ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ನಿದ್ದೆಗೆಡಿಸಿದ್ದ ಕೋಡಗ ಸೆರೆ; ಆರು ಜನರಿಗೆ ಕಚ್ಚಿ ಗಾಯಗೊಳಿಸಿದ ಕೋತಿ

Last Updated 4 ಅಕ್ಟೋಬರ್ 2021, 11:41 IST
ಅಕ್ಷರ ಗಾತ್ರ


ಬೀದರ್‌: ಹದಿನೈದು ದಿನಗಳಿಂದ ಮಹಿಳೆಯರು ಮಕ್ಕಳ ಮೇಲೆ ದಾಳಿ ಮಾಡಿ ಮಾಂಸ ಕಿತ್ತು ಬರುವಂತೆ ಕಚ್ಚಿ ನಗರದ ಜನತೆಯ ನಿದ್ದೆ ಗೆಡಿಸಿದ್ದ ಹುಚ್ಚು ಕೋತಿ ಕೊನೆಗೂ ಸೋಮವಾರ ಅರಣ್ಯ ಇಲಾಖೆ ಸಿಬ್ಬಂದಿಗೆ ಸೆರೆ ಸಿಕ್ಕಿದೆ.

ನಗರದ ಜ್ಯೋತಿ ಕಾಲೊನಿ, ಎಸ್‌ಬಿಎಚ್‌ ಕಾಲೊನಿ, ನಂದಿ ಕಾಲೊನಿ, ಹೂವಿಗೇರಿ ಹಾಗೂ ಬ್ರಿಮ್ಸ್‌ ಹಾಸ್ಟೆಲ್‌ ಆವರಣದಲ್ಲಿ ಕೋತಿ ಅನೇಕ ಜನರ ಮೇಲೆ ದಾಳಿ ನಡೆಸಿ ಕಚ್ಚಿದೆ. ಜ್ಯೋತಿ ಕಾಲೊನಿಯ ಅರ್ಚನಾ ಪ್ರಕಾಶ ಹಾಗೂ ಹೂಗೇರಿಯ ಸಾರಿಕಾ ಸಂಜುಕುಮಾರ ಕೈ ಹಾಗೂ ತೊಡೆಗೆ ಬಲವಾಗಿ ಕಚ್ಚಿದ್ದು, ಮಾಂಸ ಕಿತ್ತು ಬಂದಿದೆ. ಬಾಲಕಿಯರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬ್ರಿಮ್ಸ್‌ ಹಾಸ್ಟೆಲ್‌ ಆವರಣದಲ್ಲಿ ಬಟ್ಟೆ ತೊಳೆಯುತ್ತಿದ್ದ ಮಹಿಳೆಯ ಮೇಲೆ ಕೋತಿ ಹಿಂದಿನಿಂದ ದಾಳಿ ನಡೆಸಿ, ಕೈಗೆ ಬಲವಾಗಿ ಕಚ್ಚಿದೆ. ಜ್ಯೋತಿ ಕಾಲೊನಿ ಹಾಗೂ ಹೂಗೇರಿಯಲ್ಲಿ ಬಾಲಕಿಯ ಕೈಗಳಿಗೆ ಜೋರಾಗಿ ಕಚ್ಚಿದ ಕಾರಣ ಮಾಂಸಖಂಡಗಳು ಕಾಣುತ್ತಿವೆ. ಇನ್ನೊಬ್ಬಳು ಬಾಲಕಿಯ ತೊಡೆಯ ಚರ್ಚ ಹರಿದು ಹಾಕಿದೆ.

ಮಕ್ಕಳ ಮೇಲೆ ದಾಳಿ ಇಡುತ್ತಿರುವುದನ್ನು ಕಂಡು ಅನೇಕ ಜನ ದೊಣ್ಣೆಗಳನ್ನು ಹಿಡಿದು ಹೊಡೆಯಲು ಪ್ರಯತ್ನಿಸಿದ್ದಾರೆ. ಆದರೆ, ಅದು ಯಾರ ಕೈಗೂ ಸಿಕ್ಕಿರಲಿಲ್ಲ. ಬೆಳಿಗ್ಗೆ ಹಾಗೂ ಸಂಜೆಯ ವೇಳೆ ದಾಳಿ ನಡೆಸುತ್ತಿತ್ತು. ಜನ ಮನೆಗಳಿಂದ ಹೊರಗೆ ಬರಲು ಭಯಪಡುತ್ತಿದ್ದರು. ಮಕ್ಕಳು ಮನೆಯಂಗಳದಲ್ಲಿ ಆಟ ಆಡುವುದನ್ನೂ ನಿಲ್ಲಿಸಿದ್ದರು.

ಹೂಗೇರಿಯ ನಿವಾಸಿಗಳು ಅರಣ್ಯ ಇಲಾಖೆ ಕಚೇರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದರು. ಆದರೆ, ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿರಲಿಲ್ಲ. ಕೋತಿ ಸೋಮವಾರ ಮತ್ತೆ ಇಬ್ಬರು ಬಾಲಕಿಯರ ಮೇಲೆ ದಾಳಿ ನಡೆಸಿದ ನಂತರ ಅರಣ್ಯ ಇಲಾಖೆಯ ಸಿಬ್ಬಂದಿ ಜ್ಯೋತಿ ಕಾಲೊನಿಯ ಮನೆಯೊಂದರ ಮೇಲೆ ಬಲೆ ಇಟ್ಟು ಅದನ್ನು ಹಿಡಿದಿದ್ದಾರೆ.

ಹುಚ್ಚು ಕೋತಿ ಮನೆಗಳ ಮೇಲಿರುವ ಸಿಂಟೆಕ್ಸ್‌ಗಳ ಮೇಲಿನ ಮುಚ್ಚಳ ಎಸೆದು ಬೀಸಾಡಿದೆ. ಕೆಲ ಮನೆಗಳ ಪೈಪ್‌ಲೈನ್ ಹಾಗೂ ಸೆಫ್ಟಿಟ್ಯಾಂಕ್‌ ಪೈಪ್‌ಗಳನ್ನು ಹಾಳು ಮಾಡಿದೆ. ಅರಣ್ಯ ಇಲಾಖೆ ಸಿಬ್ಬಂದಿ ಪ್ರಯಾಸಪಟ್ಟು ಕೋತಿಯನ್ನು ಹಿಡಿದು ಅರವಳಿಕೆ ಔಷಧಿ ನೀಡಿ ಚಿಕಿತ್ಸೆಗೆ ಪಶು ಮಹಾವಿದ್ಯಾಲಯಕ್ಕೆ ಕಳಿಸಿದ್ದಾರೆ.

ಕೋತಿಯನ್ನು ಹಿಡಿಯಲು ಡಿಎಫ್‌ಒ ಶಿವಶಂಕರ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ರವಿ ರೂಪಸಿಂಗ್, ಆರ್‌ಎಫ್‌ಒ ಪ್ರವೀಣಕುಮಾರ, ಶಿವಕುಮಾರ ರಾಠೋಡ್ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು.. ಡಿಎಫ್‌ಒ ಶಿವಶಂಕರ ಕೋಡಂಗಿ ಕಚ್ಚಿದ ಬಾಲಕಿಯರಿಗೆ ಧೈರ್ಯ ತುಂಬಿದರು.

‘ಜ್ಯೋತಿ ಕಾಲೊನಿಯಲ್ಲಿ ಕಪ್ಪು ಕೋತಿಗಳ ಹಾವಳಿ ಹೆಚ್ಚಾಗಿದೆ. ಒಂದು ಗುಂಪಿನಲ್ಲಿ ಆರು ಮಂಗಗಳಿವೆ. ಇವು ದಾರಿ ಹೋಕರ ಮೇಲೂ ದಾಳಿ ಇಡುತ್ತಿವೆ. ನಗರಸಭೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಎಲ್ಲ ಕೋತಿಗಳನ್ನು ಹಿಡಿದು ದೂರದ ಕಾಡಿನಲ್ಲಿ ಬಿಟ್ಟು ಬರಬೇಕು’ ಎಂದು ಪಾಲಕರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT