ಬೀದರ್: ‘ದೇಶದಲ್ಲಿ ವೈದ್ಯರ ಆಯುಷ್ಯ ಸರಾಸರಿ 60 ವರ್ಷಕ್ಕೆ ಕುಸಿತ ಕಂಡಿರುವುದು ತೀವ್ರ ಕಳವಳಕಾರಿ ವಿಷಯ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ನಗರದ ಬ್ರಿಮ್ಸ್‌ನಲ್ಲಿ ಶನಿವಾರ ಸಂಜೆ ನಡೆದ ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಶಾಖೆಯ 89ನೇ ವಾರ್ಷಿಕ ಸಮ್ಮೇಳನ ‘ಮೆಡಿಕಾನ್’ 2023ರ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ‘ವೈದ್ಯರು ಇಡೀ ದಿನ ಆಸ್ಪತ್ರೆ, ನಂತರ ಕ್ಲಿನಿಕ್‌ಗೆ ಹೋಗುತ್ತಾರೆ. ಮಧ್ಯದಲ್ಲಿ ಅದು, ಇದು ತಿನ್ನುತ್ತಾರೆ. ನಿದ್ರೆ ಸರಿ ಆಗುವುದಿಲ್ಲ. ಹೆಚ್ಚಿನ ಒತ್ತಡ ಇದೆ. ಇದು ಬಹಳ ಚಿಂತಾಜನಕ ವಿಷಯ. ವೈದ್ಯರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಉತ್ತಮ ವಾತಾವರಣದಲ್ಲಿ ಕೆಲಸ ನಿರ್ವಹಿಸಬೇಕು’ ಎಂದು ಹೇಳಿದರು.
‘ಆರೋಗ್ಯ ನಮ್ಮ ಕೈಯಲ್ಲಿಯೇ ಇದೆ. ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ದೇಶದ ಜನರ ಆಯುಷ್ಯ 32 ವರ್ಷ ಸರಾಸರಿ ಇತ್ತು. ಈಗ ಅದು 70 ವರ್ಷ ಆಗಿದೆ. ಸಾಂಕ್ರಾಮಿಕ ರೋಗಗಳಿಂದ ಹೆಚ್ಚಿನವರು ಸಾವನ್ನಪ್ಪುತ್ತಿದ್ದರು. ಈಗ ಆ ಪರಿಸ್ಥಿತಿ ಇಲ್ಲ. ಹೆಚ್ಚು ಸಾವುಗಳು ಸಂಭವಿಸುತ್ತಿರುವುದು ಹೃದಯಾಘಾತ, ಕ್ಯಾನ್ಸರ್, ಕಿಡ್ನಿ ಸಮಸ್ಯೆಯಿಂದ. ಅನುವಂಶೀಕ, ಜೀವನಶೈಲಿ, ಆಹಾರ ಪದ್ಧತಿ, ದೈಹಿಕ ಚಟುವಟಿಕೆಗಳು ಇಲ್ಲದಿರುವುದು, ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿರುವುದು ಪ್ರಮುಖ ಕಾರಣ ಎಂದರು.
ತಾಲ್ಲೂಕು ಆಸ್ಪತ್ರೆಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ಕೊಡಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷ ಸೌಕರ್ಯ ಕಲ್ಪಿಸಲು ತೀರ್ಮಾನಿಸಲಾಗಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆಗೆ ಅವಕಾಶ ಮಾಡಿಕೊಟ್ಟರೆ ಜನ ಬದುಕುತ್ತಾರೆ. ಅನೇಕ ಜನ ಮಾರ್ಗ ಮಧ್ಯದಲ್ಲಿಯೇ ಸಾವನ್ನಪ್ಪುತ್ತಾರೆ. ಅದು ತಪ್ಪುತ್ತದೆ. ಇಲಾಖೆಯಿಂದ ಹೊಸ ತಂತ್ರಜ್ಞಾನ, ಎಐ, ಟೆಲಿಮೆಡಿಸಿನ್, ಕ್ಲೌಡ್ ಬೇಸ್ಡ್ ಸರ್ವೀಸ್ ಕೊಡಲಾಗುವುದು. ಉತ್ತಮ ಗುಣಮಟ್ಟದ ಚಿಕಿತ್ಸೆ ಪ್ರಾಥಮಿಕ ಹಂತದವರೆಗೆ ಕೊಂಡೊಯ್ಯಲು ಶ್ರಮಿಸಲಾಗುತ್ತಿದೆ ಎಂದು ಹೇಳಿದರು.
ವೈದ್ಯರಿಗೆ ಆಗುತ್ತಿರುವ ಕಿರುಕುಳ, ಕೆಲಸದ ಅವಧಿಯಲ್ಲಿ ಆಗುತ್ತಿರುವ ಸಮಸ್ಯೆ, ಸರ್ಕಾರದ ನಿಯಮಗಳಿಂದ ತೊಂದರೆ ಆಗುತ್ತಿದ್ದರೆ ಪರಿಹಾರ ಕಂಡುಕೊಳ್ಳಲಾಗುವುದು. ಟ್ರೈಡ್ ಲೆಸನ್ಸ್, ಫೈರ್ ಪರ್ಮಿಷನ್ ಪಡೆಯಲು ತೊಂದರೆ ಆಗುತ್ತಿದ್ದು, ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ‘ವೈದ್ಯ ವೃತ್ತಿ ಅತ್ಯಂತ ಪವಿತ್ರವಾದುದು. ವೈದ್ಯೋ ನಾರಾಯಣ ಹರಿ ಎನ್ನುತ್ತಾರೆ. ಅದು ಸತ್ಯ ಕೂಡ ಹೌದು. ಇಡೀ ಜಗತ್ತು ಕೋವಿಡ್‌ನಿಂದ ತಲ್ಲಣಗೊಂಡಿತ್ತು. ಭಯದ ವಾತಾವರಣ ಸೃಷ್ಟಿಯಾಗಿತ್ತು. ಯಾವುದೇ ವ್ಯಾಕ್ಸಿನ್ ಇರಲಿಲ್ಲ. ಅಂತಹ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕೋವಿಡ್ ಯೋಧರಂತೆ ವೈದ್ಯರು, ವೈದ್ಯಕೀಯ ಸಿಬ್ಬಂದಿ ಚಿಕಿತ್ಸೆ ಕೊಟ್ಟು ಲಕ್ಷಾಂತರ ಜನರ ಜೀವ ಉಳಿಸಿದ್ದಾರೆ ಎಂದರು.
ಹಿಂದೆ 40–50 ವರ್ಷಗಳವರೆಗೆ ಹೃದಯ ಕಾಯಿಲೆ ಬರುತ್ತಿರಲಿಲ್ಲ. ಈಗ ಮಕ್ಕಳಿಗೆ, ಯುವಕರಿಗೆ ಬಿಪಿ, ಶುಗರ್, ಹೃದಯ ಕಾಯಿಲೆ ಬರುತ್ತಿವೆ. ಬುದ್ಧಿಮಾಂದ್ಯರಾಗಿ ಜನಿಸುತ್ತಿದ್ದಾರೆ. ನಮ್ಮ ಭಾಗದಲ್ಲಿ ಅಪೌಷ್ಟಿಕತೆ ಇದೆ. ಅದನ್ನು ಸರಿಪಡಿಸಲು ಏನು ಮಾಡಬೇಕಿದೆ. ಅದರ ಬಗ್ಗೆ ಚಿಂತಿಸಬೇಕು. ಜಿಲ್ಲೆಯಲ್ಲಿ 50ರಿಂದ 60 ಜನ ಹಾವು ಕಚ್ಚುವುದರಿಂದ ಸಾಯುತ್ತಿದ್ದಾರೆ. ಟೆಲಿಮೆಡಿಸಿನ್‌ನಿಂದ ಅನೇಕರ ಜೀವಗಳನ್ನು ಉಳಿಸಬಹುದು. ಐಎಂಎ ಅದಕ್ಕಾಗಿ ಶ್ರಮಿಸಬೇಕು. ಸರ್ಕಾರ ಕೂಡ ಎಲ್ಲಾ ರೀತಿಯ ಸಹಕಾರ ಕೊಡಲಿದೆ. ಬೆಂಗಳೂರಿನಲ್ಲಿ ಸಿಗುವ ಚಿಕಿತ್ಸೆ ಸೌಲಭ್ಯ ಬೀದರ್‌ನಲ್ಲಿ ಸಿಗುವಂತಾಗಬೇಕು. ಕಂದಕ ದೂರವಾಗಬೇಕು. ಅದಕ್ಕೆ ಸರ್ಕಾರ ಕೂಡ ಎಲ್ಲಾ ರೀತಿಯ ನೆರವು ನೀಡಲಿದೆ ಎಂದು ಭರವಸೆ ನೀಡಿದರು.
ಡಾ.ಯೋಗಾನಂದ ರೆಡ್ಡಿ, ಡಾ.ಆರ್.ವಿ.ಅಶೋಕನ್, ಡಾ.ಎಸ್.ಶ್ರೀನಿವಾಸ್, ಡಾ.ಶಿವಕುಮಾರ ಲಕ್ಕೋಳ್ ಇತರರು ಇದ್ದರು.
ನಕಲಿ ವೈದ್ಯರ ಹಾವಳಿ ತಡೆಗೆ ಕ್ರಮ: ‘ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ತಡೆಗೆ ದಿಟ್ಟ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ರಾಜ್ಯ ಶಾಖೆಯ ಅಧ್ಯಕ್ಷ ಡಾ.ಶಿವಕುಮಾರ ಲಕ್ಕೋಳ್ ತಿಳಿಸಿದರು. ಒಂದು ಅಂದಾಜಿನ ಪ್ರಕಾರ ರಾಜ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ವೈದ್ಯರಿದ್ದಾರೆ. ಇದರ ಜೊತೆಗೆ ಕ್ರಾಸ್ ಪತಿ ಮಿಕ್ಸೋ ಪತಿಗಳ ಸಂಖ್ಯೆ ಸೇರಿದರೆ ಬಹಳ ಹೆಚ್ಚಾಗುತ್ತದೆ. ನಕಲಿ ವೈದ್ಯರ ವಿರುದ್ಧ ಜಿಲ್ಲಾ ನ್ಯಾಯಾಲಯ ಶಿಸ್ತು ಕ್ರಮ ಜರುಗಿಸಲು ಕೋರಲಾಗುವುದು. ಐಎಂಎನಲ್ಲಿ ವೈದ್ಯರ ಸದಸ್ಯತ್ವ ಹೆಚ್ಚಿಸಲಾಗುವುದು ಎಂದು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.