ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್- ಔರಾದ್ ರಸ್ತೆಗೆ ಶಂಕುಸ್ಥಾಪನೆ; ‘ಎರಡು ದಶಕದ ಬೇಡಿಕೆಗೆ ಸ್ಪಂದನೆ’

Last Updated 20 ಡಿಸೆಂಬರ್ 2020, 5:04 IST
ಅಕ್ಷರ ಗಾತ್ರ

ಔರಾದ್: ‘ಬೀದರ್- ಔರಾದ್ ರಸ್ತೆ ಕಾಮಗಾರಿಗೆ ಚಾಲನೆ ಸಿಗುವ ಮೂಲಕ ಈ ಭಾಗದ ಜನರ ಎರಡು ದಶಕದ ಬೇಡಿಕೆಗೆ ಸ್ಪಂದನೆ ಸಿಕ್ಕಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಹೇಳಿದರು.

ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಶನಿವಾರ ದೆಹಲಿಯಿಂದ ರಾಜ್ಯಾದ್ಯಂತ ವಿವಿಧ ಹೆದ್ದಾರಿ ಕಾಮಗಾರಿಗಳಿಗೆ ವರ್ಚುವಲ್ ಶಿಲಾನ್ಯಾಸ ನೇರವರಿಸಿದ ನಂತರ ಪಟ್ಟಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ನಾನು 2008ರಲ್ಲಿ ಮೊದಲ ಬಾರಿಗೆ ಶಾಸಕ ಆದಾಗಿನಿಂದಲೂ ಈ ರಸ್ತೆ ನಿರ್ಮಾಣವಾಗಬೇಕು ಎಂದು ಪ್ರಯತ್ನ ಮಾಡುತ್ತಾ ಬಂದಿದ್ದೇನೆ. ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದ ಕಾರಣ ಆಗಲಿಲ್ಲ. ಭಗವಂತ ಖೂಬಾ ಅವರು ಸಂಸದರಾದ ನಂತರ ಹೆಚ್ಚಿನ ಭರವಸೆ ಮೂಡಿತು. ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮಾಡಲಾಯಿತು. ಈಗ ಇದು ₹ 336 ಕೋಟಿ ವೆಚ್ಚದ ದ್ವಿಪಥ ರಸ್ತೆ ಆಗಲಿದೆ. ಒಟ್ಟು 47.8 ಕಿ.ಮೀ. ಉದ್ದದ ಈ ರಸ್ತೆ ಎರಡು ವರ್ಷದಲ್ಲಿ ಪೂರ್ಣ ಆಗಲಿದೆ’ ಎಂದು ಹೇಳಿದರು.

‘ಯಾವುದೇ ಒಂದು ಪ್ರದೇಶ ಅಭಿವೃದ್ಧಿಯಾಗಬೇಕಾದರೆ ಅಲ್ಲಿ ನೀರು, ವಿದ್ಯುತ್, ರಸ್ತೆ ಮತ್ತು ರೈಲು ಮಾರ್ಗ ಅಗತ್ಯ. ಆದರೆ ಇಲ್ಲಿ ಈ ಸೌಲಭ್ಯ ಕೊರತೆಯಿಂದ ಅಭಿವೃದ್ಧಿ ಕಂಡಿಲ್ಲ. ಇದೇ ಮಾರ್ಗದಲ್ಲಿ ನಾಂದೇಡ್‌ವರೆಗೆ ಹೊಸ ರೈಲು ಮಾರ್ಗದ ಸರ್ವೆ ನಡೆಯುತ್ತಿದೆ. ಈ ಕೆಲಸ ಪೂರ್ಣಗೊಂಡರೆ ಈ ಭಾಗದ ಅಭಿವೃದ್ಧಿ ಪರ್ವ ಶುರುವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಈ ರಸ್ತೆ ಕಾಮಗಾರಿ ಕಳೆದ ವರ್ಷ ಆರಂಭವಾಗಬೇಕಿತ್ತು. ಆದರೆ ಗುತ್ತಿಗೆದಾರೊಬ್ಬರು ಕೋರ್ಟ್ ಮೆಟ್ಟಲು ಹತ್ತಿರುವುದರಿಂದ ವಿಳಂಬ ಆಗಿದೆ. ಈ ಅವಧಿಯಲ್ಲಿ ಹದಗೆಟ್ಟ ರಸ್ತೆಯಿಂದ ಪ್ರಯಾಣಿಕರು ಸಾಕಷ್ಟು ತೊಂದರೆ ಎದುರಿಸಿದ್ದಾರೆ. ಸದ್ಯ ದುರಸ್ತಿ ಕಾರ್ಯ ನಡೆಯುತ್ತಿದೆ.ಶಂಕುಸ್ಥಾಪನೆಯಾದ ರಸ್ತೆ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುವಂತೆ ಸದಾ ನಿಗಾ ವಹಿಸಲಾಗುವುದು’ ಎಂದು ತಿಳಿಸಿದರು.

ಜಿ.ಪಂ ಸದಸ್ಯ ಮಾರುತಿ ಚವಾಣ್, ಮಾಜಿ ಸದಸ್ಯ ಕಾಶಿನಾಥ ಜಾಧವ್, ಎಪಿಎಂಸಿ ಅಧ್ಯಕ್ಷ ರಮೇಶ ಉಪಾಸೆ, ಧುರೀಣ ಬಂಡೆಪ್ಪ ಕಂಟೆ, ರವಿ ಮೀಸೆ, ರಮೇಶ ದೇವಕತೆ, ಶರಣಪ್ಪ ಪಂಚಾಕ್ಷರಿ, ಪ್ರಕಾಶ ಘುಳೆ, ಸುರೇಶ ಭೋಸ್ಲೆ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಸಂತೋಷ ಪೋಕಲವಾರ, ಕೇರಬಾ ಪವಾರ, ರಾಮಶೆಟ್ಟಿ, ಅಶೋಕ ಅಲ್ಮಾಜೆ, ಶ್ರೀನಿವಾಸ ಖೂಬಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT