಗರಸಭೆ. ಅನೇಕ ವರ್ಷಗಳಿಂದ ಗಟಾರ ನೀರು ಸ್ಮಾರಕದ ಒಳಗಿನಿಂದ ಹರಿದು ಹೋಗುತ್ತಿದ್ದರೂ ಅಲ್ಲಿ ಗಟಾರ ನಿರ್ಮಿಸಿರಲಿಲ್ಲ. ಸಾರ್ವಜನಿಕರ ಒತ್ತಡಕ್ಕೆ ಮಣಿದು ಸ್ಮಾರಕದ ಒಳಗೇ ಗಟಾರ ನಿರ್ಮಿಸಿ ಅಚಾತುರ್ಯ ತೋರಿದರು. ಎಎಸ್‌ಐ ಆಕ್ಷೇಪ ವ್ಯಕ್ತಪಡಿಸಿದ ನಂತರ ಗಟಾರ ನೆಲಸಮಗೊಳಿಸಿ ಬೇರೆ ಕಡೆಗೆ ನಿರ್ಮಿಸಿದರು.

‘ಐತಿಹಾಸಿಕ ಸ್ಮಾರಕದ ಬಗ್ಗೆ ನಗರಸಭೆ ಹಾಗೂ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಜಿಲ್ಲಾಧಿಕಾರಿಗೆ ಸ್ಪಷ್ಟ ಚಿತ್ರಣ ಕೊಡಲೇ ಇಲ್ಲ. ಬದಲಿಗೆ ಎಎಸ್‌ಐ ಅಧಿಕಾರಿಗಳೇ ಅಭಿವೃದ್ಧಿ ಕಾರ್ಯಕ್ಕೆ ತಡೆ ಒಡ್ಡುತ್ತಿದ್ದಾರೆ ಎನ್ನುವ ರೀತಿಯಲ್ಲಿ ಬಿಂಬಿಸಿದರು. ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ಕೊಟ್ಟು ಸತ್ಯವನ್ನು ಒರೆಗೆ ಹಚ್ಚುವ ದಿಸೆಯಲ್ಲಿ ಆಸಕ್ತಿ ತೋರಿಸಲಿಲ್ಲ. ಹೀಗಾಗಿ ಸ್ಮಾರಕ ಇಂದಿಗೂ ಪಾಳು ಬಿದ್ದಿದೆ’ ಎನ್ನುತ್ತಾರೆ ಜನರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT