ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜನವಾಡ | ದಾಂಪತ್ಯಕ್ಕೆ ಕಾಲಿಟ್ಟ 138 ಜೋಡಿಗಳು

ಆಣದೂರಿನ ಬುದ್ಧ ವಿಹಾರದಲ್ಲಿ ಸರಳ ಸಮಾರಂಭ
Published : 4 ಆಗಸ್ಟ್ 2024, 15:21 IST
Last Updated : 4 ಆಗಸ್ಟ್ 2024, 15:21 IST
ಫಾಲೋ ಮಾಡಿ
Comments

ಆಣದೂರ(ಜನವಾಡ): ಬೀದರ್ ತಾಲ್ಲೂಕಿನ ಆಣದೂರಿನ ಬುದ್ಧ ವಿಹಾರದಲ್ಲಿ ಭಾನುವಾರ ಆಯೋಜಿಸಿದ್ದ ಸರಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ 138 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಜಿಲ್ಲೆಯ ವಿವಿಧೆಡೆಯ ಜೋಡಿಗಳು ಪರಸ್ಪರ ಹಾರ ಬದಲಾಯಿಸಿಕೊಂಡು ಸತಿ-ಪತಿಗಳಾದರು. ಭಂತೆ ಧಮ್ಮಾನಂದ ಮಹಾಥೆರೋ ಅವರು ಮದುವೆ ವಿಧಿ, ವಿಧಾನಗಳನ್ನು ನಡೆಸಿಕೊಟ್ಟರು.

ಸರಳ ವಿವಾಹ ಅಗತ್ಯ: ‘ಪ್ರಸ್ತುತ ಅರ್ಥಪೂರ್ಣ ಹಾಗೂ ಸರಳ ವಿವಾಹಗಳ ಆಯೋಜನೆ ಅಗತ್ಯವಿದೆ’ ಎಂದು ಮದುವೆ ಸಮಾರಂಭವನ್ನು ಉದ್ಘಾಟಿಸಿದ ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಹೇಳಿದರು.

‘ಈಚಿನ ದಿನಗಳ ಆಡಂಬರದ ಮದುವೆಗಳು ನಡೆಯುತ್ತಿವೆ. ಮದುವೆ ಸಮಾರಂಭ ಇತರರಿಗಿಂತ ಅದ್ದೂರಿಯಾಗಿ ಆಯೋಜಿಸುವ ಹಾಗೂ ದುಂದು ವೆಚ್ಚ ಮಾಡುವ ಪ್ರವೃತ್ತಿ ಬೆಳೆಯುತ್ತಿದೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗಳು ಪರಸ್ಪರ ಅರ್ಥ ಮಾಡಿಕೊಂಡು ಬದುಕು ಸಾಗಿಸಬೇಕು. ಹಾಗಾದಲ್ಲಿ ದಾಂಪತ್ಯ ಜೀವನ ಸುಖಮಯ ಆಗಿರುತ್ತದೆ’ ಎಂದು ಕಿವಿಮಾತು ಹೇಳಿದರು.

ಬುದ್ಧ ಬೆಳಕು ಟ್ರಸ್ಟ್ ಅಧ್ಯಕ್ಷ ಮಹೇಶ ಗೋರನಾಳಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕರ್ನಾಟಕ ವನ್ಯಜೀವಿ ಮಂಡಳಿ ಸದಸ್ಯ ವಿನಯ್ ಮಾಳಗೆ, ಉದ್ಯಮಿ ದೀಪಕ್ ದಿಲ್ಲೆ, ನಗರಸಭೆ ಸದಸ್ಯ ಸೂರ್ಯಕಾಂತ ಸಾಧುರೆ ಅವರನ್ನು ಸನ್ಮಾನಿಸಲಾಯಿತು.

ಜ್ಞಾನ ಉದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕಾಶೀನಾಥ ಚಲ್ವಾ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ, ಕೊಳಾರ ಗ್ರಾಮ ಪಂಚಾಯಿತಿ ಸದಸ್ಯರಾದ ವಿಜಯಕುಮಾರ ಭಾವಿಕಟ್ಟಿ, ಸಂತೋಷ ಬಕ್ಕಚೌಡಿ, ಬೌದ್ಧ ಆಚಾರ್ಯ ಶಂಭುಲಿಂಗ ಬಾನೆ, ಬುದ್ಧ ಬೆಳಕು ಟ್ರಸ್ಟ್ ಕಾರ್ಯದರ್ಶಿ ಕಲ್ಪನಾ ಗೋರನಾಳಕರ್, ಶರಣು ಫುಲೆ, ರಮೇಶ ಮಾಲೆ, ನೀಲಕಂಠ ಕಾಂಬಳೆ ಇದ್ದರು.

ಆಯೋಜಕರ ವತಿಯಿಂದ ಮದುವೆಯಲ್ಲಿ ಪಾಲ್ಗೊಂಡವರಿಗೆ ಜಿಲೇಬಿ, ಅನ್ನ ಹಾಗೂ ಸಾಂಬಾರು ಊಟದ ವ್ಯವಸ್ಥೆ ಮಾಡಲಾಗಿತ್ತು.

ಇದೇ ವೇಳೆ ಜಿಲ್ಲಾಮಟ್ಟದ ಜಾನಪದ ಸಂಭ್ರಮವೂ ನಡೆಯಿತು. ಕಲಾವಿದರಾದ ಶಂಕರ ಜೊಂಡಿ ಹಾಗೂ ದೇವಿದಾಸ ಚಿಮಕೋಡೆ ಜಾನಪದ ಗೀತೆ ಹಾಡಿ ನೆರೆದವರನ್ನು ರಂಜಿಸಿದರು.

ಸಂವಿಧಾನದ ಅಮೃತ ಮಹೋತ್ಸವ, ಬುದ್ಧ, ಬಸವ ಹಾಗೂ ಅಂಬೇಡ್ಕರ್ ಜಯಂತ್ಯುತ್ಸವ ನಿಮಿತ್ತ ಬುದ್ಧ ಬೆಳಕು ಟ್ರಸ್ಟ್, ಸಂವಿಧಾನ ಜಾಗೃತಿ ವೇದಿಕೆ ಹಾಗೂ ಬುದ್ಧ, ಬಸವ, ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಕಾರ್ಯಕ್ರಮ ಸಂಘಟಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT