ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾಲ್ಕು ಸಾವಿರ ಅರ್ಜಿಗಳ ವಿಲೇವಾರಿ ಮಾಡಿ’

ವಿವಿಧ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೂಚನೆ
Last Updated 27 ಜೂನ್ 2019, 20:09 IST
ಅಕ್ಷರ ಗಾತ್ರ

ಬೀದರ್‌: ‘ಜನತಾ ದರ್ಶನದಲ್ಲಿ ಸಾರ್ವಜನಿಕರಿಂದ ಒಟ್ಟು ನಾಲ್ಕು ಸಾವಿರ ಅರ್ಜಿಗಳು ಬಂದಿವೆ. ಅವುಗಳ ವಿಲೇವಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಬಸವಕಲ್ಯಾಣ ತಾಲ್ಲೂಕಿನ ಉಜಳಂಬದಲ್ಲಿ ಗುರುವಾರ ಜನತಾ ದರ್ಶನದ ಉದ್ಘಾಟನೆ ಕಾರ್ಯಕ್ರಮ
ದಲ್ಲಿ ಹಾಗೂ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಅಧಿಕಾರಿಗಳು ತಕ್ಷಣ ಕಾಲಮಿತಿಯೊಳಗೆ ಮನವಿಗಳಿಗೆ ಸ್ಪಂದಿಸಿ ಪರಿಹಾರ ಕಲ್ಪಿಸಬೇಕು. ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು. ಸರ್ಕಾರ ಮನವಿಗೆ ಸ್ಪಂದಿಸಿಲ್ಲ ಎನ್ನುವ ಭಾವನೆ ಜನರಿಗೆ ಬರಬಾರದು’ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

‘ಉಜಳಂಬ ಗ್ರಾಮದ ಅಭಿವೃದ್ಧಿಗೆ ₹ 32 ಕೋಟಿ, ತುಳಜಾಪುರದಲ್ಲಿ ಕರ್ನಾಟಕ ಭವನ ನಿರ್ಮಿಸಲು ₹ 5 ಕೋಟಿ ಹಾಗೂ ಬೀದರ್‌ನಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ₹ 1 ಕೋಟಿ ಬಿಡುಗಡೆ ಮಾಡಲಾಗುವುದು’ ಎಂದರು. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಘೋಷಣೆ ಮಾಡಿದರು.

‘ಈಗಾಗಲೇ ಉಜಳಂಬ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಜಿಲ್ಲೆಯಲ್ಲಿ ₹ 2,000 ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು ಆರಂಭವಾಗಿವೆ’ ಎಂದು ತಿಳಿಸಿದರು.

‘ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಅನುದಾನ, ಕಾರಂಜಾ ಮುಳುಗಡೆ ಸಂತ್ರಸ್ತರಿಗೆ ಪರಿಹಾರ ಕೊಡಲು ಕೂಲಂಕಷವಾಗಿ ಪರಿಶೀಲಿಸಲಾಗುವುದು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳಿಗೆ ₹ 800 ಕೋಟಿ ಒದಗಿಸಲಾಗಿದೆ. ಅನುಭವ ಮಂಟಪಕ್ಕೆ ಮುಂದಿನ ದಿನಗಳಲ್ಲಿ ಹಣ ಬಿಡುಗಡೆ ಮಾಡಲಾಗುವುದು. ಅಭಿವೃದ್ಧಿ ದೃಷ್ಟಿಯಿಂದ ಕೆಲವು ಅಧಿಕಾರಿಗಳನ್ನು ನಿಯೋಜಿಸಲಾಗುವುದು. ಅವರೇ ತೀರ್ಮಾನ ಮಾಡುವಂತೆ ಹೆಚ್ಚಿನ ಅಧಿಕಾರ ಕೊಡಲಾಗುವುದು’ ಎಂದು ತಿಳಿಸಿದರು.

‘ವಿಧಾನಸಭೆ ಕಲಾಪ ಮುಗಿದ ನಂತರ ಜುಲೈನಲ್ಲಿ ಕನಿಷ್ಠ ಎರಡು ಗ್ರಾಮಗಳಲ್ಲಿ ವಾಸ್ತವ್ಯ ಮಾಡುತ್ತೇನೆ. ಕಲಬುರ್ಗಿ ಜಿಲ್ಲೆಯಲ್ಲಿನ ಗ್ರಾಮ ವಾಸ್ತವ್ಯ ರದ್ದು ಮಾಡಿಲ್ಲ. ಜುಲೈ ಅಥವಾ ಆಗಸ್ಟ್‌ನಲ್ಲಿ ವಾಸ್ತವ್ಯ ಮಾಡುತ್ತೇನೆ. ನಾಲ್ಕು ತಿಂಗಳಲ್ಲಿ ಎಲ್ಲ ಜಿಲ್ಲೆಗಳಲ್ಲೂ ಗ್ರಾಮ ವಾಸ್ತವ್ಯ ಮಾಡಲಿದ್ದೇನೆ’ ಎಂದು ತಿಳಿಸಿದರು.‌

‘ಔರಾದ್‌ಕರ್‌ ವರದಿ ಜಾರಿಗೆ ಪೊಲೀಸ್‌ ಇಲಾಖೆಗೆ ಸೂಚನೆ ನೀಡಿದ್ದೇನೆ. ಕಾವೇರಿಯಿಂದ ನೀರು ಬಿಡುವುದು ನನ್ನ ಕೈಯಲ್ಲಿ ಇಲ್ಲ. ಕೆಆರ್‌ಎಸ್‌ಗೆ ಮುತ್ತಿಗೆ ಹಾಕಿದರೆ ಪ್ರಯೋಜನ ಇಲ್ಲ. ಪ್ರಾಧಿಕಾರಕ್ಕೆ ಮುತ್ತಿಗೆ ಹಾಕಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT